×
Ad

ಗಾಝಾ ಶಾಂತಿ ಪ್ರಸ್ತಾವನೆಗೆ ಪ್ರತಿಕ್ರಿಯಿಸಲು ಹಮಾಸ್‌ಗೆ 4 ದಿನಗಳ ಗಡುವು : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕೆಲವು ಅಂಶಗಳ ಕುರಿತು ಸ್ಪಷ್ಟೀಕರಣ ಅಗತ್ಯವಿದೆ ಎಂದ ಖತರ್ ಪ್ರಧಾನಿ

Update: 2025-09-30 22:51 IST

ಡೊನಾಲ್ಡ್ ಟ್ರಂಪ್ | PTI

ವಾಷಿಂಗ್ಟನ್: ಗಾಝಾ ಕದನ ವಿರಾಮಕ್ಕೆ ಸಂಬಂಧಿಸಿದ ಶಾಂತಿ ಪ್ರಸ್ತಾವನೆಗೆ ಹಮಾಸ್ ಪ್ರತಿಕ್ರಿಯಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಲ್ಕು ದಿನಗಳ ಗಡುವು ನೀಡಿರುವುದಾಗಿ ಘೋಷಿಸಿದ್ದಾರೆ.

ಶ್ವೇತಭವನದಿಂದ ಹೊರಬಂದು ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಇಸ್ರೇಲ್ ಮತ್ತು ಅರಬ್ ನಾಯಕರು ಈ ಯೋಜನೆಯನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ. ನಾವು ಹಮಾಸ್‌ನ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ಈ ಪ್ರಸ್ತಾಪವು ಒಂದು ಕೊಡುಗೆಯಲ್ಲ, ಅಂತಿಮ ಸೂಚನೆಯಾಗಿದೆ ಎಂದು ಸ್ಪಷ್ಟಪಡಿಸಿದ ಟ್ರಂಪ್, "ಹಮಾಸ್ ಪಾಲಿಸದಿದ್ದರೆ ನೆತನ್ಯಾಹು ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದರು. ಇದರಿಂದ ಗಾಝಾದಲ್ಲಿ ಇಸ್ರೇಲ್ ಕಠಿಣ ಕ್ರಮ ಕೈಗೊಳ್ಳಲು ಹಸಿರು ನಿಶಾನೆ ತೋರಿಸಿದಂತಾಗಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ ಎಂದು Aljazeera.com ವರದಿ ಮಾಡಿದೆ.

20 ಅಂಶಗಳನ್ನು ಒಳಗೊಂಡಿರುವ ಈ ಯೋಜನೆಗೆ ಗಾಝಾದ ಸ್ವ-ಆಡಳಿತ, ಇಸ್ರೇಲ್ ಹಂತಹಂತವಾಗಿ ಹಿಂದೆ ಸರಿಯುವುದು, ಗಾಝಾದಿಂದ ಬಲವಂತವಾಗಿ ಜನರನ್ನು ತೆರವುಗೊಳಿಸುವುದಿಲ್ಲ ಎಂಬ ಭರವಸೆ ಸೇರಿದಂತೆ ಹಲವು ಪ್ರಮುಖ ವಿಷಯಗಳು ಸೇರಿವೆ. ಆದರೂ, ಕೆಲವು ಅಂಶಗಳಿಗೆ ಇನ್ನೂ ಸ್ಪಷ್ಟೀಕರಣ ಮತ್ತು ಮಾತುಕತೆ ಅಗತ್ಯವಿದೆ ಎಂದು ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್‌ ರಹಮಾನ್ ಬಿನ್ ಜಾಸಿಮ್ ಅಲ್-ಥಾನಿ ಪ್ರತಿಕ್ರಿಯೆ ನೀಡಿದ್ದಾರೆ.

“ಟ್ರಂಪ್ ಅವರ ಯೋಜನೆಯಲ್ಲಿ ಒಂದಿಷ್ಟು ವಿವರಗಳನ್ನು ಪಟ್ಟಿ ಮಾಡಲಾಗಿದೆ. ಅನೇಕ ಅಂಶಗಳನ್ನು ಇನ್ನೂ ಚರ್ಚಿಸಬೇಕಿದೆ. ಆದರೆ ಇದರ ಪ್ರಮುಖ ಗುರಿ ಯುದ್ಧ ಕೊನೆಗೊಳಿಸುವುದಾಗಿದೆ” ಎಂದು ಅವರು ಹೇಳಿದ್ದಾರೆ.

ಹಮಾಸ್ ಜೊತೆಗಿನ ಮಾತುಕತೆಯನ್ನು ಉಲ್ಲೇಖಿಸಿದ ಅಲ್-ಥಾನಿ, “ಯುದ್ಧ ನಿಲ್ಲಿಸುವುದು ನಮ್ಮ ಪ್ರಾಥಮಿಕ ಗುರಿ. ಹಮಾಸ್ ಜವಾಬ್ದಾರಿಯುತವಾಗಿ ವರ್ತಿಸಿ, ಯೋಜನೆಯನ್ನು ಅಧ್ಯಯನ ಮಾಡುವುದಾಗಿ ಭರವಸೆ ನೀಡಿದೆ” ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News