×
Ad

ಉತ್ತರಪ್ರದೇಶ | ದೇವಾಲಯಗಳ ಮೇಲೆ ‘ಐ ಲವ್ ಮುಹಮ್ಮದ್’ ಬರಹ: ಅಲಿಘಡದಲ್ಲಿ ಜೀಶಾಂತ್, ಆಕಾಶ್, ದಿಲೀಪ್, ಅಭಿಷೇಕ್ ಬಂಧನ

ʼಐ ಲವ್ ಮುಮದ್ʼ ಎಂದು ಕಾಗುಣಿತ ತಪ್ಪು ಬರೆದಿದ್ದ ಆರೋಪಿಗಳು!

Update: 2025-10-30 23:50 IST

Photo Credit : siasat.com

ಅಲಿಘಡ, ಅ.30: ಅಲಿಘಡ ಜಿಲ್ಲೆಯ ದೇವಾಲಯಗಳ ಗೋಡೆಗಳ ಮೇಲೆ ‘ಐ ಲವ್ ಮುಹಮ್ಮದ್’ ಎಂದು ಬರೆದ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಭೂ ವಿವಾದದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಸಿಲುಕಿಸಲು ನಡೆದ ಯತ್ನವಾಗಿತ್ತು ಎಂದು ತನಿಖೆಯಿಂದ ಬಹಿರಂಗವಾಗಿದೆ.

ಬಂಧಿತರನ್ನು ಜೀಶಾಂತ್ ಸಿಂಗ್, ಆಕಾಶ್ ಸಾರಸ್ವತ್, ದಿಲೀಪ್ ಶರ್ಮಾ ಮತ್ತು ಅಭಿಷೇಕ್ ಸಾರಸ್ವತ್ ಎಂದು ಗುರುತಿಸಲಾಗಿದೆ. ಐದನೇ ಆರೋಪಿ ರಾಹುಲ್ ಗಾಗಿ ಶೋಧ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಲೋಧಾ ಠಾಣಾ ವ್ಯಾಪ್ತಿಯ ಭಗವಾನ್‌ ಪುರ ಮತ್ತು ಬಲ್ಕ್‌ಗಢಿ ಗ್ರಾಮಗಳಲ್ಲಿನ ದೇವಾಲಯಗಳ ಗೋಡೆಗಳ ಮೇಲೆ ಶನಿವಾರ ಈ ಬರಹಗಳು ಕಾಣಿಸಿಕೊಂಡಿದ್ದವು. ಈ ಕುರಿತು ಮುಸ್ತಕೀಮ್, ಗುಲ್ ಮುಹಮ್ಮದ್, ಸುಲೈಮಾನ್, ಸೋನು, ಅಲ್ಲಾಬಕ್ಷ್, ಹಮೀದ್ ಮತ್ತು ಯೂಸುಫ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.

ಆದರೆ ತನಿಖೆಯಲ್ಲಿ, ಗೋಡೆ ಬರಹಗಳಲ್ಲಿ ಕಾಗುಣಿತದ ದೋಷಗಳು ಇದ್ದವು ಎಂಬುದು ಪೊಲೀಸರ ಗಮನಕ್ಕೆ ಬಂದಿತು. “ಪ್ರತಿಯೊಂದು ಘೋಷಣೆಯಲ್ಲೂ ಒಂದೇ ರೀತಿಯ ತಪ್ಪು ಕಂಡುಬಂದಿತು. ಹಿಂದಿನ ಭೂ ವಿವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಘಟನೆಗೆ ಹೊಸ ತಿರುವು ದೊರೆಯಿತು” ಎಂದು ಎಸ್‌ಎಸ್‌ಪಿ ನೀರಜ್ ಕುಮಾರ್ ಜದೌನ್ ಹೇಳಿದರು.

2024ರಲ್ಲಿ ಗುಲ್ ಮುಹಮ್ಮದ್ ಅವರ ಕುಟುಂಬ ಮತ್ತು ಮುಖೇಶ್ ಅವರ ಕುಟುಂಬದ ನಡುವೆ ನಡೆದ ಭೂ ವಿವಾದವೇ ಈ ಘಟನೆಗೆ ಕಾರಣವಾಗಿರುವುದು ಪತ್ತೆಯಾಗಿದೆ. ಇದೇ ವಿಷಯಕ್ಕೆ ಸೆಪ್ಟೆಂಬರ್‌ ನಲ್ಲಿ ಮುಸ್ತಕೀಮ್ ಮತ್ತು ಜೀಶಾಂತ್ ಸಿಂಗ್ ನಡುವೆ ವಾಗ್ವಾದ ನಡೆದಿತ್ತು. ಜೀಶಾನ್ ಸಿಂಗ್ ಅವರ ದೂರಿನ ಆಧಾರದಲ್ಲಿ ಮುಸ್ತಕೀಮ್ ವಿರುದ್ಧ ಪ್ರಕರಣ ದಾಖಲಾಗಿತ್ತು.

“ಬಂಧಿತ ನಾಲ್ವರು ಮುಸ್ತಕೀಮ್ ವಿರುದ್ಧ ಕ್ರಮಕ್ಕಾಗಿ ದೇವಾಲಯಗಳ ಗೋಡೆಗಳ ಮೇಲೆ ಘೋಷಣೆ ಬರೆದಿದ್ದಾರೆ” ಎಂದು ಜದೌನ್ ತಿಳಿಸಿದ್ದಾರೆ.

ಹಿಂದಿನ ಎಂಟು ಮಂದಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದ್ವೇಷ ಪ್ರಚೋದನೆ ಹಾಗೂ ಸಾರ್ವಜನಿಕ ಶಾಂತಿ ಭಂಗಗೊಳಿಸಿದ ಆರೋಪಗಳು ದಾಖಲಾಗಿವೆ.

ಇತ್ತೀಚೆಗೆ ಕಾನ್ಪುರದಲ್ಲಿ ಈದ್ ಮಿಲಾದುನ್ನಬಿ ಮೆರವಣಿಗೆಯ ವೇಳೆ “ಐ ಲವ್ ಮುಹಮ್ಮದ್” ಬ್ಯಾನರ್ ಹಿಡಿದ ಘಟನೆಯ ನಂತರ ರಾಜ್ಯದ ವಿವಿಧೆಡೆ ಕೋಮು ಉದ್ವಿಗ್ನತೆ ಉಂಟಾಗಿತ್ತು.

ಸೌಜನ್ಯ: scroll.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News