×
Ad

ನಾನು ಭಾರತವನ್ನು ತೊರೆಯುವ ಮುನ್ನ ಅರುಣ್ ಜೇಟ್ಲಿಗೆ ತಿಳಿಸಿದ್ದೆ:‌ ವಿಜಯ್ ಮಲ್ಯ

Update: 2025-06-06 16:20 IST

ವಿಜಯ್‌ ಮಲ್ಯ (Youtube screengrab/@RajShamani)

ಹೊಸದಿಲ್ಲಿ: ದೇಶಭ್ರಷ್ಟ ಮದ್ಯದ ದೊರೆ ವಿಜಯ್ ಮಲ್ಯ ಅವರು 2016ರಲ್ಲಿ ತಾನು ಭಾರತವನ್ನು ತೊರೆಯುವ ಮುನ್ನ ಆಗಿನ ವಿತ್ತಸಚಿವ ಅರುಣ್ ಜೇಟ್ಲಿಯವರಿಗೆ ತಿಳಿಸಿದ್ದೆ ಎಂದು ಈಗ ವೈರಲ್ ಆಗುತ್ತಿರುವ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಗೊಳಿಸಿದ್ದಾರೆ. ಮಲ್ಯ ಈ ಮಾಹಿತಿಯನ್ನು ಬಹಿರಂಗಗೊಳಿಸಿರುವುದು ಅವರ ನಿರ್ಗಮನ ಮತ್ತು ಅದರ ಸುತ್ತಲಿನ ಸಂದರ್ಭಗಳ ಕುರಿತು ರಾಜಕೀಯ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದೆ.

ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಮಲ್ಯ, ‘ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ನಾನು ವಿತ್ತಸಚಿವ ಅರುಣ ಜೇಟ್ಲಿಯವರಿಗೆ ತಿಳಿಸಿದ್ದೆ ಮತ್ತು ನಂತರ ದಿಲ್ಲಿಯಿಂದ ಲಂಡನ್‌ಗೆ ಪ್ರಯಾಣಿಸಿದ್ದೆ. ಈ ಸುದ್ದಿ ಸಾರ್ವಜನಿಕಗೊಂಡ ಬಳಿಕ ಅದು ಕೋಲಾಹಲವನ್ನು ಸೃಷ್ಟಿಸಿತ್ತು. ಹೆಚ್ಚುತ್ತಿದ್ದ ಕಾನೂನು ಒತ್ತಡದ ನಡುವೆ ಮಲ್ಯ ದೇಶವನ್ನು ತೊರೆಯಲು ಹೇಗೆ ಯಶಸ್ವಿಯಾದರು ಎಂದು ಮಾಧ್ಯಮಗಳು ಮತ್ತು ರಾಜಕೀಯ ವಲಯಗಳು ಪ್ರಶ್ನಿಸಿದ್ದವು’ ಎಂದು ಹೇಳಿದ್ದಾರೆ.

‘ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದಾಗ ಬಿರುಗಾಳಿಯನ್ನೇ ಸೃಷ್ಟಿಸಿತ್ತು. ಜನರು ಜೇಟ್ಲಿಯವರನ್ನು ಪ್ರಶ್ನಿಸಿದ್ದರು ಮತ್ತು ಅವರು ನನ್ನನ್ನು ಭೇಟಿಯಾಗಿದ್ದನ್ನು ನಿರಾಕರಿಸಿದ್ದರು. ನನ್ನನ್ನು ಮತ್ತು ಜೇಟ್ಲಿಯವರನ್ನು ತಾನು ಒಟ್ಟಿಗೆ ನೋಡಿದ್ದಾಗಿ ಕಾಂಗ್ರೆಸ್ ಸಂಸದರೋರ್ವರು ಮಾಧ್ಯಮಗಳಿಗೆ ತಿಳಿಸಿದ್ದರು. ಹೀಗಾಗಿ ತನ್ನ ಹೇಳಿಕೆಯನ್ನು ಹಿಂದೆಗೆದುಕೊಳ್ಳುವುದು ಜೇಟ್ಲಿಯವರಿಗೆ ಅನಿವಾರ್ಯವಾಗಿತ್ತು. ನಂತರ ಅವರು ನನ್ನನ್ನು ಭೇಟಿಯಾಗಿದ್ದನ್ನು ಒಪ್ಪಿಕೊಂಡಿದ್ದರು,ಆದರೆ ನಡೆದುಕೊಂಡು ಹೋಗುತ್ತಿರುವಾಗ ನಡೆದಿದ್ದ ಈ ಭೇಟಿ ಕ್ಷಣಿಕವಾಗಿತ್ತು ಎಂದು ಹೇಳಿಕೊಂಡಿದ್ದರು’ ಎಂದು ಮಲ್ಯ ನೆನಪಿಸಿಕೊಂಡಿದ್ದಾರೆ.

