ಶಾಲೆಗೆ ಇರಿಸಲಾಗಿದ್ದ ಸಮರ ಸೇನಾನಿ ಹುತಾತ್ಮ ಅಬ್ದುಲ್ ಹಮೀದ್ ಅವರ ಹೆಸರು ಬದಲಾಯಿಸಿದ ಉತ್ತರಪ್ರದೇಶ ಸರಕಾರ
ಅಬ್ದುಲ್ ಹಮೀದ್ | PC : Veer Abdul Hamid\ facebook
ಲಕ್ನೋ: ಗಾಝಿಯಾಪುರದ ಶಹೀದ್ ವೀರ ಅಬ್ದುಲ್ ಹಮೀದ್ ವಿದ್ಯಾಲಯಕ್ಕೆ ಪ್ರೈಮ್ ಮಿನಿಸ್ಟರ್ ಫಾರ್ ರೈಸಿಂಗ್ ಇಂಡಿಯಾ ಕಾಂಪೊಸಿಟ್ ಸ್ಕೂಲ್ ಧಾಮ್‌ಪುರ ಎಂದು ಉತ್ತರಪ್ರದೇಶ ಸರಕಾರ ಮರು ನಾಮಕರಣ ಮಾಡಿದೆ.
1965ರ ಸಮರ ಸೇನಾನಿ ಅಬ್ದುಲ್ ಹಮೀದ್ ಅವರ ಸ್ಮರಣಾರ್ಥ ಗಾಝಿಯಾಪುರದ ಈ ಶಾಲೆಗೆ ಶಹೀದ್ ವೀರ್ ಅಬ್ದುಲ್ಲಾ ಹಮೀದ್ ವಿದ್ಯಾಲಯ ಎಂಬ ಹೆಸರು ಇರಿಸಲಾಗಿತ್ತು. ಆದರೆ, ಈಗ ಉತ್ತರ ಪ್ರದೇಶ ಸರಕಾರ ಆ ಹೆಸರನ್ನು ಕೈಬಿಟ್ಟಿದೆ.
ರಾಜ್ಯ ಶಿಕ್ಷಣ ಇಲಾಖೆಯ ಆದೇಶದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಹಮೀದ್ ಕುಟುಂಬ ಹಾಗೂ ಧಾಮ್‌ಪುರ ಗ್ರಾಮದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರು ಪ್ರಾಥಮಿಕ ಶಿಕ್ಷಣ ಅಧಿಕಾರಿಗೆ ದೂರು ನೀಡಿದ್ದಾರೆ.
ಹಮೀದ್ ಅವರು 1965ರಲ್ಲಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಅವರ ಶೌರ್ಯವನ್ನು ಗುರುತಿಸಿ ಮರಣೋತ್ತರವಾಗಿ ಅವರಿಗೆ ಭಾರತದ ಅತ್ಯುಚ್ಚ ಸೇನಾ ಗೌರವ ಪರಮ ವೀರ ಚಕ್ರ ನೀಡಿ ಗೌರವಿಸಲಾಗಿತ್ತು.
ಮರು ನಾಮಕರಣ ಮಾಡುವ ಕುರಿತು ಸ್ಥಳೀಯ ಸಮುದಾಯದೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಹಮೀದ್ ಅವರ ಮೊಮ್ಮೊಗ ಜಮೀಲ್ ಅಲಂ ಹೇಳಿದ್ದಾರೆ. ಈ ಕ್ರಮ ಹಮೀದ್ ಅವರ ಪರಂಪರೆಗೆ ಮಾಡಿದ ಅವಮಾನ ಎಂದು ಅವರು ತಿಳಿಸಿದ್ದಾರೆ.
ಆದರೆ, ಪ್ರಾಥಮಿಕ ಶಿಕ್ಷಣ ಅಧಿಕಾರಿ ಹೇಮಂತ್ ರಾವ್, ಶಾಲೆಯ ಅಧಿಕೃತ ದಾಖಲೆಗಳಲ್ಲಿ ಶಹೀದ್ ವೀರ್ ಅಬ್ದುಲ್ ಹಮೀದ್ ವಿದ್ಯಾಲಯ ಎಂಬ ಹೆಸರು ಉಲ್ಲೇಖವಾಗಿರುವುದು ಕಂಡು ಬಂದಿಲ್ಲ. ಇನ್ನೊಂದೆಡೆ ಕಾಂಪಸಿಟ್ ಸ್ಕೂಲ್ ಧಾಮ್ ಪುರ್ ಎಂಬ ಹೆಸರು 2019 ಎಪ್ರಿಲ್‌ನಿಂದ ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ.
ತಾನು ಈ ವಿಷಯದ ಕುರಿತು ಪರಿಶೀಲಿಸಲಿದ್ದೇನೆ ಹಾಗೂ ಹಮೀದ್ ಅವರಿಗೆ ಗೌರವ ನೀಡುವುದು ಮೊದಲ ಆದ್ಯತೆ ಎಂದು ರಾವ್ ಹೇಳಿದ್ದಾರೆ.
ದ ಪ್ರೈಮ್ ಮಿನಿಸ್ಟರ್ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಯೋಜನೆ ಪಿಎಂ ಶ್ರೀ ಎಂದು ಪ್ರಸಿದ್ಧವಾಗಿದೆ. ಈ ಯೋಜನೆಯನ್ನು 2022ರಲ್ಲಿ ಆರಂಭಿಸಲಾಗಿತ್ತು. ಸರಿಸುಮಾರು 14,500 ಶಾಲೆಗಳನ್ನು ಮಾದರಿ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಮೇಲ್ದರ್ಜೀಕರಣದ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ 60-40 ಅನುಪಾತದಲ್ಲಿ ಹಂಚಿಕೊಳ್ಳಬೇಕು.