ಚಲಾವಣೆಯಾದ ಮತ್ತು ಎಣಿಕೆಯಾದ ಮತಗಳು ತಾಳೆಯಾಗದಿರಬಹುದು : ಕಪಿಲ್ ಸಿಬಲ್
ಕಪಿಲ್ ಸಿಬಲ್ | PC : PTI
ಹೊಸದಿಲ್ಲಿ: ಮತಗಟ್ಟೆವಾರು ಮತದಾನ ಅಂಕಿಸಂಖ್ಯೆಗಳನ್ನು ಬಹಿರಂಗಪಡಿಸಲು ಚುನಾವಣಾ ಆಯೋಗ ನಿರಾಕರಿಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಗುರುವಾರ ಹೇಳಿದ್ದಾರೆ. ಚುನಾವಣಾ ಆಯೋಗದ ಈ ಕ್ರಮದಿಂದ ಚಲಾವಣೆಯಾದ ಮತಗಳು ಮತ್ತು ಎಣಿಕೆಯಾದ ಮತಗಳು ತಾಳೆಯಾಗದಿರುವ ಸಾಧ್ಯತೆ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತದಾನ ಸಂಬಂಧಿ ಅಂಕಿ ಅಂಶಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುವುದಕ್ಕೆ ಚುನಾವಣಾ ಆಯೋಗವು ಯಾಕೆ ಹಿಂಜರಿಯುತ್ತಿದೆ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದರು.
‘‘ಫಾರ್ಮ್ 17ನ್ನು ವೆಬ್ಸೈಟ್ನಲ್ಲಿ ಹಾಕಲು ತನಗೆ ಕಾನೂನು ಹೇಳುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿದಾವಿತ್ನಲ್ಲಿ ಹೇಳಿದೆ. ಫಾರ್ಮ್ 17 ಎಂದರೆ, ಮತಗಟ್ಟೆಯೊಂದರಲ್ಲಿ ಚಲಾವಣೆಯಾದ ಮತಗಳ ದಾಖಲೆ. ಮತದಾನದ ಕೊನೆಯಲ್ಲಿ ಫಾರ್ಮ್ 17ಕ್ಕೆ ಮತಗಟ್ಟೆ ಅಧಿಕಾರಿ ಸಹಿ ಮಾಡಿ ಮತಗಟ್ಟೆ ಏಜಂಟ್ಗೆ ಕೊಡಲಾಗುತ್ತದೆ. ಈ ಮಾಹಿತಿಯನ್ನು ನೇರವಾಗಿ ಭಾರತೀಯ ಚುನಾವಣಾ ಆಯೋಗಕ್ಕೂ ಕಳುಹಿಸಲಾಗುತ್ತದೆ. ಈಗ, ಚುನಾವಣಾ ಆಯೋಗವು ಆ ಮಾಹಿತಿಗಳನ್ನು ವೆಬ್ಸೈಟ್ನಲ್ಲಿ ಯಾಕೆ ಹಾಕುವುದಿಲ್ಲ? ಅವರಿಗೆ ಹಿಂಜರಿಕೆ ಯಾಕೆ ಅಥವಾ ಅವರ ಸಮಸ್ಯೆ ಏನು?’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಸಿಬಲ್ ಹೇಳಿದರು.
‘‘ಈ ಪ್ರಕ್ರಿಯೆಯಲ್ಲಿ ಏನಾಗಬಹುದೆಂದರೆ, ಎಣಿಕೆಯಾದ ಮತಗಳ ಸಂಖ್ಯೆಯು ಚಲಾವಣೆಯಾದ ಮತಗಳ ಸಂಖ್ಯೆಗಿಂತ ಹೆಚ್ಚಾಗುತ್ತದೆ. ಆಗ, ಯಾವ ಸಂಖ್ಯೆ ಸರಿ ಎನ್ನುವುದು ನಮಗೆ ಗೊತ್ತಾಗುವುದಿಲ್ಲ. ಆದರೆ, ಆ ಅಂಕಿಸಂಖ್ಯೆಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಲು ಚುನಾವಣಾ ಆಯೋಗವು ಯಾಕೆ ಹಿಂಜರಿಯುತ್ತಿದೆ. ಅದನ್ನು ಯಾರೂ ತಿರುಚಲು ಸಾಧ್ಯವಿಲ್ಲ’’ ಎಂದು ಸುಪ್ರೀಂ ಕೋರ್ಟ್ ವಕೀಲ ಹೇಳಿದರು.
ಎಲ್ಲಾ ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳ ಅಂತಿಮ ಅಧಿಕೃತ ಅಂಕಿಸಂಖ್ಯೆಗಳನ್ನು ಪ್ರಕಟಿಸುವಂತೆ ಕೋರಲು ಕಾನೂನು ಯಾರಿಗೂ
ಹಕ್ಕು ನೀಡಿಲ್ಲ ಎಂದು ಭಾರತೀಯ ಚುನಾವಣಾ ಆಯೋಗವು ಬುಧವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ವಿವರಗಳು ಮತದಾರರಲ್ಲಿ ಗೊಂದಲ ಮೂಡಿಸಬಹುದು, ಯಾಕೆಂದರೆ ಮತ ಎಣೆಕೆಯು ಅಂಚೆ ಮತಗಳ ಎಣಿಕೆಯನ್ನೂ ಒಳಗೊಂಡಿರುತ್ತದೆ ಎಂದು ತನ್ನ ಅಫಿದಾವಿತ್ನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಫಾರ್ಮ್ 17ಸಿಯ ಅಂಕಿಅಂಶಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದರೆ, ಅದು ಇಡೀ ಚುನಾವಣೆಯನ್ನು ಹಾಳುಗೆಡವಬಹುದು ಎಂದು ಆಯೋಗ ಹೇಳಿಕೊಂಡಿದೆ. ‘‘ಯಾವುದಾದರೂ ಚುನಾವಣಾ ಸ್ಪರ್ಧೆಯಲ್ಲಿ ವಿಜಯದ ಅಂತರ ಅತ್ಯಂತ ಕಡಿಮೆ ಇರಬಹುದು. ಇಂಥ ಸಂದರ್ಭದಲ್ಲಿ, 17ಸಿಯ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದರೆ, ಅದು ಚಲಾವಣೆಯಾಗಿರುವ ಮತಗಳ ಕುರಿತಂತೆ ಜನರ ಮನಸ್ಸಿನಲ್ಲಿ ಗೊಂದಲ ಹುಟ್ಟಿಸಬಹುದು. ಏಕೆಂದರೆ, ಮತಎಣಿಕೆಯಲ್ಲಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳು ಮತ್ತು ಅಂಚೆ ಮೂಲಕ ಚಲಾವಣೆಯಾದ ಮತಗಳೆರಡನ್ನು ಎಣಿಸಲಾಗುತ್ತದೆ’’ ಎಂದು ಅದು ಹೇಳಿದೆ.