×
Ad

ಪೊಲೀಸರನ್ನು ಬಾನೆಟ್ ಮೇಲೆ 20 ಮೀಟರ್ ಎಳೆದೊಯ್ದ ಕಾರು; ಇಬ್ಬರು ಅಪ್ರಾಪ್ತರ ಬಂಧನ

Update: 2024-11-04 10:38 IST

Screengrab:X/@sumedhasharma86

ಹೊಸದಿಲ್ಲಿ: ಕಾರೊಂದು ಇಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳನ್ನು ಬಾನೆಟ್ ಮೇಲೆ 20 ಮೀಟರ್ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ANI ವರದಿ ಮಾಡಿದೆ.

ಟ್ರಾಫಿಕ್ ವಲಯ ಅಧಿಕಾರಿಗೆ ಕಾರು ಢಿಕ್ಕಿ ಹೊಡೆದಿದೆ ಎಂದು ಕಿಶನ್ಗಢ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಘಟನೆ ಬಳಿಕ ಮಾರುತಿ ಫ್ರಾಂಕ್ಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಿಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಗೊಂಡ ಇಬ್ಬರು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಎಎಸ್ಐ ಪ್ರಮೋದ್ ಅವರು ಈ ಕುರಿತು ಮಾಹಿತಿ ನೀಡಿದ್ದು, ನ. 2ರಂದು ಮುಖ್ಯ ಪೇದೆ ಸೈಲೇಶ್ ಅವರೊಂದಿಗೆ ಬೆರ್ ಸರಾಯ್ ಮಾರ್ಕೆಟ್ ರಸ್ತೆಯ ಬಳಿ ಕರ್ತವ್ಯದಲ್ಲಿದ್ದೆ. ರಾತ್ರಿ 7.45ರ ಸುಮಾರಿಗೆ ಕಾರೊಂದು ಸಿಗ್ನಲ್ ಬ್ರೇಕ್ ಮಾಡಿ ಮುನ್ನುಗ್ಗಿದೆ, ಕಾರನ್ನು ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸಿಲ್ಲ. ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಿದಾಗ ಚಾಲಕ ಓಡಿಹೋಗಲು ಪ್ರಯತ್ನಿಸಿ ಕಾರಿನ ಮೇಲೆ ನಮ್ಮನ್ನು 20 ಮೀಟರ್‌ ಗಳಷ್ಟು ದೂರಕ್ಕೆ ಎಳೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಸನ್ 109(1), 221, 132, 121(1), 3(5) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಢಿಕ್ಕಿಯಾದ ವಾಹನವನ್ನು ವಸಂತ್ ಕುಂಜ್‌ ನ ಜೈ ಭಗವಾನ್ ಎಂಬವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಅವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News