ಉತ್ತರಪ್ರದೇಶ: ವ್ಯಕ್ತಿಯ ತಲೆ ಬೋಳಿಸಿ, ಮೂತ್ರ ಕುಡಿಸಿದ ಆರೋಪ; ತೃತೀಯ ಲಿಂಗಿಗಳ ಸಹಿತ ಐವರ ಬಂಧನ
Photo: @smartySikandar | Twitter
ಕಸ್ಗಂಜ್(ಉತ್ತರಪ್ರದೇಶ: ಕಸ್ಗಂಜ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವನ ತಲೆ ಬೋಳಿಸಿದ ಹಾಗೂ ಮೂತ್ರ ಕುಡಿಸಿದ ಆರೋಪದಲ್ಲಿ ಮೂವರು ತೃತೀಯ ಲಿಂಗಿಗಳು ಸೇರಿದಂತೆ ಐವರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯ ಸಹಾವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 26ರಂದು ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ಕುರಿತಂತೆ ರಫೀಕುಲ್ಲಾ ಎಂಬವರು ದೂರು ದಾಖಲಿಸಿದ್ದಾರೆ ಎಂದು ಸಹಾವರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅನಿಲ್ ಕುಮಾರ್ ಹೇಳಿದ್ದಾರೆ. ಇತರ ಮೂವರು ತೃತೀಯ ಲಿಂಗಿಗಳು ಹಾಗೂ ಅವರ ಇಬ್ಬರು ಸಹಾಯಕರೊಂದಿಗೆ ವಾಗ್ವಾದ ನಡೆಯಿತು ಎಂದು ತೃತೀಯ ಲಿಂಗಗಳ ಮನೆಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ರಫೀಕುಲ್ ಅವರು ತಿಳಿಸಿದ್ದಾರೆ.
ಜುಲೈ 26ರಂದು ಅವರು ತನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿಸಿದರು ಎಂದು ಅವರು ಆರೋಪಿಸಿದ್ದಾರೆ. ಆರೋಪಿಗಳು ತನ್ನ ಬ್ಯಾಗ್ನಲ್ಲಿದ್ದ 10 ಸಾವಿರ ರೂಪಾಯಿಯನ್ನು ಲೂಟಿಗೈದಿದ್ದಾರೆ. ತನ್ನ ತಲೆ ಬೋಳಿಸಿ, ಮೂತ್ರ ಕುಡಿಸಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ.
ರಫೀಕುಲ್ ಅವರ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಸಹಾವರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ. ಅನಂತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.