×
Ad

ಉನ್ನಾವೋ ಅತ್ಯಾಚಾರ ಪ್ರಕರಣ | ಪ್ರತಿಭಟನೆಯ ವೇಳೆ ಸಂತ್ರಸ್ತೆಯ ಪರ–ವಿರೋಧಿ ಗುಂಪುಗಳ ನಡುವೆ ಮಾತಿನ ಚಕಮಕಿ

Update: 2025-12-29 07:30 IST

PC: ANI

ಹೊಸದಿಲ್ಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದವರೂ ಹಾಗೂ ಅತ್ಯಾಚಾರ ಪ್ರಕರಣದ ಅಪರಾಧಿ ಮತ್ತು ಬಿಜೆಪಿಯ ಉಚ್ಚಾಟಿತ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಬೆಂಬಲಿಗರು ರವಿವಾರ ದಿಲ್ಲಿಯಲ್ಲಿ ಮುಖಾಮುಖಿಯಾದರು. ಸೆಂಗಾರ್‌ ಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನಾ ಸ್ಥಳದಲ್ಲಿ ‘ಪುರುಷ್ ಆಯೋಗ್’ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟ ಗುಂಪಿನವರು ಸೆಂಗಾರ್ ಪರ ಘೋಷಣೆ ಕೂಗಿದರು. ಗುಂಪಿನಲ್ಲಿದ್ದ ಮಹಿಳೆಯೊಬ್ಬರು ‘ನಾನು ಕುಲದೀಪ್ ಸಿಂಗ್ ಸೆಂಗಾರ್‌ ಗೆ ಬೆಂಬಲ ನೀಡುತ್ತೇನೆ’ ಎಂದು ಬರೆದ ಪೋಸ್ಟರ್ ಹಿಡಿದುಕೊಂಡಿದ್ದು, “ನಾನು ನ್ಯಾಯಕ್ಕಾಗಿ ಬಂದಿದ್ದೇನೆ. ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದರು. ಇದರಿಂದ ಕೆರಳಿದ ಸಂತ್ರಸ್ತೆಯ ಪರ ಪ್ರತಿಭಟನಾಕಾರರು, “ಇದು ತಪ್ಪು. ನಿಮಗೆ ನಾಚಿಕೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು. “ಸೆಂಗಾರ್ ಅಪರಾಧ ಮಾಡಿಲ್ಲ ಎಂಬುದಕ್ಕೆ ಯಾವ ಪುರಾವೆ ಇದೆ? ನ್ಯಾಯಾಲಯವೇ ಸೆಂಗಾರ್ ದೋಷಿ ಎಂದು ಘೋಷಿಸಿದೆ” ಎಂಬ ಘೋಷಣೆಗಳು ಮೊಳಗಿದವು.

ಈ ಬೆಳವಣಿಗೆಯ ನಡುವೆ, ಸೆಂಗಾರ್‌ ಗೆ ನೀಡಿದ್ದ ಜಾಮೀನನ್ನು ಅಮಾನತುಗೊಳಿಸಿದ ದಿಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (CBI) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

2019ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಉತ್ತರ ಪ್ರದೇಶದ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನನ್ನು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ಹಾಗೂ 25 ಲಕ್ಷ ರೂ. ದಂಡ ವಿಧಿಸಿತ್ತು. ಈ ಹಿಂದೆ ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದ ಹತ್ಯೆ ಪ್ರಕರಣದಲ್ಲೂ ಸೆಂಗಾರ್ ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟ್ ತನಗೆ ನ್ಯಾಯ ನೀಡುತ್ತದೆ ಎಂಬ ವಿಶ್ವಾಸವನ್ನು ಸಂತ್ರಸ್ತೆ ವ್ಯಕ್ತಪಡಿಸಿದ್ದು, “ನಾನು ಪ್ರತಿಯೊಬ್ಬ ಮಹಿಳೆಯ ಪರವಾಗಿ ಧ್ವನಿ ಎತ್ತುತ್ತಿದ್ದೇನೆ. ನನ್ನ ಕುಟುಂಬದ ಮೇಲೆ ನಡೆದ ದೌರ್ಜನ್ಯಗಳಿಗೆ ನ್ಯಾಯ ಸಿಗಬೇಕಿದೆ” ಎಂದು ಹೇಳಿದರು. ಕುಟುಂಬದ ಸದಸ್ಯರು ಮತ್ತು ಸಾಕ್ಷಿಗಳಿಗೆ ಭದ್ರತೆ ಇಲ್ಲದಿರುವುದು, ಪತಿಯ ಉದ್ಯೋಗ ಕಳೆದುಹೋದ ಸ್ಥಿತಿ ಹಾಗೂ ಮಕ್ಕಳ ಅಸುರಕ್ಷತೆ ಕುರಿತು ಅವರು ಕಳವಳ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News