×
Ad

Fact Check: ವಿಧಿ 30A ಶಾಲಾ ಕಾಲೇಜುಗಳಲ್ಲಿ ಹಿಂದು ಧರ್ಮದ ಬಗ್ಗೆ ಕಲಿಸುವುದನ್ನು ನಿರ್ಬಂಧಿಸುತ್ತದೆಯೇ?

Update: 2023-11-02 15:24 IST

ಸಾಂದರ್ಭಿಕ ಚಿತ್ರ (PTI)

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂವಿಧಾನದ “ವಿಧಿ 30 A” ವಿರುದ್ಧ ಕೈಗೊಳ್ಳಲಿದ್ಧಾರೆನ್ನಲಾದ ಕ್ರಮವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆಯ ಪೋಸ್ಟ್‌ ಒಂದು ವೈರಲ್‌ ಆಗಿದೆ. ಮೋದಿ ಅವರು ಸಂವಿಧಾನದ ವಿಧಿ 30A ಅನ್ನು ರದ್ದುಗೊಳಿಸಲಿದ್ದಾರೆ ಎಂದು ಈ ವೈರಲ್‌ ಪೋಸ್ಟ್‌ ಹೇಳಿಕೊಂಡಿದೆ.

ಅಷ್ಟೇ ಅಲ್ಲದೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಈ ವಿಧಿಯನ್ನು ಸೇರಿಸಿ ಹಿಂದು ಧರ್ಮ ಮತ್ತು ಹಿಂದು ಸಂಸ್ಕೃತಿ ಕುರಿತು ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಸುವುದನ್ನು ನಿರ್ಬಂಧಿಸಿದ್ದರು, ಈ ವಿಧಿಯನ್ನು ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ವಿರೋಧಿಸಿದ್ದರು ಹಾಗೂ ಅವರ ಒತ್ತಡದ ಹಿನ್ನೆಲೆಯಲ್ಲಿ ನೆಹರೂ ಅದನ್ನು ವಾಪಸ್‌ ಪಡೆದಿದ್ದರು ಹಾಗೂ ಪಟೇಲ್‌ ನಿಧನಾನಂತರ ಮತ್ತೆ ಜಾರಿಗೆ ತಂದಿದ್ದರು ಎಂದು ಈ ವೈರಲ್‌ ಪೋಸ್ಟ್‌ ಹೇಳಿಕೊಂಡಿದೆ.

ಅಷ್ಟೇ ಅಲ್ಲದೆ ಈ ವಿಧಿ 30ಎ ಹಿಂದು ದೇವಸ್ಥಾನಗಳಿಗೆ ದೊರೆಯುವ ದೇಣಿಗೆಯನ್ನು ಸರ್ಕಾರದ ಬಳಕೆಗೆ ಪಡೆದುಕೊಳ್ಳಲು ಅನುವು ಮಾಡಿಕೊಟ್ಟರೆ ಮಸೀದಿಗಳು ಮತ್ತು ಚರ್ಚುಗಳಿಗೆ ಮಾಡಿದ ದೇಣಿಗಳು ಆಯಾ ಸಮುದಾಯಗಳಿಗೆ ಪ್ರಯೋಜನಕ್ಕೆ ಬಳಕೆಯಾಗುತ್ತವೆ ಎಂದೂ ಹೇಳಿಕೊಂಡಿದೆ. ಈ ವಿಧಿಯು ಮದರಸಾಗಳಲ್ಲಿ ಕುರ್ ಆನ್‌ ಕಲಿಕೆಗೆ ಅನುಮತಿ ನೀಡುತ್ತದೆ ಆದರೆ ಶಾಲೆಗಳಲ್ಲಿ ಗೀತೆಯನ್ನು ಕಲಿಸಲು ಅನುಮತಿಸುವುದಿಲ್ಲ ಎಂದೂ ಈ ವೈರಲ್‌ ಪೋಸ್ಟ್‌ನಲ್ಲಿ ಹೇಳಲಾಗಿದೆ.

ವಾಸ್ತವವೇನು?

