ಉತ್ತರ ಪ್ರದೇಶ: ಜಿಲ್ಲಾ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ನ್ಯಾಯಾಧೀಶೆಗೆ ಕೊಲೆ ಬೆದರಿಕೆ
ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರ ಪ್ರದೇಶದ ಬಂದಾದಲ್ಲಿ ನೇಮಕಗೊಂಡ ಮಹಿಳಾ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಬಂದಿದೆ. ಕೆಲ ತಿಂಗಳ ಹಿಂದೆ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಮಹಿಳಾ ನ್ಯಾಯಾಧೀಶೆ ಲೈಂಗಿಕ ಕಿರುಕುಳದ ಆರೋಪ ಮಾಡಿ ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದರು. ಇದೇ ವೇಳೆ ಅವರು ದಯಾಮರಣ ಕೋರಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ನೋಂದಾಯಿತ ಅಂಚೆ ಮೂಲಕ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಸೆಕ್ಷನ್ 467 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ ಆರ್.ಎನ್.ಉಪಾಧ್ಯಾಯ ಎಂಬವರ ವಿರುದ್ಧ ಆರೋಪಿಸಲಾಗಿದ್ದು, ಬೆದರಿಕೆಯಲ್ಲಿ ಈ ವ್ಯಕ್ತಿಯ ಸಂಚು ಇರಬಹುದು ಎಂದು ಹೇಳಲಾಗಿದೆ. ಪತ್ರದಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನೂ ಬರೆಯಲಾಗಿದೆ. ಈ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಕಲಿ ಆಗಿರಬಹುದು ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.
ಆದರೆ ಅಂಚೆ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ, ಈ ನೋಂದಾಯಿತ ಪೋಸ್ಟ್ ಅನ್ನು ಯಾರು ಕಳುಹಿಸಿದ್ದಾರೆ ಎಂದು ತಿಳಿಯಬಹುದು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಕೊತ್ವಾಲಿ ಇನ್ಸ್ಪೆಕ್ಟರ್ ಅನೂಪ್ ದುಬೆ ಪ್ರತಿಕ್ರಿಯಿಸಿ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಷಯ ತನಿಖೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಧೀಶರು ಬಾರಾಬಂಕಿಯಲ್ಲಿ ಪೋಸ್ಟಿಂಗ್ ಸಮಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡಿಸೆಂಬರ್ 2023 ರಲ್ಲಿ, ಮಹಿಳಾ ನ್ಯಾಯಾಧೀಶೆ ಸಿಜೆಐ ಚಂದ್ರಚೂಡ್ ಅವರಿಗೆ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರು. 2022ರಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿಯೂ ದೂರು ದಾಖಲಾಗಿತ್ತು. ಆದರೆ, ಅದರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ತನಿಖೆ ಬಾಕಿ ಇರುವಾಗಲೇ ಜಿಲ್ಲಾ ನ್ಯಾಯಾಧೀಶರು ವರ್ಗಾವಣೆಗೆ ಒತ್ತಾಯಿಸಿದ್ದರು ಎಂದು ಅವರು ಪತ್ರದಲ್ಲಿ ಬರೆದಿದ್ದರು. ಜಿಲ್ಲಾ ನ್ಯಾಯಾಧೀಶರು ಸಾಕ್ಷ್ಯಗಳನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದ್ದ ಸಂತ್ರಸ್ತೆ, ಆರೋಪಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುವುದಕ್ಕಿಂತ ಬದಲು ದಯಾಮರಣ ನೀಡುವಂತೆ ಬೇಡಿಕೆ ಇಟ್ಟಿದ್ದರು.