ತಮಿಳುನಾಡು | ದಲಿತರು ಪ್ರವೇಶಿಸದಂತೆ ಕಟ್ಟಿದ ‘ಅಸ್ಪೃಶ್ಯತೆಯ ಗೋಡೆ’ ಧ್ವಂಸ
ಕರೂರಿನಲ್ಲಿ ಸರಕಾರದ ಒತ್ತಡಕ್ಕೆ ಮಣಿದ ಸವರ್ಣೀಯರು
Photo Credit: thehindu
ಕರೂರ್,ಆ.10: ಒಬಿಸಿ ಪಂಗಡವಾದ ತೊಟ್ಟಿಯಾ ನಾಯ್ಕರ್ ಸಮುದಾಯಕ್ಕೆ ಸೇರಿದ ಜನರು ಕೊನೆಗೂ ಕಂದಾಯ ಇಲಾಖೆಯ ಒತ್ತಡಕ್ಕೆ ಮಣಿದು ಪರಿಶಿಷ್ಟ ಜಾತಿಯ ಅರುಂಥತಿಯಾರ್ ಜಾತಿಯವರ ಪ್ರವೇಶವನ್ನು ತಡೆಯಲು ನಿರ್ಮಿಸಿದ್ದ ‘ಅಸ್ಪೃಶ್ಯತೆಯ ಗೋಡೆಯನ್ನು ತಾವಾಗಿಯೇ ಕೆಡವಿ ಹಾಕಿದ ಘಟನೆ ತಮಿಳುನಾಡಿನ ಕರೂರ್ ಜಿಲ್ಲೆಯ ಮುದುಲಾಡಂಪಟ್ಟಿಯಲ್ಲಿ ವರದಿಯಾಗಿದೆ.
200 ಅಡಿ ವಿಸ್ತೀರ್ಣ ಹಾಗೂ 10 ಅಡಿ ಎತ್ತರದ ಈ ಗೋಡೆಯನ್ನು ಮೂರು ವಾರಗಳ ಹಿಂದೆ ಸರಕಾರಿ ಪರಂಬೋಕ್ ಜಮೀನಿನಲ್ಲಿ ಪರಿಶಿಷ್ಟ ಜಾತಿಯವರ ಪ್ರಬಲ ವಿರೋಧದ ನಡುವೆಯೇ ನಿರ್ಮಿಸಲಾಗಿತ್ತು. ಇದೊಂದು ಅಸ್ಪೃಶ್ಯತೆಯ ಗೋಡೆಯೆಂದುಪರಿಶಿಷ್ಟ ಅರುಂಥತಿಯಾರ್ ಸಮುದಾಯವು ಆರೋಪಿಸಿತ್ತು. ಈ ಗೋಡೆ ನಿರ್ಮಾಣವಾದಾಗಿನಿಂದ, ಅದು ಸವರ್ಣೀಯ ಹಿಂದುಗಳಾದ ತೊಟ್ಟಿಯಾ ನಾಯ್ಕರ್ ಹಾಗೂ ಪರಿಶಿಷ್ಟ ಜಾತಿಗಳವರ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು.
ಸವರ್ಣೀಯ ಹಿಂದೂಗಳು ವಾಸವಾಗಿರುವ ಪ್ರದೇಶಕ್ಕೆ ತಾವು ಪ್ರವೇಶಿಸುವುದನ್ನು ತಡೆಯುವ ಉದ್ದೇಶದಿಂದ ಈ ಗೋಡೆಯನ್ನು ನಿರ್ಮಿಸಲಾಗಿದೆಯೆಂದು ಪರಿಶಿಷ್ಟ ಜಾತಿಗಳವರು ಆಪಾದಿಸಿದ್ದರು. ಆದರೆ ಸವರ್ಣೀಯ ಹಿಂದೂಗಳು ಈ ಆರೋಪವನ್ನು ಅಲ್ಲಗಳೆದಿದ್ದರು. ಹೊರಗಿನ ವ್ಯಕ್ತಿಗಳು ಈ ಪ್ರದೇಶದಲ್ಲಿ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವುದನ್ನು ತಡೆಯುವುದಕ್ಕಾಗಿ ಈ ಗೋಡೆಯನ್ನು ನಿರ್ಮಿಸಲಾಗಿದೆಯೆಂದು ಅವರು ವಾದಿಸಿದ್ದರು.
