ಉತ್ತರಾಖಂಡ: ಪ್ರಧಾನಿ ಗುರಿಯಾಗಿರಿಸಿ ಡೀಪ್‌ಫೇಕ್ ಚಿತ್ರ, ವೀಡಿಯೊ
ಸಾಮಾಜಿಕ ಮಾಧ್ಯಮದ 18 ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲು
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್, ಡಿ. 10: ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿದ ಅತ್ಯಂತ ಅನಪೇಕ್ಷಿತ, ತಿರುಚಿದ ಚಿತ್ರ ಹಾಗೂ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಲು ಆರಂಭಿಸಿದ್ದು, ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಅತ್ಯಾಧುನಿಕ ಕೃತಕ ಬುದ್ಧಿ ಮತ್ತೆಯನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಸಂಘಟಿತ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕೂಡಲೇ ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬಿಜೆವೈಎಂನ ಮಹಾನಗರ ಅಧ್ಯಕ್ಷ ದೇವೇಂದ್ರ ಬಿಸ್ತ್ ಸಲ್ಲಿಸಿದ ಲಿಖಿತ ದೂರಿನಲ್ಲಿ ತಿರುಚಿದ ಭಾವಚಿತ್ರ ಹಾಗೂ ವೀಡಿಯೊಗಳನ್ನು ಹರಡುತ್ತಿರುವುದರಲ್ಲಿ ಪಾಲ್ಗೊಂಡಿರುವುದಾಗಿ ಆರೋಪಿಸಲಾದ ಸಾಮಾಜಿಕ ಮಾಧ್ಯಮದ 18 ಖಾತೆಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
‘‘ಈ ಕೃತಕ ಬುದ್ಧಿ ಮತ್ತೆಯಿಂದ ಸೃಷ್ಟಿಸಲಾದ ಫೋಟೊ ಹಾಗೂ ವೀಡಿಯೊಗಳು ಪ್ರಧಾನಿ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡುವ ಸ್ಪಷ್ಟ ಪ್ರಯತ್ನ’ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಚಹಾ ಮಾರುತ್ತಿರುವುದು, ಬಾಡಿ ಬಿಲ್ಡರ್‌ನಂತೆ ಶರ್ಟ್ ಧರಿಸದೆ ಭಂಗಿ ನೀಡುತ್ತಿರುವುದು, ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಿಂದೆ ಅಂಗ ರಕ್ಷಕನಂತೆ ನಿಂತಿರುವುದು ಚಿತ್ರ ಹಾಗೂ ವೀಡಿಯೊಗಳಲ್ಲಿ ಕಂಡು ಬಂದಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹಾಗೂ ಸಾಮರಸ್ಯ ಕದಡುವ ಉದ್ದೇಶದಿಂದ ಈ ಪೋಸ್ಟ್ ಹಾಗಲಾಗಿದೆ. ‘‘ಈ ಖಾತೆದಾರರು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ’’ ಎಂದು ಅವರು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿರುವುದನ್ನು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ವಿಸ್ತೃತ ತನಿಖೆಗಾಗಿ ಪ್ರಕರಣವನ್ನು ಸೈಬರ್ ಸೆಲ್‌ಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಶೋಕ್ ರಾಥೋಡ್ ತಿಳಿಸಿದ್ದಾರೆ.