ನಮ್ಮ ಸತ್ಯಶೋಧನೆಯಿಂದ ಈ ವೈರಲ್‌ ಪೋಸ್ಟ್‌ನಲ್ಲಿ ಹೇಳಿದ್ದೆಲ್ಲವೂ ಸುಳ್ಳು ಎಂದು ಸಾಬೀತಾಗಿದೆ. ಭಾರತದ ಸಂವಿಧಾನದಲ್ಲಿ ವಿಧಿ 30ಎ ಇಲ್ಲ. ವಿಧಿ30 ಇದೆ ಹಾಗೂ ಅಲ್ಪಸಂಖ್ಯಾತರಿಂದ ನಡೆಸಲ್ಪಡುವ ಶಿಕ್ಷಣ ಸಂಸ್ಥೆಗಳಿಗೆ ಕೆಲವೊಂದು ಹಕ್ಕುಗಳನ್ನು ನೀಡುತ್ತವೆ. ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸುವ ಅಧಿಕಾರವನ್ನು ಅದು ನೀಡುತ್ತದೆ.

ಈ ವಿಧಿಗೆ ಮೂರು ಉಪಸೆಕ್ಷನ್‌ಗಳಿವೆ.

1. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕು: ಎಲ್ಲಾ ಅಲ್ಪಸಂಖ್ಯಾತರು, ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರಿರಬಹುದು, ಅವರಿಗೆ ಅವರ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನಡೆಸುವ ಹಕ್ಕಿದೆ.

2. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಡೆತನದ ಜಮೀನಿನ ಕಡ್ಡಾಯ ಸ್ವಾಧೀನದ ಅಗತ್ಯವಿದ್ದಲ್ಲಿ ಅದು ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂಬುದನ್ನು ಸರ್ಕಾರ ಖಾತ್ರಿಪಡಿಸಬೇಕಿದೆ.

3. ಆರ್ಥಿಕ ಸಹಾಯದಲ್ಲಿ ತಾರತಮ್ಯವಿರಬಾರದು: ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಒದಗಿಸುವಲ್ಲಿ ಸರ್ಕಾರ ತಾರತಮ್ಯ ಮಾಡುವ ಹಾಗಿಲ್ಲ.

ವಿಧಿ 30 ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮದೇ ಭಾಷೆಯಲ್ಲಿ ಶಿಕ್ಷಣ ಒದಗಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಮುಸ್ಲಿಮರಿಗೆ ಅವರ ಶಾಲೆಗಳಲ್ಲಿ ಉರ್ದು ಭಾಷಾ ಮಾಧ್ಯಮ ಹೊಂದಬಹುದು ಹಾಗೂ ಕ್ರೈಸ್ತ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮ ಹೊಂದಬಹುದು.

ಭಾರತದ ಸಂವಿಧಾನದಲ್ಲಿ ವಿಧಿ 30ಎ ಅನ್ನುವುದು ಇಲ್ಲ. ವಿಧಿ 30 ಅಲ್ಪಸಂಖ್ಯಾತ ಹಕ್ಕುಗಳನ್ನು ಖಾತ್ರಿ ಪಡಿಸುತ್ತದೆ, ಶಿಕ್ಷಣ ಸಂಸ್ಥೆಗಳನ್ನು ಅವರಿಗೆ ಸ್ಥಾಪಿಸಲು ನಿರ್ವಹಿಸಲು ಅನುಮತಿಸುತ್ತದೆ ಮತ್ತು ಧಾರ್ಮಿಕ ಗ್ರಂಥಗಳನ್ನು ಕಲಿಸುವ ನಿಟ್ಟಿನಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ.

ಹಿಂದು ಧರ್ಮದ ಮೇಲಿರುವ ಕೆಲವೊಂದು ನಿರ್ಬಂಧಗಳು, ದಾರ್ಮಿಕ ಸ್ಥಳಗಳಿಗೆ ನೀಡಲಾಗುವ ದೇಣಿಗೆಗಳ ಬಳಕೆ ಕುರಿತಂತೆ ಭಿನ್ನ ನಿಯಮಗಳು ಮುಂತಾದ ಕುರಿತಂತೆ ವೈರಲ್‌ ಪೋಸ್ಟ್‌ನಲ್ಲಿ ಹೇಳಲಾಗಿರುವುದು ಸುಳ್ಳು ಹಾಗೂ ಆಧಾರರಹಿತವಾಗಿದೆ ಎಂಬುದು ಈ ಸತ್ಯಶೋಧನೆಯಿಂದ ತಿಳಿದು ಬರುತ್ತದೆ.

 

 

‌                                                                          (ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News