×
Ad

ಉ.ಪ್ರದೇಶ:ನಿವೃತ್ತ ಐಪಿಎಸ್ ಅಧಿಕಾರಿ ದಾರಾಪುರಿ ಸೇರಿದಂತೆ ಪ್ರತಿಭಟನಾನಿರತ ಆರು ಜನರ ಬಂಧನ

Update: 2023-10-13 21:44 IST

Photo: Facebook/Siddharth Ramu

ಲಕ್ನೋ: ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ದಲಿತ ಕುಟುಂಬಗಳಿಗೆ ತಲಾ ಒಂದು ಎಕರೆ ಭೂಮಿಯನ್ನು ನೀಡುವಂತೆ ಬೇಡಿಕೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆಯಲ್ಲಿ ತೊಡಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ಸೇರಿದಂತೆ ಆರು ಜನರನ್ನು ಪೊಲೀಸರು ಅ.11ರಂದು ಬಂಧಿಸಿದ್ದಾರೆ.

ದಾರಾಪುರಿ (79) ಸರಕಾರದ ಕಟು ಟೀಕಾಕಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಬಂಧಿತರನ್ನು ಬಿಡುಗಡೆ ಮಾಡಲಾಗಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿದ್ದ ಪ್ರತಿಭಟನಾಕಾರರು ದಾಂಧಲೆಯಲ್ಲಿ ತೊಡಗಿಕೊಂಡಿದ್ದರು ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.

‘ದಲಿತ ಸಮುದಾಯಗಳ ಸಮಸ್ಯೆಗಳು ಮತ್ತು ನಾಗರಿಕ ಹಕ್ಕುಗಳ ಕುರಿತು ಗೋರಖ್ಪುರ ಅಂಬೇಡ್ಕರ್ ಜನ ಮೋರ್ಚಾ ಅ.10ರಂದು ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ನಾನು ಭಾಗವಹಿಸಿದ್ದೆ ಮತ್ತು ಸಭೆಯು ಶಾಂತಿಪೂರ್ಣವಾಗಿ ಅಂತ್ಯಗೊಂಡಿತ್ತು. ಇಂದು ಬೆಳಿಗ್ಗೆ ನನ್ನನ್ನು ಠಾಣೆಗೆ ಕರೆದೊಯ್ಯಲು ಗೋರಖ್ಪುರ ಪೋಲಿಸರು ಮನೆಗೆ ಬಂದಿದ್ದರು ’ಎಂದು ದಾರಾಪುರಿ ಅ.11ರಂದು ಬಂಧನಕ್ಕೆ ಮುನ್ನ ಫೇಸ್ ಬುಕ್ ನಲ್ಲಿ ಬರೆದಿದ್ದರು.

ಭಾರತದಲ್ಲಿ ಬಡತನದ ಕುರಿತು ಕೆಲಸ ಮಾಡುತ್ತಿರುವ ಫ್ರೆಂಚ್ ಸಂಶೋಧನಾ ವಿದ್ವಾಂಸ ವ್ಯಾಲೆಂಟೈನ್ ಜೀನ್ ಬಂಧಿತರಲ್ಲಿ ಸೇರಿದ್ದಾರೆ. ಜೀನ್ ತನ್ನ ವೀಸಾದಲ್ಲಿ ಜಾರ್ಖಂಡ್ ನ ಧನಬಾದ್ ನ ತಪ್ಪು ವಿಳಾಸವನ್ನು ನೀಡಿದ್ದರು, ಹೀಗಾಗಿ ಅವರನ್ನು ವಿದೇಶಿಯರ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ತನ್ನ ತಂದೆ ಪಾರ್ಕಿನ್ಸನ್ಸ್ ರೋಗ ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ನರಳುತ್ತಿದ್ದಾರೆ ಎಂದು ದಾರಾಪುರಿಯವರ ಪುತ್ರ ವೇದಪ್ರಕಾಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

2003ರಲ್ಲಿ ನಿವೃತ್ತರಾದಾಗಿನಿಂದಲೂ ದಾರಾಪುರಿ ಮಾನವ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ಲಕ್ನೋನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕರ ಮತ್ತು ಸರಕಾರಿ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ 63 ಲ.ರೂ.ಗೂ ಅಧಿಕ ದಂಡವನ್ನು ಪಾವತಿಸುವಂತೆ ಸೂಚಿಸಲ್ಪಟ್ಟಿದ್ದ 28 ಜನರಲ್ಲಿ ದಾರಾಪುರಿ ಓರ್ವರಾಗಿದ್ದರು. ಪ್ರತಿಭಟನೆ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು, ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News