ತನ್ನ ಹೇಳಿಕೆಯನ್ನು ಸ್ಪಷ್ಟಪಡಿಸಿರುವ ಮಲ್ಯ,‘ಜೇಟ್ಲಿಯವರನ್ನು ಅವರ ಕಚೇರಿಯಲ್ಲಿ ಔಪಚಾರಿಕವಾಗಿ ಭೇಟಿಯಾಗಿದ್ದೆ ಎಂದು ನಾನೆಂದಿಗೂ ಹೇಳಿರಲಿಲ್ಲ. ಜಿನೀವಾದಲ್ಲಿ ಸಭೆಯೊಂದರಲ್ಲಿ ಪಾಲ್ಗೊಳ್ಳಲು ನಾನು ಲಂಡನ್‌ಗೆ ತೆರಳುತ್ತಿದ್ದೇನೆ ಎಂದಷ್ಟೇ ನಾನು ಜೇಟ್ಲಿಯವರಿಗೆ ತಿಳಿಸಿದ್ದೆ. ನಾನು ವಾಪಸಾಗುತ್ತೇನೆ. ಮೇಜಿನಲ್ಲಿ ನನ್ನೆದುರು ಕುಳಿತುಕೊಂಡು ಇತ್ಯರ್ಥಕ್ಕೆ ಬರುವಂತೆ ಬ್ಯಾಂಕುಗಳಿಗೆ ತಿಳಿಸಿ. ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?’ ಎಂದು ಹೇಳಿದ್ದಾರೆ.

ಮಾಧ್ಯಮಗಳು ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸುತ್ತಿವೆ ಎಂದೂ ಆರೋಪಿಸಿದ ಮಲ್ಯ, ಇದು ಮಾಧ್ಯಮಗಳ ಸಮಸ್ಯೆ, ವಿಶೇಷವಾಗಿ ತನಗೆ ಸಂಬಂಧಿಸಿದಂತೆ. ಅವು ವಿಷಯವನ್ನು ಕಲ್ಪಿಸಿಕೊಳ್ಳುತ್ತವೆ, ಏನು ಬೇಕಾದರೂ ಹೇಳುತ್ತವೆ. ಸರಿ,ಅದು ಅವರ ವ್ಯವಹಾರಕ್ಕೆ ಒಳ್ಳೆಯದು,ಅದನ್ನು ಅವು ಮುಂದುವರಿಸಲಿ ಎಂದು ಹೇಳಿದರು.

ಮಲ್ಯರ ಹೇಳಿಕೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಪವನ ಖೇರಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ತಿಳಿಸುವ ಮೂಲಕ ಅದರ ಮೇಲೆ ದಾಳಿ ಮಾಡುತ್ತಾರೆ. ಬ್ಯಾಂಕ್ ವಂಚಕರು ವಿತ್ತಸಚಿವರಿಗೆ ಮಾಹಿತಿ ನೀಡಿದ ಬಳಿಕ ದೇಶದಿಂದ ಪರಾರಿಯಾಗಿತ್ತಾರೆ. ನರೇಂದ್ರ ಮೋದಿಯವರ ಇಡೀ ವ್ಯವಸ್ಥೆಯೇ ಶರಣಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಮಲ್ಯರಂತಹ ವ್ಯಕ್ತಿಗಳು ತನಿಖೆಯಲ್ಲಿದ್ದರೂ ಪರಾರಿಯಾಗಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆಗಳನ್ನು ಪ್ರತಿಪಕ್ಷಗಳು ಮತ್ತೆ ಎತ್ತುವುದರೊಂದಿಗೆ ವಿವಾದವು ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ರಾಜಕೀಯ ಬಿಸಿಯನ್ನು ಹೆಚ್ಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News