×
Ad

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆ: ಮತ್ತೆ ಕ್ಷಮೆಯಾಚಿಸಿದ ಬಿಜೆಪಿ ಸಚಿವ ವಿಜಯ್ ಶಾ

Update: 2025-05-24 11:43 IST

ಕುನ್ವರ್ ವಿಜಯ್ ಶಾ (Photo: X/@KrVijayShah)

ಹೊಸದಿಲ್ಲಿ : ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣನಾಗಿದ್ದ ಮಧ್ಯಪ್ರದೇಶ ಸಚಿವ ಕುನ್ವರ್ ವಿಜಯ್ ಶಾ ಮತ್ತೆ ಕ್ಷಮೆಯಾಚಿಸಿದ್ದು, ʼಭಾಷಾ ಬಳಕೆಯಲ್ಲಾದ ದೋಷʼ ಎಂದು ಹೇಳಿಕೊಂಡಿದ್ದಾರೆ.

ಆಪರೇಷನ್ ಸಿಂಧೂರ್ ಕುರಿತ ಹೇಳಿಕೆ ವೇಳೆ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಕುನ್ವರ್ ವಿಜಯ್ ಶಾ ʼಭಯೋತ್ಪಾದಕರ ಸಹೋದರಿʼ ಎಂದು ಕರೆದಿದ್ದರು. ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ʼಜೈ ಹಿಂದ್, ಕೆಲವು ದಿನಗಳ ಹಿಂದೆ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಹತ್ಯಾಕಾಂಡದಿಂದ ನಾನು ಬಹಳ ದುಃಖಿತನಾಗಿದ್ದೇನೆ. ನನ್ನ ರಾಷ್ಟ್ರದ ಬಗ್ಗೆ ನನಗೆ ಯಾವಾಗಲೂ ಅಪಾರ ಪ್ರೀತಿ ಮತ್ತು ಭಾರತೀಯ ಸೇನೆಯ ಬಗ್ಗೆ ಗೌರವವಿದೆ. ನಾನು ಹೇಳಿದ ಮಾತುಗಳು ಸಮುದಾಯ, ಧರ್ಮ ಮತ್ತು ದೇಶವಾಸಿಗಳಿಗೆ ನೋವುಂಟು ಮಾಡಿದೆ. ಅದು ನನ್ನ ಭಾಷಾ ಬಳಕೆಯಲ್ಲಾದ ದೋಷʼʼ ಎಂದು ವಿಜಯ್ ಶಾ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಯಾವುದೇ ಧರ್ಮ, ಜಾತಿ ಅಥವಾ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನನ್ನ ತಪ್ಪಾದ ಹೇಳಿಕೆಗೆ ವಿಷಾದಿಸುತ್ತೇನೆ. ಭಾರತೀಯ ಸೇನೆ, ಸಹೋದರಿ ಸೋಫಿಯಾ ಖುರೇಷಿ ಮತ್ತು ನನ್ನ ಎಲ್ಲಾ ದೇಶವಾಸಿಗಳಿಗೆ ಕೈಮುಗಿದು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಪಕ್ಷಗಳು, ಮಧ್ಯಪ್ರದೇಶ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ವಿಜಯ್ ಶಾ ಈ ಹಿಂದೆ ಎರಡು ಬಾರಿ ಕ್ಷಮೆಯಾಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News