×
Ad

ಉರ್ದು ಕವಿ ಗುಲ್ಝಾರ್, ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ

Update: 2024-02-17 17:53 IST

ಜಗದ್ಗುರು ರಾಮಭದ್ರಾಚಾರ್ಯ | ಗುಲ್ಝಾರ್ : Photo PTI

ಹೊಸದಿಲ್ಲಿ : ಖ್ಯಾತ ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರನ್ನು 58ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜ್ಞಾನಪೀಠ ಆಯ್ಕೆ ಸಮಿತಿಯು ಶನಿವಾರ ಪ್ರಕಟಿಸಿದೆ.

ಗುಲ್ಜಾರ್ ಎಂದೇ ಜನಪ್ರಿಯರಾಗಿರುವ ಸಂಪೂರಣ ಸಿಂಗ್ ಕಾಲ್ರಾ ಅವರು ಹಿಂದಿ ಸಿನಿಮಾ ರಂಗದಲ್ಲಿ ತನ್ನ ಕೆಲಸಗಳಿಂದಾಗಿ ಪ್ರಸಿದ್ಧರಾಗಿದ್ದಾರೆ ಹಾಗೂ ಈ ಯುಗದ ಅತ್ತುತ್ತಮ ಉರ್ದು ಕವಿಗಳಲ್ಲಿ ಓರ್ವರಾಗಿ ಮನ್ನಣೆಯನ್ನು ಪಡೆದಿದ್ದಾರೆ.

ಚಿತ್ರಕೂಟದ ತುಳಸಿ ಪೀಠದ ಸ್ಥಾಪಕ ಹಾಗೂ ಮುಖ್ಯಸ್ಥರಾಗಿರುವ ರಾಮಭದ್ರಾಚಾರ್ಯ ಪ್ರಮುಖ ಹಿಂದು ಆಧ್ಯಾತ್ಮಿಕ ನಾಯಕ,ಶಿಕ್ಷಣ ತಜ್ಞ ಮತ್ತು ಲೇಖಕರಾಗಿದ್ದು, ನಾಲ್ಕು ಮಹಾಕಾವ್ಯಗಳು ಸೇರಿದಂತೆ 240ಕ್ಕೂ ಹೆಚ್ಚು ಪುಸ್ತಕಗಳು ಮತ್ತು ಪಠ್ಯಗಳನ್ನು ರಚಿಸಿದ್ದಾರೆ.

2002ರಲ್ಲಿ ಉರ್ದುಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013ರಲ್ಲಿ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಮತ್ತು 2004ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಗುಲ್ಜಾರ್, ಕನಿಷ್ಠ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

2009ರಲ್ಲಿ ಆಸ್ಕರ್ ಪ್ರಶಸ್ತಿ ಮತ್ತು 2010ರಲ್ಲಿ ಗ್ರಾಮಿ ಪ್ರಶಸ್ತಿಗೆ ಪಾತ್ರವಾಗಿರುವ ‘ಸ್ಲಮ್ಡಾಗ್ ಮಿಲಿಯನೇರ್ ’ಚಿತ್ರದ ‘ಜೈ ಹೋ’ ಮತ್ತು ಮಾಚಿಸ್ (1996),ಓಂಕಾರ (2006),ದಿಲ್ ಸೆ...(1998) ಮತ್ತು ಗುರು (2007) ದಂತಹ ವಿಮರ್ಶಕರ ಮೆಚ್ಚುಗೆ ಗಳಿಸಿರುವ ಚಿತ್ರಗಳಲ್ಲಿಯ ಹಾಡುಗಳು ಗುಲ್ಜಾರ್ ರಚನೆಗಳಲ್ಲಿ ಸೇರಿವೆ.

ಕೋಶಿಷ್ (1972),ಪರಿಚಯ್ (1972),ಇಜಾಜತ್ (1977) ನಂತಹ ಪ್ರಶಸ್ತಿ ಪುರಸ್ಕೃತ ಚಿತ್ರಗಳು ಮತ್ತು ಮಿರ್ಜಾ ಘಾಲಿಬ್ (1988) ಟಿವಿ ಸರಣಿಯನ್ನೂ ಗುಲ್ಜಾರ್ ನಿರ್ದೇಶಿಸಿದ್ದಾರೆ.

ಗುಲ್ಜಾರ್ ಚಿತ್ರರಂಗದಲ್ಲಿ ತನ್ನ ಸುದೀರ್ಘ ಪಯಣದೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದ್ದಾರೆ. ಕಾವ್ಯದಲ್ಲಿ ‘ತ್ರಿವೇಣಿ ’ಎಂಬ ಮೂರು ಸಾಲುಗಳ ಕವಿತೆಯನ್ನು ಅವರು ಆವಿಷ್ಕರಿಸಿದ್ದಾರೆ. ಗುಲ್ಜಾರ್ ತನ್ನ ಕಾವ್ಯದ ಮೂಲಕ ಸದಾ ಹೊಸದೇನನ್ನಾದರೂ ಸೃಷ್ಟಿಸುತ್ತಲೇ ಬಂದಿದ್ದಾರೆ. ಇತ್ತೀಚಿನ ಕೆಲವು ಸಮಯದಿಂದ ಅವರು ಮಕ್ಕಳ ಕಾವ್ಯದ ಬಗ್ಗೆಯೂ ಗಂಭೀರವಾಗಿ ಗಮನವನ್ನು ಹರಿಸುತ್ತಿದ್ದಾರೆ ಎಂದೂ ಆಯ್ಕೆ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.

ರಾಮಭದ್ರಾಚಾರ್ಯ ಅವರು ಪ್ರಸಕ್ತ ರಮಾನಂದ ಪಂಥದ ನಾಲ್ವರು ಜಗದ್ಗುರು ರಮಾನಂದಾಚಾರ್ಯರಲ್ಲಿ ಓರ್ವರಾಗಿದ್ದು,1982ರಿಂದಲೂ ಈ ಸ್ಥಾನದಲ್ಲಿದ್ದಾರೆ. 22 ಭಾಷೆಗಳಲ್ಲಿ ಮಾತನಾಡಬಲ್ಲ ಬಹುಭಾಷಾ ಪ್ರವೀಣರಾಗಿರುವ ರಾಮಭದ್ರಾಚಾರ್ಯ ಸಂಸ್ಕೃತ,ಹಿಂದಿ,ಅವಧಿ ಮತ್ತು ಮೈಥಿಲಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಕವಿ ಮತ್ತು ಲೇಖಕರಾಗಿದ್ದಾರೆ.

2015ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಅವರು ಭಾಜನರಾಗಿದ್ದರು. 1944ರಲ್ಲಿ ಸ್ಥಾಪನೆಗೊಂಡ ಜ್ಞಾನಪೀಠ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಅಸಾಧಾರಣ ಕೊಡುಗೆಗಾಗಿ ಪ್ರತಿವರ್ಷ ನೀಡಲಾಗುತ್ತದೆ. ಈ ಪ್ರಶಸ್ತಿಯು ಸಂಸ್ಕೃತಕ್ಕೆ ಸಂದಿರುವುದು ಇದು ಎರಡನೇ ಸಲವಾಗಿದೆ ಮತ್ತು ಉರ್ದು ಭಾಷೆಗೆ ಐದನೇ ಸಲವಾಗಿದೆ.

ಪ್ರಶಸ್ತಿಯು 21 ಲಕ್ಷ ರೂ.ನಗದು, ವಾಗ್ದೇವಿಯ ಮೂರ್ತಿ ಮತ್ತು ಮಾನಪತ್ರವನ್ನು ಒಳಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News