×
Ad

ಉತ್ತರ ಪ್ರದೇಶ: ಜಾಮೀನಿನ ಮೇಲೆ ಬಿಡುಗಡೆಗೊಂಡ ಬೆನ್ನಲ್ಲೇ ಅತ್ಯಾಚಾರ ಸಂತ್ರಸ್ತೆಯನ್ನು ಹತ್ಯೆಗೈದ ಆರೋಪಿ, ಆತನ ಸಹೋದರ

Update: 2023-11-21 19:13 IST

Photo: NDTV 

ಹೊಸದಿಲ್ಲಿ: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಢೇರಾ ಗ್ರಾಮದಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಆಕೆಯ ಮೇಲೆ ಅತ್ಯಾಚಾರಗೈದ ಆರೋಪ ಹೊತ್ತ ವ್ಯಕ್ತಿ ಮತ್ತಾತನ ಸಹೋದರ ಅಟ್ಟಾಡಿಸಿಕೊಂಡು ನಂತರ ಹತ್ಯೆಗೈದ ಘಟನೆ ಹಾಡುಹಗಲೇ ನಡೆದಿದೆ. ಈ ಬರ್ಬರ ಕೃತ್ಯ ನಡೆಯುವ ಕೆಲವೇ ದಿನಗಳಿಗೆ ಮುನ್ನ ಹಂತಕರಾದ ಅಶೋಕ್‌ ಮತ್ತು ಪವನ್‌ ನಿಶಾದ್‌ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಯುವತಿಯನ್ನು ಮುಖ್ಯ ರಸ್ತೆಯಲ್ಲಿಯೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಾಗ ಗ್ರಾಮಸ್ಥರು ಭಯಭೀತರಾಗಿ, ನಿಸ್ಸಹಾಯಕರಾಗಿ ನೋಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಅಪ್ರಾಪ್ತೆಯಾಗಿದ್ದಾಗ ಮೂರು ವರ್ಷಗಳ ಹಿಂದೆ ಆಕೆಯ  ಮೇಲೆ ಅತ್ಯಾಚಾರಗೈದ ಆರೋಪ ಪವನ್‌ ನಿಶಾದ್‌ ಮೇಲಿತ್ತು.  ಆ ಘಟನೆ ನಡೆದಂದಿನಿಂದ ಪವನ್‌ ಮತ್ತಾತನ ಸಹಚರರಿಂದ ಪ್ರಕರಣ ಕೈಬಿಡುವಂತೆ ಒತ್ತಡ ಹೇರಲು ಆಕೆಗೆ ಕಿರುಕುಳ ನೀಡುತ್ತಿದ್ದರು. ಪವನ್‌ ಸಹೋದರ ಅಶೋಕ್‌ ಬೇರೊಂದು ಕೊಲೆ ಪ್ರಕರಣದ ಆರೋಪಿಯಾಗಿದ್ದು ಘಟನೆ ನಡೆಯುವುದಕ್ಕಿಂತ ಎರಡು ದಿನ ಮುಂಚೆಯಷ್ಟೇ ಬಿಡುಗಡೆಗೊಂಡಿದ್ದ. ಈ ಬಾರಿ ಹೇಗಾದರೂ ಯುವತಿಯ ಕುಟುಂಬದ ಮೇಲೆ ಒತ್ತಡ ಹೇರಿ ದೂರು ವಾಪಸ್‌ ಪಡೆಯುವ ಉದ್ದೇಶ ಅವರಿಗಿತ್ತು.

ಆದರೆ ಅವರು ಒಪ್ಪದೇ ಇದ್ದಾಗ, ಯುವತಿ ಮನೆಯ ಜಾನುವಾರುಗಳನ್ನು ಮೇಯಿಸಿ ವಾಪಸ್‌ ಕರೆತರುವ ವೇಳೆ ಆಕೆಯನ್ನು ಅಟ್ಟಾಡಿಸಿ ಕೊಲೆಗೈಯ್ಯಲಾಗಿದೆ.

ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News