ರಾಜಸ್ಥಾನ | ಕಾಲೇಜು ಸಿಬ್ಬಂದಿಯಿಂದ ಕಿರುಕುಳ ಆರೋಪಿಸಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ : ಭುಗಿಲೆದ್ದ ಪ್ರತಿಭಟನೆ
Screengrab:X/@Indian__doctor
ಉದಯಪುರ : ರಾಜಸ್ಥಾನದ ಪೆಸಿಫಿಕ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿಯೋರ್ವರು ಕಾಲೇಜು ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಲೇಜಿನ ಇಬ್ಬರು ಆಡಳಿತ ಸಿಬ್ಬಂದಿ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದ್ದು, ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ಜಮ್ಮುಕಾಶ್ಮೀರದ ಪೊಲೀಸ್ ಕಾನ್ಸ್ಟೆಬಲ್ ಓರ್ವರ ಪುತ್ರಿಯಾಗಿರುವ ಬಿಡಿಎಸ್ ವಿದ್ಯಾರ್ಥಿನಿ ಶ್ವೇತಾ ಸಿಂಗ್ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ, ವಿದ್ಯಾರ್ಥಿನಿ ಬರೆದ ಡೆತ್ ನೋಟ್‌ನಲ್ಲಿ ಕಾಲೇಜು ಸಿಬ್ಬಂದಿಗಳು ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯು ಗುರಿಯಾಗಿಸಿಕೊಂಡಿದೆ ಎಂದು ವಿದ್ಯಾರ್ಥಿನಿಯು ಆರೋಪಿಸಿದ್ದರು.
ಘಟನೆಯ ನಂತರ ವಿದ್ಯಾರ್ಥಿಗಳು ಕಾಲೇಜು ಬಳಿ ಪ್ರತಿಭಟನೆ ನಡೆಸುತ್ತಿರುವ ವೀಡಿಯೊ ವೈರಲ್ ಆಗಿದೆ. ಶುಕ್ರವಾರ ಬೆಳಿಗ್ಗೆ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಜಮಾಯಿಸಿ, ಘೋಷಣೆಗಳನ್ನು ಕೂಗುತ್ತಾ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಂದ ನಿರಂತರವಾಗಿ ಹಣವನ್ನು ಕೇಳುತ್ತಿದೆ ಎಂದು ಆರೋಪಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.