×
Ad

ವ್ಯಕ್ತಿಯನ್ನು ಕೊಂದ ಹುಲಿಯನ್ನು ಸಾಯಿಸಿದ ಗ್ರಾಮಸ್ಥರು!

Update: 2024-11-04 09:34 IST
ಸಾಂದರ್ಭಿಕ ಚಿತ್ರ PC: istockphoto.com

ಜೈಪುರ: ರಾಜಸ್ಥಾನದ ರಣಥಾಂಬೋರ್ ರಾಷ್ಟ್ರೀಯ ಉದ್ಯಾನವನ ಪಕ್ಕದ ಉಲಿಯಾನಾ ಗ್ರಾಮದಲ್ಲಿ ಹುಲಿಯೊಂದು ದಾಳಿ ಮಾಡಿ 45 ವರ್ಷದ ವ್ಯಕ್ತಿಯೊಬ್ಬರನ್ನು ಕೊಂದು ಹಾಕಿದ್ದಕ್ಕೆ ಪ್ರತೀಕಾರವಾಗಿ 10 ವರ್ಷದ ಗಂಡು ಹುಲಿಯನ್ನು ಗ್ರಾಮಸ್ಥರು ಸಾಯಿಸಿದ ಘಟನೆ ಬೆಳಕಿಗೆ ಬಂದಿದೆ.

ಶನಿವಾರದ ಹುಲಿ ದಾಳಿ ಘಟನೆಯಿಂದ ಉದ್ರಿಕ್ತರಾದ ಜನತೆ ದಿಢೀರ್ ಪ್ರತಿಭಟನೆ ನಡೆಸಿದರು. ಮೃತ ವ್ಯಕ್ತಿಯ ಶವದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು ಉದ್ಯಾನವನಕ್ಕೆ ಹೋಗುವ ರಸ್ತೆಯನ್ನು ತಡೆದರು. ರಾಜ್ಯ ಸರ್ಕಾರದ ಅಧಿಕಾರಿಗಳ ಜತೆಗಿನ ಮಾತುಕತೆ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು. ಆ ಬಳಿಕ ಗ್ರಾಮಸ್ಥರು ಹುಲಿಯನ್ನು ಸುತ್ತುವರಿದು ಕಲ್ಲು ಮತ್ತು ಕೊಡಲಿಯಿಂದ ದಾಳಿ ನಡೆಸಿದರು. ರವಿವಾರ ತಡರಾತ್ರಿವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಶವವನ್ನು ವಶಕ್ಕೆ ಪಡೆದಿರಲಿಲ್ಲ.

ಇದು ಸ್ಥಳೀಯ ಅರಣ್ಯ ಆಡಳಿತ ಮತ್ತು ನಿಗಾ ವ್ಯವಸ್ಥೆಯ ಅಂತರವನ್ನು ಬಿಂಬಿಸುತ್ತದೆ. ಈ ಪ್ರದೇಶದ ಇತರ ಹುಲಿಗಳ ಸಂರಕ್ಷಣೆಗೆ ಕಟ್ಟೆಚ್ಚರ ವಹಿಸುವ ಅಗತ್ಯವನ್ನು ಪ್ರತಿಪಾದಿಸುತ್ತದೆ ಎಂದು ಹಿರಿಯ ನಿವೃತ್ತ ಅಧಿಕಾರಿಗಳು ಹೇಳಿದ್ದಾರೆ. ರಾಜಸ್ಥಾನ ಕೃಷಿ ಸಚಿವ ಕಿರೋರಿ ಲಾಲ್ ಮೀನಾ ಅವರು ವಿವಿಧ ಬೇಡಿಕೆಗಳ ಬಗ್ಗೆ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ವಾಪಾಸು ಪಡೆಯಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News