ಪೊಲೀಸ್ ಅಧಿಕಾರಿಯ ಕ್ಷೌರ ಮಾಡಲು ಮನೆಗೆ ತಲುಪಲು ವಿಳಂಬ | ಕ್ಷೌರಿಕನಿಗೆ ಲಾಕಪ್ ನಲ್ಲಿ ಕೂರುವ ಶಿಕ್ಷೆ!
ಸಾಂದರ್ಭಿಕ ಚಿತ್ರ
ಬುಡೌನ್: ಪೊಲೀಸ್ ಅಧಿಕಾರಿಯೋರ್ವರ ಕ್ಷೌರ ಮಾಡಲು, ಅವರ ಮನೆಗೆ ತಡವಾಗಿ ತಲುಪಿದ ಆರೋಪದ ಮೇಲೆ ಉತ್ತರ ಪ್ರದೇಶದ ಬುಡೌನ್ನ ಪೊಲೀಸ್ ಠಾಣೆಯೊಂದರಲ್ಲಿ ಲಾಕಪ್ನಲ್ಲಿ ಕೂರಿಸಲಾಗಿತ್ತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸರ್ಕಲ್ ಆಫೀಸರ್ (ಸಿಒ) ಸುನೀಲ್ ಕುಮಾರ್ ಅವರು ಕ್ಷೌರಿಕ ವಿನೋದ್ ಕುಮಾರ್ ಅವರನ್ನು ತಮ್ಮ ಮನೆಗೆ ಕ್ಷೌರ ಮಾಡಲು ಕರೆದಾಗ, ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಲಾಕಪ್ನಲ್ಲಿ ಕೂರುವ ಶಿಕ್ಷೆ ಅನುಭವಿಸಿದ ವಿನೋದ್ ಅವರ ಸಹೋದರ ಶಿವಕುಮಾರ್, "ವಿನೋದ್ ಇತರ ಗ್ರಾಹಕರ ಕ್ಷೌರ ಮುಗಿಸಿ, ಪೊಲೀಸ್ ಅಧಿಕಾರಿಯ ಮನೆ ತಲುಪಲು ಸ್ವಲ್ಪ ತಡವಾಯಿತು. ಕೆಲವು ಗಂಟೆಗಳ ನಂತರ ಪೊಲೀಸ್ ಸಿಬ್ಬಂದಿ ನಮ್ಮ ಅಂಗಡಿಗೆ ಬಂದರು. ಅಂಗಡಿ ಮುಚ್ಚಿಸಿದ ಅವರು ವಿನೋರ್ ರನ್ನು ಬಿಸೌಲಿ ಪೊಲೀಸ್ ಠಾಣೆಗೆ ಕರೆದೊಯ್ದು, ಬುಧವಾರ ಮಧ್ಯಾಹ್ನದವರೆಗೂ ಲಾಕಪ್ನಲ್ಲಿರಿಸಿದ್ದರು” ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ, ಘಟನೆಯು ತಮ್ಮ ಗಮನಕ್ಕೆ ಬಂದಿದ್ದು, ತನಿಖೆ ನಡೆಸುತ್ತಿದ್ದೇವೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.