ಪತ್ರಕರ್ತ ರಿಜಾಝ್ ಸಿದ್ದೀಖ್ ವಿರುದ್ಧ ಯುಎಪಿಎ ಪ್ರಕರಣ ದಾಖಲು; ಮಹಾರಾಷ್ಟ್ರ ಎಟಿಎಸ್‌ಗೆ ತನಿಖೆ ಹಸ್ತಾಂತರ
ರಿಜಾಝ್ ಎಂ. ಶೀಬಾ ಸಿದ್ದೀಖ್ (Photo credit: instagram)
ಮುಂಬೈ: ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಪ್ರಸ್ತುತ ಪೋಲಿಸರ ವಶದಲ್ಲಿರುವ ಕೇರಳ ಮೂಲದ ಸ್ವತಂತ್ರ ಪತ್ರಕರ್ತ ರಿಜಾಝ್ ಎಂ. ಶೀಬಾ ಸಿದ್ದೀಖ್ ವಿರುದ್ಧದ ಪ್ರಕರಣಗಳ ತನಿಖೆಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ವಹಿಸಿಕೊಂಡಿದೆ. ಮೇ 15ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಸಿದ್ದೀಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ( ತಡೆ) ಕಾಯ್ದೆ(ಯುಎಪಿಎ)ಯ ಕಲಂ 38 ಮತ್ತು 39ರಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಎಟಿಎಸ್ ನ್ಯಾಯಾಲಯಕ್ಕೆ ತಿಳಿಸಿತ್ತು ಎಂದು thenewsminute.com ವರದಿ ಮಾಡಿದೆ.
ಸಿದ್ದೀಖ್ ಹಿಜ್ಬುಲ್ ಮುಜಾಹಿದೀನ್, ಜಮ್ಮುಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್‌ಎಫ್) ಮತ್ತು ಸಿಪಿಐ(ಮಾವೋವಾದಿ) ಸೇರಿದಂತೆ ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ವರದಿ ಮಾಡುವಲ್ಲಿ ಮುಂಚೂಣಿಯಲ್ಲಿರುವ ಹಾಗೂ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಅಸೋಸಿಯೇಷನ್ ಜೊತೆ ಗುರುತಿಸಿಕೊಂಡಿರುವ ಸಿದ್ದೀಕ್‌ರನ್ನು ನಾಗ್ಪುರದ ಲಕಡ್‌ಗಂಜ್ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಮೇ 7ರಂದು ಬಂಧಿಸಲಾಗಿತ್ತು. ಅವರ ವಿರುದ್ಧ ಸೇನಾ ವಿರೋಧಿ ಘೋಷಣೆಗಳನ್ನು ಕೂಗಿದ ಮತ್ತು ನಿಷೇಧಿತ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಗಳನ್ನು ಹೊರಿಸಲಾಗಿದೆ. ಎಫ್‌ಐಆರ್‌ನಲ್ಲಿ ಅವರನ್ನು ಶಂಕಿತ ಸಿಪಿಐ(ಮಾವೋವಾದಿ) ಸದಸ್ಯ ಎಂದೂ ಉಲ್ಲೇಖಿಸಲಾಗಿದೆ.
ಸಿದ್ದೀಕ್ ಬಂದೂಕುಗಳನ್ನು ನಿರ್ವಹಿಸುತ್ತಿರುವ ಛಾಯಾಚಿತ್ರ ಪುರಾವೆಗಳೂ ತಮ್ಮ ಬಳಿಯಿವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಸಿದ್ದೀಖ್ ಬಿಎನ್‌ಎಸ್‌ನ ವಿವಿಧ ಕಲಮ್‌ಗಳು ಹಾಗೂ ಮಾಹಿತಿ ಮತ್ತು ಗುಪ್ತಚರ ಕಾಯ್ದೆಯ ಕಲಂ 67ರಡಿ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ.
ಸಿದ್ದೀಖ್ ತನಿಖೆಯನ್ನು ಮಂದುವರಿಸಲು 10 ದಿನಗಳ ಪೋಲಿಸ್ ಕಸ್ಟಡಿಯನ್ನು ಪ್ರಾಸಿಕ್ಯೂಷನ್ ಕೋರಿತ್ತು. ಆದರೆ ಮೇ 11ರಂದು ಕೇರಳದಿಂದ ಸಂಗ್ರಹಿಸಲಾದ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ ದಾಖಲೆಗಳು ಮತ್ತು ಮಹಜರು ವರದಿಯನ್ನು ಸಲ್ಲಿಸಲು ವಿಫಲಗೊಂಡಿದ್ದಕ್ಕಾಗಿ ಮಹಾರಾಷ್ಟ್ರ ಪೋಲಿಸರನ್ನು ಟೀಕಿಸಿದ ಎನ್‌ಐಎ ನ್ಯಾಯಾಲಯವು ಮೇ 18ರವರೆಗೆ ಕಸ್ಟಡಿಯನ್ನು ವಿಧಿಸಿದೆ.
ಕೇರಳ ವಿವಿಯಿಂದ ಸಮಾಜ ಕಾರ್ಯದಲ್ಲಿ ಸಿದ್ದೀಖ್ ಪದವಿ ಪಡೆದಿದ್ದಾರೆ. ಅವರ ಪತ್ರಿಕೋದ್ಯಮವು ಹೆಚ್ಚಾಗಿ ಪೋಲಿಸ್ ದೌರ್ಜನ್ಯ, ವ್ಯವಸ್ಥಿತ ತಾರತಮ್ಯ ಮತ್ತು ಭಾರತದಲ್ಲಿಯ ಕೈದಿಗಳ ದುಃಸ್ಥಿತಿಯನ್ನು ಕೇಂದ್ರೀಕರಿಸಿದೆ.
ಆರಂಭದಲ್ಲಿ ಪ್ರಕರಣವನ್ನು ನಿರ್ವಹಿಸಿದ್ದ ನಾಗ್ಪುರ ಪೋಲಿಸರು ಕೇರಳದಲ್ಲಿ ಸಿದ್ದೀಖ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.