×
Ad

ಅಖ್ಲಾಕ್ ಹತ್ಯೆ ಪ್ರಕರಣ | ಹಂತಕರ ವಿರುದ್ಧದ ಎಲ್ಲಾ ಆರೋಪಗಳನ್ನು ಹಿಂಪಡೆಯಲು ಉತ್ತರ ಪ್ರದೇಶ ಸರಕಾರದಿಂದ ನ್ಯಾಯಾಲಯಕ್ಕೆ ಅರ್ಜಿ

Update: 2025-11-15 13:42 IST

ಅಖ್ಲಾಕ್ (Photo credit: thenewsminute.com) 

ಹೊಸದಿಲ್ಲಿ : 2015ರಲ್ಲಿ ಮುಹಮ್ಮದ್ ಅಖ್ಲಾಕ್ ಅವರನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ 10 ಜನರ ವಿರುದ್ಧದ ಕೊಲೆ ಸೇರಿದಂತೆ ಎಲ್ಲಾ ಆರೋಪಗಳನ್ನು ಹಿಂಪಡೆಯಲು ಉತ್ತರ ಪ್ರದೇಶದ ಬಿಜೆಪಿ ಸರಕಾರ ಸಿಆರ್‌ಪಿಸಿ ಸೆಕ್ಷನ್ 321ರ ಅಡಿಯಲ್ಲಿ ಅರ್ಜಿ ಸಲ್ಲಿಸಿದೆ ಎಂದು Outlook ವರದಿ ಮಾಡಿದೆ.

2015ರ ಸೆಪ್ಟೆಂಬರ್ 28ರಂದು ಈದ್ ಹಬ್ಬದ ಸಮಯದಲ್ಲಿ ಗೋವನ್ನು ವಧೆ ಮಾಡಿ ಗೋಮಾಂಸವನ್ನು ತಿಂದಿದ್ದಾರೆ ಎಂಬ ವದಂತಿಗಳ ನಂತರ ಅವರನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿತ್ತು.

ಅಕ್ಟೋಬರ್ 15ರಂದು ಉತ್ತರ ಪ್ರದೇಶ ಸರಕಾರ ಗೌತಮ್ ಬುದ್ಧ ನಗರದ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ 10 ಆರೋಪಿಗಳ ಮೇಲಿನ ಎಲ್ಲಾ ಆರೋಪಗಳನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿದೆ ಎಂದು Outlook ವರದಿ ಮಾಡಿದೆ.

ಪ್ರಕರಣದ ಎಲ್ಲಾ ಆರೋಪಿಗಳು 2017ರಲ್ಲಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಅವರ ವಿರುದ್ಧ ಕೊಲೆ, ಕೊಲೆ ಯತ್ನ, ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು, ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ರಾಜ್ಯ ಸರಕಾರ ರಾಜ್ಯಪಾಲರ ಲಿಖಿತ ಅನುಮೋದನೆಯನ್ನು ಹೊಂದಿದೆ ಮತ್ತು ಪತ್ತೆಯಾದ ಮಾಂಸವನ್ನು ಗೋಮಾಂಸ ಎಂದು ಗುರುತಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಆದಿತ್ಯನಾಥ್ ಮುಖ್ಯಮಂತ್ರಿಯಾಗುವ ಮೊದಲು, ಅಖ್ಲಾಕ್ ಕುಟುಂಬದವರ ಮೇಲೆ ಗೋಹತ್ಯೆ ಆರೋಪ ಹೊರಿಸಬೇಕು ಮತ್ತು ಅವರಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದ್ದರು.

ಅಖ್ಲಾಕ್ ಹತ್ಯೆ ಪ್ರಕರಣ ದೇಶದಲ್ಲಿ ಭಾರೀ ಚರ್ಚಗೆ ಗ್ರಾಸವಾಗಿತ್ತು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಅಖ್ಲಾಕ್ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದರು. ಘಟನೆ ನಡೆದ ಬಳಿಕ ಕುಟುಂಬವು ಸುರಕ್ಷತೆಯ ಭಯದಿಂದ ದಿಲ್ಲಿಗೆ ಸ್ಥಳಾಂತರಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News