Uttar Pradesh | ವಿದ್ಯಾರ್ಥಿಗಳು ನಮಾಝ್ ಮಾಡುವ ವೇಳೆ ಹಿಂದೂ ವಿದ್ಯಾರ್ಥಿಗಳಿಂದ ರಕ್ಷಣೆ!
ಲಾಲ್ ಬರಾದರಿ ಮಸೀದಿ ಗೇಟ್ ಮುಚ್ಚಿದ್ದಕ್ಕೆ ಲಕ್ನೋ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ
ಲಕ್ನೋ: ಲಕ್ನೋ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿರುವ ಐತಿಹಾಸಿಕ ಲಾಲ್ ಬರಾದರಿ ಕಟ್ಟಡದ ಮಸೀದಿ ಗೇಟ್ ಅನ್ನು ಮುಚ್ಚಿದ ಹಿನ್ನೆಲೆಯಲ್ಲಿ ಪ್ರತಿಭಟನೆಯ ವೇಳೆ ನಮಾಝ್ ಮಾಡುವಾಗ ಹಿಂದೂ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿಗಳ ಸುತ್ತಲೂ ಮಾನವ ಸರಪಳಿಯನ್ನು ರಚಿಸಿ ರಕ್ಷಣೆ ನೀಡಿದ ಘಟನೆ ನಡೆದಿದೆ. ಕೋಮು ಸಾಮರಸ್ಯದ ಈ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರವಿವಾರ ಮಧ್ಯಾಹ್ನ ಲಾಲ್ ಬರಾದರಿ ಗೇಟ್ ಮುಚ್ಚಿದ್ದನ್ನು ವಿರೋಧಿಸಿ ಸಮಾಜವಾದಿ ಛತ್ರ ಸಭಾ, NSUI ಹಾಗೂ AISA ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು. ವಿದ್ಯಾರ್ಥಿಗಳು ಲಾಲ್ ಬರಾದರಿ ಕಡೆಗೆ ಸಾಗುವ ಮಾರ್ಗದಲ್ಲಿದ್ದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ಘೋಷಣೆಗಳನ್ನು ಕೂಗಿದರು.
ಮಸೀದಿ ಗೇಟ್ ಮುಚ್ಚಿದ್ದರಿಂದ ಮುಸ್ಲಿಂ ವಿದ್ಯಾರ್ಥಿಗಳು ಕಟ್ಟಡದ ಹೊರಭಾಗದಲ್ಲೇ ನಮಾಝ್ ನಿರ್ವಹಿಸಿದರು. ಇದೇ ವೇಳೆ ಹಿಂದೂ ವಿದ್ಯಾರ್ಥಿಗಳು ಅವರ ಸುತ್ತಲೂ ಕೈ ಹಿಡಿದು ಮಾನವ ಸರಪಳಿಯನ್ನು ರಚಿಸಿದರು. ನಮಾಝ್ ಗೆ ಯಾವುದೇ ಅಡಚಣೆ ಇಲ್ಲದೆ ಶಾಂತಿಯುತವಾಗಿ ನಡೆಯುವಂತಾಗಲು ಅವರು ರಕ್ಷಣೆ ನೀಡಿದರು. ನಮಾಝ್ ಮುಗಿದ ಬಳಿಕ ಮಾನವ ಸರಪಳಿಯನ್ನು ತೆರವುಗೊಳಿಸಲಾಯಿತು.
ಸಂಜೆ ಅದೇ ಸ್ಥಳದಲ್ಲಿ ಇಫ್ತಾರ್ ಕಾರ್ಯಕ್ರಮವೂ ನಡೆಯಿತು. ಕ್ಯಾಂಪಸ್ ನಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.
►“ಇದು ಬಾಗಿಲಿಗೆ ಬೀಗವಲ್ಲ, ನಂಬಿಕೆಗೆ ಬೀಗ”
ಈ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಛತ್ರ ಸಭಾದ ಉಪಾಧ್ಯಕ್ಷ ಮಹೇಂದ್ರ, “ನಾನು ಹಿಂದೂ ಆಗಿದ್ದರೂ ಮಸೀದಿಯನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದೇನೆ. ನೂರಾರು ವರ್ಷಗಳಿಂದ ಇಲ್ಲಿ ನಮಾಝ್ ನಡೆಯುತ್ತಿದೆ. ರಮಝಾನ್ ತಿಂಗಳಲ್ಲಿ ಮಸೀದಿಯನ್ನು ಮುಚ್ಚುವುದು ನಾಚಿಕೆಗೇಡಿನ ಸಂಗತಿ. ಇದು ಬಾಗಿಲಿಗೆ ಬೀಗವಲ್ಲ, ನಂಬಿಕೆಗೆ ಬೀಗ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹೊಸ ಉಪಕುಲಪತಿ ಬಂದ ನಂತರ ನಿರಂತರ ವಿವಾದಗಳು ಉಂಟಾಗುತ್ತಿವೆ. ಬಿಜೆಪಿ ಮತ್ತು ಆರೆಸ್ಸೆಸ್, ವಿಶ್ವವಿದ್ಯಾಲಯವನ್ನು ಕೋಮುವಾದದ ದಿಕ್ಕಿಗೆ ತಳ್ಳಲು ಯತ್ನಿಸುತ್ತಿವೆ. ಮೋಹನ್ ಭಾಗವತ್ ಭೇಟಿ ವೇಳೆ ಎಲ್ಲ ಗೇಟ್ ಗಳನ್ನು ಮುಚ್ಚಲಾಗಿತ್ತು. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪ್ರವೇಶಿಸಲು ಸಾಧ್ಯವಾಗಲಿಲ್ಲ. 50 ಕ್ಕೂ ಹೆಚ್ಚು ತರಗತಿಗಳನ್ನು ಅಮಾನತುಗೊಳಿಸಲಾಗಿದೆ,” ಎಂದು ವಿದ್ಯಾರ್ಥಿ ನಾಯಕ ಪ್ರಿನ್ಸ್ ಪ್ರಕಾಶ್ ಆರೋಪಿಸಿದರು.
