×
Ad

ರಾಮದೇವ್ ಆಪ್ತ ಬಾಲಕೃಷ್ಣಗೆ 30,000 ಕೋಟಿ ರೂ ಮೌಲ್ಯದ ಭೂಮಿ 1 ಕೋಟಿ ರೂ. ಬಾಡಿಗೆಗೆ ನೀಡಿದ ಉತ್ತರಾಖಂಡ ಸರಕಾರ; ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2025-09-15 13:12 IST

ಆಚಾರ್ಯ ಬಾಲಕೃಷ್ಣ (Photo credit: divyayoga.com) 

ಡೆಹ್ರಾಡೂನ್‌: ಯೋಗಗುರು ಬಾಬಾ ರಾಮದೇವ್ ಅವರ ಆಪ್ತ ಆಚಾರ್ಯ ಬಾಲಕೃಷ್ಣ ನಿಯಂತ್ರಣದಲ್ಲಿರುವ ಕಂಪೆನಿಗೆ 30,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 142 ಎಕರೆ ಪಾರಂಪರಿಕ ಭೂಮಿಯನ್ನು ಉತ್ತರಾಖಂಡ ಸರ್ಕಾರ ಕೇವಲ ಒಂದು ಕೋಟಿ ರೂ.ಗಳ ವಾರ್ಷಿಕ ಬಾಡಿಗೆಗೆ ನೀಡಿರುವುದು ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಹಂಚಿಕೆ ರಾಜ್ಯ ಇತಿಹಾಸದಲ್ಲೇ ಅತಿದೊಡ್ಡ ಹಗರಣ ಎಂದು ಆರೋಪಿಸಿರುವ ಕಾಂಗ್ರೆಸ್, ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ಮಾಡಬೇಕು ಎಂದು ಒತ್ತಾಯಿಸಿದೆ.

ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕರಣ್ ಮಹಾರಾ, ಜಾರ್ಜ್ ಎವರೆಸ್ಟ್ ಎಸ್ಟೇಟ್‌ನ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಲ್ಲಿನ ಈ ಹಂಚಿಕೆ ಬಿಜೆಪಿ ಸರ್ಕಾರದ "ಕ್ರೋನಿ ಕ್ಯಾಪಿಟಲಿಸಂ"ಗೆ ನಿದರ್ಶನವಾಗಿದೆ ಎಂದು ಆರೋಪಿಸಿದರು.

"ಜನರ ಆಸ್ತಿ-ಪಾಸ್ತಿಗಳನ್ನು ಸರ್ಕಾರ ಖಾಸಗಿ ಹಿತಾಸಕ್ತಿಗಳಿಗೆ ನೀಡುತ್ತಿದೆ. ಈ ಹಗರಣದ ವಿರುದ್ಧ ಕಾಂಗ್ರೆಸ್ ಬೀದಿಯಿಂದ ಸದನದವರೆಗೆ ಹೋರಾಟ ನಡೆಸಲಿದೆ," ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು.

ಮಹಾರಾ ಅವರ ಪ್ರಕಾರ, 2022ರ ಡಿಸೆಂಬರ್‌ ನಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಟೆಂಡರ್‌ ನಲ್ಲಿ ರಾಜಾಸ್ ಏರೋಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ಸ್ ಪ್ರೈ. ಲಿ., ಭಾರುವಾ ಅಗ್ರಿ ಸೈನ್ಸ್ ಪ್ರೈ. ಲಿ., ಹಾಗೂ ಪ್ರಕೃತಿ ಆರ್ಗಾನಿಕ್ಸ್ ಇಂಡಿಯಾ ಪ್ರೈ. ಲಿ. ಎಂಬ ಮೂರು ಕಂಪೆನಿಗಳು ಭಾಗವಹಿಸಿದ್ದವು. ಇವುಗಳನ್ನೂ ಬಾಲಕೃಷ್ಣ ನೇರವಾಗಿ ನಿಯಂತ್ರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದ್ದು, ಇದು ಟೆಂಡರ್ ನಿಯಮಗಳು ಮತ್ತು ವಂಚನೆ ವಿರೋಧಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಅವರು ದೂರಿದರು.

"ಸರ್ಕಾರ ಮೊದಲು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಿಂದ 23.5 ಕೋಟಿ ರೂ. ಸಾಲ ಪಡೆದು ಜಾರ್ಜ್ ಎವರೆಸ್ಟ್ ಎಸ್ಟೇಟ್ ಅಭಿವೃದ್ಧಿ ಮಾಡಿತು. ನಂತರ ಅದೇ ಭೂಮಿಯನ್ನು 15 ವರ್ಷಗಳ ಕಾಲ ಕೇವಲ ಒಂದು ಕೋಟಿ ರೂ. ಬಾಡಿಗೆಗೆ ನೀಡಿದೆ. ಇದು ರಾಜ್ಯದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತಂದಿದೆ," ಎಂದು ಅವರು ಆರೋಪಿಸಿದರು.

ಈಗಾಗಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಶ್ಪಾಲ್ ಆರ್ಯ ಅವರೂ ಇದೇ ಪ್ರಕರಣದಲ್ಲಿ ಸಿಬಿಐ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಸಮಿತಿಯಿಂದ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದರು.

ಆದರೆ ಆಡಳಿತಾರೂಢ ಬಿಜೆಪಿ, ಈ ಆರೋಪಗಳನ್ನು ತಳ್ಳಿಹಾಕಿದೆ. ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್, "ಜಾರ್ಜ್ ಎವರೆಸ್ಟ್ ಎಸ್ಟೇಟ್‌ನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಹಂಚಿಕೆ ಸಂಪೂರ್ಣ ಕಾನೂನುಬದ್ಧ. ಸಾರ್ವಜನಿಕರ ಪ್ರವೇಶಕ್ಕೆ ಯಾವುದೇ ಅಡ್ಡಿಯಿಲ್ಲ. ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ಸುಳ್ಳಿನ ಕಂತೆಯಷ್ಟೇ," ಎಂದು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News