ದಿಲ್ಲಿಗೆ ಬಂದಿಳಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್
Photo | PTI
ಹೊಸದಿಲ್ಲಿ : ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅಮೆರಿಕದ ಎರಡನೇ ಮಹಿಳೆ ಉಷಾ ಅವರು ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ದಿಲ್ಲಿಗೆ ಬಂದಿಳಿದಿದ್ದಾರೆ.
ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಆಗಮಿಸಿದ ಜೆಡಿ ವ್ಯಾನ್ಸ್ ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಉಭಯ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಗೊಳಿಸುವ ದೃಷ್ಟಿಯಿಂದ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ವ್ಯಾನ್ಸ್ ಅವರ ಪತ್ನಿ ಉಷಾ ಭಾರತೀಯ ಮೂಲದವರು. ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್ ಕೂಡ ವ್ಯಾನ್ಸ್ ಜೊತೆ ನಾಲ್ಕು ದಿನಗಳ ಭಾರತ ಭೇಟಿಗಾಗಿ ಪಾಲಂ ವಾಯುನೆಲೆಗೆ ಬಂದಿಳಿದಿದ್ದಾರೆ.
ಲೋಕ ಕಲ್ಯಾಣ್ ಮಾರ್ಗದಲ್ಲಿನ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಸಂಜೆ 6:30ಕ್ಕೆ ಪ್ರಧಾನಿ ಮೋದಿ ಮತ್ತು ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಅವರ ಭೇಟಿ ನಡೆಯಲಿದೆ. ಈ ವೇಳೆ ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ರಕ್ಷಣಾ ಸಹಕಾರವನ್ನು ವೃದ್ಧಿಗೊಳಿಸುವ ದೃಷ್ಟಿಯಿಂದ ಮಾತುಕತೆ ನಡೆಯುವ ನಿರೀಕ್ಷೆಯಿದೆ.
ಅಧಿಕೃತ ಸಭೆಗಳ ನಂತರ, ವಾನ್ಸ್ ಕುಟುಂಬವು ಜೈಪುರ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದೆ.
ಜೆಡಿ ವ್ಯಾನ್ಸ್ ಭಾರತಕ್ಕೆ ಭೇಟಿ ನೀಡುತ್ತಿದ್ದಂತೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವಡ್ಲೂರು ಎಂಬ ಪುಟ್ಟ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ. ವಡ್ಲೂರು, ವಾನ್ಸ್ ಅವರ ಪತ್ನಿ ಉಷಾ ವಾನ್ಸ್ ಅವರ ಪೂರ್ವಜರ ಗ್ರಾಮವಾಗಿದೆ. ದಂಪತಿಗಳು ತಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಾರೆ ಎಂದು ಸ್ಥಳೀಯರು ನಿರೀಕ್ಷೆಯಲ್ಲಿದ್ದಾರೆ.