“ಇತ್ತೀಚೆಗೆ ಆರೆಸ್ಸೆಸ್-ಬಿಜೆಪಿ ನಾಯಕರು ಭೇಟಿ ನೀಡಿದ ಬಳಿಕ ಮಸೀದಿಗೆ ಬೀಗ ಹಾಕಲಾಗಿದೆ. ಧಾರ್ಮಿಕ ಉದ್ರಿಕ್ತತೆಯನ್ನು ಪ್ರಚೋದಿಸುವ ಪಿತೂರಿ ಇದೆ,” ಎಂದು ಅಹ್ಮದ್ ರಝಾ ಖಾನ್ ಹೇಳಿದರು.
►‘ಬೆಳಿಗ್ಗೆ ತೆರೆದಿದ್ದ ಮಸೀದಿ ಮಧ್ಯಾಹ್ನ ಮುಚ್ಚಿತ್ತು’
“ಬೆಳಿಗ್ಗೆ ಮಸೀದಿ ತೆರೆದಿತ್ತು. ನಾನು ಪ್ರಾರ್ಥನೆ ಸಲ್ಲಿಸಿದ್ದೇನೆ. ಮಧ್ಯಾಹ್ನ ಬಂದಾಗ ಬಾಗಿಲು ಮುಚ್ಚಿರುವುದು ಕಂಡುಬಂದಿತು. ಮೂರು ಪೊಲೀಸ್ ಠಾಣೆಗಳಿಂದ ಪಡೆಗಳನ್ನು ನಿಯೋಜಿಸಲಾಗಿತ್ತು. ಆದರೆ ಈ ಬಗ್ಗೆ ಯಾರೂ ಅಧಿಕಾರಿಗಳು ಮಾತುಕತೆಗೆ ಬಂದಿಲ್ಲ,” ಎಂದು ತೌಕೀಲ್ ಘಾಝಿ ಹೇಳಿದರು.
ಲಾಲ್ ಬರಾದರಿ ಸುಮಾರು 200 ವರ್ಷಗಳಷ್ಟು ಹಳೆಯದು. 1800ರ ಸುಮಾರಿಗೆ ನಾಸಿರುದ್ದೀನ್ ಹೈದರ್ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದು, ಭಾರತೀಯ ಪುರಾತತ್ವ ಸಮೀಕ್ಷೆ (ASI) ಅಧೀನದಲ್ಲಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ದಶಕಗಳಿಂದ ಇಲ್ಲಿ ನಮಾಝ್ ನಡೆಯುತ್ತಿದ್ದು, ರಮಝಾನ್ ಸಂದರ್ಭದಲ್ಲಿ ವಿಶೇಷ ಮಹತ್ವವಿದೆ ಎಂದು ತಿಳಿಸಿದ್ದಾರೆ.
►ಸುರಕ್ಷತಾ ಕಾರಣ ಉಲ್ಲೇಖಿಸಿದ ಆಡಳಿತ
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಭಾವನಾ ಮಿಶ್ರಾ, “ಲಾಲ್ ಬರಾದರಿ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಯಾವುದೇ ಸಮಯದಲ್ಲಿ ಕುಸಿಯುವ ಅಪಾಯವಿದೆ. ಸುರಕ್ಷತಾ ಕಾರಣಗಳಿಂದ ಬಾಗಿಲುಗಳನ್ನು ಮುಚ್ಚಿ ಬೇಲಿ ಹಾಕುವ ಕೆಲಸ ಆರಂಭಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಫೆಬ್ರವರಿ 2ರಂದು ನಿರ್ಮಾಣ ಅಧೀಕ್ಷಕರಿಗೆ ಬೇಲಿ ನಿರ್ಮಾಣ ಕುರಿತು ಪತ್ರ ಕಳುಹಿಸಲಾಗಿದ್ದು, ರವಿವಾರದಿಂದಲೇ ಕಾಮಗಾರಿ ಆರಂಭಿಸಲಾಗಿದೆ. ಸಂಭವನೀಯ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಹಸಂಗಂಜ್ ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು. ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಆಡಳಿತ ಎಚ್ಚರಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ಯಾಂಪಸ್ನಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಯಿತು. ಅಧಿಕಾರಿಗಳೊಂದಿಗೆ ಚರ್ಚೆಯ ಬಳಿಕ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹಿಂದೆ ಸರಿದರೂ, ಮಸೀದಿ ಗೇಟ್ ತೆರೆಯದಿದ್ದರೆ ಆಂದೋಲನ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ರಮಝಾನ್ ಪವಿತ್ರ ಮಾಸದ ಸಂದರ್ಭದಲ್ಲಿ ನಡೆದ ಈ ಬೆಳವಣಿಗೆ ವಿದ್ಯಾರ್ಥಿಗಳು ಮತ್ತು ಆಡಳಿತದ ನಡುವೆ ಮುಂದಿನ ದಿನಗಳಲ್ಲಿ ಮಾತುಕತೆ ನಡೆಯುವ ಸೂಚನೆ ನೀಡಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.