×
Ad

ಉತ್ತರ ಪ್ರದೇಶ: ಪೊಲೀಸರು ಮತ್ತು ವಕೀಲರ ನಡುವೆ ಘರ್ಷಣೆ; ಲಾಠಿ ಚಾರ್ಜ್, 6 ಮಂದಿಗೆ ಗಾಯ

Update: 2023-08-29 22:37 IST

Screengrab : twitter \ @localpostit

ಹಾಪುರ್ (ಉತ್ತರ ಪ್ರದೇಶ): ವಕೀಲೆ ಹಾಗೂ ಆಕೆಯ ತಂದೆಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಹಾಪುರ್ ಬಾರ್ ಅಸೋಸಿಯೇಷನ್ ವತಿಯಿಂದ ನಡೆಸುತ್ತಿದ್ದ ಪ್ರತಿಭಟನೆಯ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರಿಂದ ಮಂಗಳವಾರ ಆ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ ಎಂದು freepressjournal.in ವರದಿ ಮಾಡಿದೆ.

ಆರಂಭದಲ್ಲಿ ತಾಲೂಕು ಚೌಕ್ ಬಳಿ ವಕೀಲರು ನೆರೆದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರತಿಭಟನೆಯಿಂದ ಸಂಚಾರ ದಟ್ಟಣೆಯುಂಟಾಯಿತು. ಈ ಅಡಚಣೆಯಿಂದ ವಾಹನ ಸವಾರರು ಪರದಾಡುವಂತಾಗಿತ್ತು ಎನ್ನಲಾಗಿದೆ.

ಸ್ಥಳದಲ್ಲಿ ಸಂಚಾರ ದಟ್ಟಣೆಯುಂಟಾಗಿದೆ ಎಂದು ಮಾಹಿತಿ ಬಂದಿದ್ದರಿಂದ, ಸ್ಥಳದಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಹಾಗೂ ಅಧಿಕಾರಿಗಳು ಅಲ್ಲಿಗೆ ಧಾವಿಸಿದರು. ಸಂಚಾರ ದಟ್ಟಣೆಯನ್ನು ನಿವಾರಿಸಿ, ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲು ಅವರು ವಕೀಲರೊಂದಿಗೆ ಮಾತುಕತೆ ನಡೆಸಿದರು. ಆದರೆ, ಪೊಲೀಸರು ಹಾಗೂ ವಕೀಲರ ನಡುವೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು.

ಈ ನಡುವೆ, ಪೊಲೀಸರು ಹಾಗೂ ಸಾರ್ವಜನಿಕರಿಬ್ಬರ ಮೇಲೆ ವಕೀಲರು ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿಯು ವಿಕೋಪಕ್ಕೆ ತಿರುಗಿತು ಎಂಬ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಪ್ರತಿಯಾಗಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಹಲವು ವಕೀಲರು ಗಾಯಗೊಂಡಿದ್ದಾರೆ. ಲಾಠಿ ಚಾರ್ಜ್ ಸಂದರ್ಭದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಮೂವರು ವಕೀಲರು ಗಾಯಗೊಂಡಿದ್ದು, ಅವರೆಲ್ಲರನ್ನೂ ಹತ್ರಾಸ್ ಸಾಮುದಾಯಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಯ ಬಳಿಕ ಆ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

ಆಗಸ್ಟ್ 25ರಂದು ಘಾಝಿಯಾಬಾದ್ ನ ಮಹಿಳಾ ವಕೀಲರೊಬ್ಬರು ತಮ್ಮ ತಂದೆಯೊಂದಿಗೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿತ್ತು. ಬಳಿಕ ವಕೀಲೆ ಹಾಗೂ ಆಕೆಯ ತಂದೆಯ ವಿರುದ್ಧ ಪ್ರಕರಣ ದಾಖಲಾಗಿರುವುದರ ವಿರುದ್ಧ ಹಾಪುರ್ ಬಾರ್ ಅಸೋಸಿಯೇಷನ್ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದರು. ಪೊಲೀಸ್ ಅಧಿಕಾರಿಯು ವಕೀಲೆಯ ಕಾರನ್ನು ಎಳೆದುಕೊಂಡು ಹೋಗಿದ್ದು, ಅಶಿಸ್ತಿನ ವರ್ತನೆ ತೋರಿದ್ದಾರೆ ಎಂದು ಬಾರ್‌ ಅಸೋಷಿಯೇಷನ್‌ ಆರೋಪಿಸಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News