ಉತ್ತರಪ್ರದೇಶ | ʼಮೋಟುʼ ಎಂದು ಕರೆದ ಇಬ್ಬರನ್ನು ಹೆದ್ದಾರಿಯಲ್ಲಿ ಬೆನ್ನಟ್ಟಿ ಗುಂಡಿಕ್ಕಿದ ದುಷ್ಕರ್ಮಿ
ಹೊಸದಿಲ್ಲಿ : ʼಮೋಟುʼ ಎಂದು ಕರೆದ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರನ್ನು ಹೆದ್ದಾರಿಯುದ್ದಕ್ಕೂ ಬೆನ್ನಟ್ಟಿ ಗುಂಡಿಕ್ಕಿದ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಅರ್ಜುನ್ ಚೌಹಾಣ್ ತನ್ನ ಮಾವನ ಜೊತೆ ದೇವಸ್ಥಾನದ ಬಳಿ ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದ. ಈ ವೇಳೆ ಆತನಿಗೆ ಅನಿಲ್ ಮತ್ತು ಶುಭಂ ಎಂಬವರು ಮೋಟು ಎಂದು ಟೀಕಿಸಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡ ಅರ್ಜುನ್ ಚೌಹಾಣ್ ಇಬ್ಬರನ್ನು ಹೆದ್ದಾರಿಯುದ್ದಕ್ಕೂ ಬೆನ್ನಟ್ಟಿ ಟೋಲ್ ಪ್ಲಾಝಾ ಬಳಿ ಕಾರನ್ನು ತಡೆದು ಗುಂಡಿಕ್ಕಿದ್ದಾನೆ.
ಗುಂಡೇಟಿನಿಂದ ಗಾಯಗೊಂಡ ಅನಿಲ್ ಚೌಹಾಣ್ ಮತ್ತು ಶುಭಂ ಚೌಹಾಣ್ ಅವರನ್ನು ಜಿಲ್ಲಾ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇಬ್ಬರೂ ಕೂಡ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಶುಭಂ ಚೌಹಾಣ್ ತಂದೆ ಖಜ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಜಿತೇಂದ್ರ ಕುಮಾರ್, ಅರ್ಜುನ್ ಚೌಹಾಣ್ ಮತ್ತು ಆತನ ಸ್ನೇಹಿತ ಆಸಿಫ್ ಖಾನ್ ತೆನುವಾ ಟೋಲ್ ಪ್ಲಾಝಾ ಬಳಿ ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸಿ ಇಬ್ಬರನ್ನು ಹೊರಗೆಳೆದು ಗುಂಡಿಕ್ಕಿ ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.