Photo Credit: M. Moorthy - thehindu
ಆದರೆ ಕರೂರ್ ಪೊಲೀಸ್ ಅಧೀಕ್ಷಕ ಕೆ.ಜೋಸ್ ತಂಗಯ್ಯ ನೇತೃತ್ವದ ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿ ಶನಿವಾರ ಬೆಳಗ್ಗೆ ವಿವಾದಿತ ಸ್ಥಳದಲ್ಲಿ ಜಮಾವಣೆಗೊಂಡಾಗ, ಸವರ್ಣೀಯ ತೊಟ್ಟಿಯಾ ನಾಯ್ಕರ್ ಸಮುದಾಯದ ನಾಯಕರು ತಾವಾಗಿಯೇ ಗೋಡೆಯನ್ನು ಕೆಡವಲು ಮುಂದಾದರು. ಶನಿವಾರ ಮಧ್ಯಾಹ್ನದಿಂದ ಗೋಡೆಯನ್ನು ಕೆಡವಲು ಆರಂಭಿಸಲಾಯಿತು. ಈ ಸಂದರ್ಭ ಮಾಧ್ಯಮಗಳು ಛಾಯಾಚಿತ್ರಗಳನ್ನು ತೆಗೆಯುವುದನ್ನು ನಿರ್ಬಂಧಿಸಲಾಗಿತ್ತು.
ಈ ಹಿಂದೆ ಪರಿಶಿಷ್ಟ ಅರುಂಥತಿಯಾರ್ ಜಾತಿಯವರು ಸರಕಾರಿ ಪರಂಬೋಕ್ ಜಮೀನಿನಲ್ಲಿ ಶ್ರೀಮುತ್ತುಮಾರಿಯಮ್ಮನ್ ದೇವಾಲಯದ ಉತ್ಸವದ ಸಂದರ್ಭ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆಯನ್ನು ಹಾಗೂ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವುದನ್ನು ಸವರ್ಣೀಯ ಹಿಂದೂಗಳು ತಡೆದಿದ್ದರೆನ್ನಲಾಗಿದೆ.
ಈ ವಿವಾದಿತ ಗೋಡೆಯನ್ನು ನಿರ್ಮಿಸಿರುವುದರ ವಿರುದ್ಧ ಕಂದಾಯ ಇಲಾಖೆಯು, 15 ದಿನಗಳ ಹಿಂದೆ ತೊಟ್ಟಿಯಾ ನಾಯ್ಕರ್ ಪಂಗಡದ ಮುಖಂಡನಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ಸಮಾಜವಿರೋಧಿ ಶಕ್ತಿಗಳನ್ನು ತಡೆಯಲು ಈ ಗೋಡೆ ನಿರ್ಮಿಸಿರುವುದಾಗಿ ಆತ ಸಮಜಾಯಿಷಿ ನೀಡಿದ್ದ ಎನ್ನಲಾಗಿದೆ. ಕೊನೆಗೆ ಶುಕ್ರವಾರ ರಾತ್ರಿ ಕಂದಾಯ ಇಲಾಖೆ ಮತ್ತೊಂದು ನೋಟಿಸ್ ಜಾರಿಗೊಳಿಸಿ ಶನಿವಾರ 11 ಗಂಟೆಯೊಳಗೆ ಗೋಡೆಯನ್ನು ಒಡೆದುಹಾಕುವಂತೆ ಗಡುವನ್ನು ನೀಡಿತ್ತು.
ಸರಕಾರದ ನಡೆಯನ್ನು ಬಲವಾಗಿ ವಿರೋಧಿಸಿದ ಸವರ್ಣೀಯ ಹಿಂದೂಗಳು ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಆದರೆ ಗೋಡೆಯನ್ನು ಶನಿವಾರ ಕೆಡವಿಹಾಕಲಾಗುವುದೆಂದು ಕಂದಾಯ ಅಧಿಕಾರಿಗಳು ಖಡಾಖಂಡಿತವಾಗಿ ತಿಳಿಸಿದಾಗ ಪ್ರತಿಭಟನಾ ನಿರತರು ವಾಪಸಾಗಿದ್ದರು.
ವಿವಾದಿತ ಗೋಡೆಯನ್ನು ಸಂಪೂರ್ಣವಾಗಿ ಕೆಡವಲಾಗಿದೆಯೆಂದು ಕಂದಾಯ ಇಲಾಖೆಯ ವಿಭಾಗೀಯ ಅಧಿಕಾರಿ ಎಂ. ಮೊಹಮ್ಮದ್ ಬೈಸಾಲ್ ತಿಳಿಸಿದ್ದಾರೆ.