×
Ad

ಪಶ್ಚಿಮ ಬಂಗಾಳ | ಐದರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ, ಆರೋಪಿಯನ್ನು ಥಳಿಸಿ ಕೊಂದ ಗುಂಪು

Update: 2024-11-04 21:39 IST

ಸಾಂದರ್ಭಿಕ ಚಿತ್ರ

ಕೋಲ್ಕತಾ : ಐದರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಹತ್ಯೆಗೈದಿದ್ದ ಆರೋಪಿಯನ್ನು ಕುಪಿತ ಗುಂಪು ಥಳಿಸಿ ಕೊಂದ ಘಟನೆ ಶುಕ್ರವಾರ ಉತ್ತರ ಬಂಗಾಳದ ಫಲಕತಾದಲ್ಲಿ ನಡೆದಿದೆ.

ಗ್ರಾಮಸ್ಥರು ಆರೋಪಿ ಮೋನಾ ರಾಯ್(40)ನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಪೋಲಿಸರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟಿದ್ದ.

ಅತ್ಯಾಚಾರ ಸಂತ್ರಸ್ತೆಯ ಹೆತ್ತವರು ಪೋಲಿಸರಿಗೆ ನಾಪತ್ತೆ ದೂರನ್ನು ಸಲ್ಲಿಸಿದ್ದರು. ಹುಡುಕಾಟ ಆರಂಭಿಸಿದ್ದ ಪೋಲಿಸರು ಕೆರೆಯೊಂದರಲ್ಲಿ ಬಾಲಕಿಯ ಶವವನ್ನು ಪತ್ತೆ ಹಚ್ಚಿದ್ದರು.

ಘಟನೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ಬಗ್ಗೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಶಂಕೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದಾಳಿ ನಡೆಸಿದ ಅವರು, ವ್ಯವಸ್ಥೆಯಲ್ಲಿ ಏನು ತಪ್ಪಿದೆ ಎಂಬ ಬಗ್ಗೆ ಬಂಗಾಳ ಸರಕಾರವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಅತ್ತ ದಕ್ಷಿಣ 24 ಪರಗಣಗಳ ಜಿಲ್ಲೆಯ ಗಾಯಿಘಾಟಾದಲ್ಲಿ ಯುವತಿಯೋರ್ವಳು ಶುಕ್ರವಾರ ಟ್ಯೂಷನ್ಗೆ ತೆರಳುತ್ತಿದ್ದಾಗ ಆಕೆಯನ್ನು ಅಪಹರಿಸಿ ಅತ್ಯಾಚಾರವೆಸಗಲಾಗಿದೆ. ಬಳಿಕ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಮನೆಯವರು ಆಕೆಯನ್ನು ರಕ್ಷಿಸಿದ್ದಾರೆ. ಆರೋಪಿ ಸ್ಥಳೀಯ ಟಿಎಂಸಿ ನಾಯಕನ ಸೋದರಳಿಯ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಆತ ಒಂದು ವರ್ಷದಿಂದಲೂ ತಮ್ಮ ಪುತ್ರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಹೆತ್ತವರು ಪೋಲಿಸ್ ದೂರನ್ನು ದಾಖಲಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News