×
Ad

ವಿಧವೆಯರ, ವೃದ್ಧರ ಮಾಸಿಕ ಪಿಂಚಣಿಗಿಂತಲೂ ಅನಾಥ ಗೋವುಗಳ ಆಹಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿರುವ ಉತ್ತರ ಪ್ರದೇಶ ಸರಕಾರ: ವರದಿ

Update: 2023-09-14 12:26 IST

ಲಕ್ನೋ : ಉತ್ತರ ಪ್ರದೇಶದ ಆದಿತ್ಯನಾಥ್‌ ಸರಕಾರ ಅನಾಥ ದನಗಳಿಗೆ ಆಹಾರಕ್ಕಾಗಿ ಮಾಡುವ ವೆಚ್ಚವು ರಾಜ್ಯದ ವೃದ್ಧರಿಗೆ ಮತ್ತು ವಿಧವೆಯರಿಗೆ ನೀಡಲಾಗುವ ಪಿಂಚಣಿಗಳಿಗೆ ವ್ಯಯಿಸಲಾಗುವ ಮೊತ್ತಕ್ಕಿಂತಲೂ ಹೆಚ್ಚಾಗಿದೆ ಎಂಬುದನ್ನು ಸರ್ಕಾರಿ ಅಂಕಿಅಂಶಗಲೇ ಹೇಳುತ್ತವೆ.

ರಾಜ್ಯ ಸರ್ಕಾರವು ತನ್ನ 2022-23 ಬಜೆಟಿನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿಗಾಗಿ ಒಟ್ಟು ರೂ 6,069 ಕೋಟಿ ಮೀಸಲಿರಿಸಿದೆ ಅಂತೆಯೇ ಅನಾಥ ಮಹಿಳೆಯರಿಗೆ ವಿಧವೆಯರ ಪಿಂಚಣಿ ಯೋಜನೆಯಡಿ ರೂ 3,299 ಕೋಟಿ ಮೊತ್ತವನ್ನು ಮಾಸಿಕ ರೂ 1,000 ದಂತೆ ಸುಮಾರು 2.721 ಮಿಲಿಯನ್‌ ಫಲಾನುಭವಿಗಳಿಗೆ ವಿತರಿಸಿದೆ. ಅದೇ ಸಮಯ ರಾಜ್ಯ ಸರಕಾರವು ಗೋವುಗಳ ಆಹಾರಕ್ಕಾಗಿ ಮಾಡುವ ಖರ್ಚನ್ನು ತಲಾ ಪ್ರಾಣಿಗೆ ರೂ 30ರಿಂದ ರೂ 50ಕ್ಕೆ ಏರಿಕೆ ಮಾಡಿದ್ದು ಇದು ಮಾಸಿಕ ಒಂದು ಗೋವಿಗೆ ಮಾಡುವ ಖರ್ಚು ರೂ 1,500ರಷ್ಟಾಗುತ್ತದೆ ಹಾಗೂ ವಿಧವೆಯರಿಗೆ ಹಾಗೂ ವೃದ್ಧರಿಗೆ ನೀಡಲಾಗುವ ರೂ 1000 ಮಾಸಿಕ ಪಿಂಚಣಿಗಿಂತ ಅಧಿಕವಾಗಿದೆ.

ರಾಜ್ಯದ ಪಶುಸಂಗೋಪನಾ ಇಲಾಖೆಯ ಅಂಕಿಅಂಶಗಳಂತೆ ರಾಜ್ಯದ ವಿವಿಧೆಡೆ ಇರುವ 6,889 ಗೋಶಾಲೆಗಳಲ್ಲಿ 10 ಲಕ್ಷಕ್ಕೂ ಅಧಿಕ ಗೋವುಗಳು ಆಶ್ರಯ ಪಡೆದಿದ್ದರೆ ಇನ್ನೂ 1.85 ಲಕ್ಷ ಗೋವುಗಳನ್ನು ಮುಖ್ಯ ಮಂತ್ರಿ ಸಹಭಾಗಿತ ಯೋಜನೆಯಡಿ ಮಾಸಿಕ ರೂ 50 ಸಹಾಯಧನದೊಂದಿಗೆ ಸಾರ್ವಜನಿಕರು ಸಲಹುತ್ತಿದ್ದಾರೆ. ಇದು ಒಟ್ಟುಗೂಡಿಸಿದರೆ ವರ್ಷಕ್ಕೆ ಪಶುಆಹಾರಕ್ಕೆ ಸರಕಾರ ರೂ 2,500 ಕೋಟಿಗೂ ಅಧಿಕ ವೆಚ್ಚ ಮಾಡುತ್ತಿದೆ.

ಅಷ್ಟೇ ಅಲ್ಲದೆ ರಾಜ್ಯ ಸರಕಾರ 250 ದೊಡ್ಡ ಗೋಶಾಲೆಗಳ ನಿರ್ವಹಣೆಗಾಗಿಯೂ ಧನಸಹಾಯ ನೀಡುತ್ತಿದ್ದು ಇವುಗಳನ್ನು ನೋಡಿಕೊಳ್ಳುವವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಿನಕ್ಕೆ ರೂ 210 ನೀಡಲಾಗುತ್ತಿದ್ದರೆ ಈಗ ಪೂರ್ವ ಉತ್ತರ ಪ್ರದೇಶದಲ್ಲಿ ಅವರಿಗೆ ಮಾಸಿಕ ರೂ 7000 ಹಾಗೂ ಪಶ್ಚಿಮ ಉತ್ತರಪ್ರದೇಶದಲ್ಲಿ ರೂ 7500 ವೇತನ ನೀಡಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News