×
Ad

ಆಪರೇಷನ್ ಸಿಂಧೂರ್ ದಾಳಿಯ ಗುರಿ ಯಾವುದು? ಇಲ್ಲಿದೆ ಸಮಗ್ರ ಮಾಹಿತಿ

Update: 2025-05-07 08:00 IST

PC: x.com/ndtv

ಹೊಸದಿಲ್ಲಿ: ಪಹಲ್ಗಾಮ್ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳ ಒಂಬತ್ತು ಕೇಂದ್ರಗಳ ಮೇಲೆ ಭಾರತ ನಿಖರ ದಾಳಿ ನಡೆಸಿದೆ. ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷ ಉಲ್ಬಣವಾದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಈ ದಾಳಿಯ ಉದ್ದೇಶ, ಪರಿಣಾಮ ಮತ್ತು ದಾಳಿಯ ಹಿಂದಿನ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ರಕ್ಷಣಾ ಸಚಿವಾಲಯ ಹೇಳಿದೆ.

"ಒಟ್ಟು ಒಂಬತ್ತು ಕೇಂದ್ರಗಳ ಮೇಲೆ ನಿಖರ ದಾಳಿ ನಡೆದಿದೆ. ನಮ್ಮ ಕಾರ್ಯಾಚರಣೆ ಉದ್ದೇಶಪೂರ್ವಕ, ಸಂಯಮದಿಂದ ಕೂಡಿದ್ದು ಮತ್ತು ಉದ್ವಿಗ್ನತೆ ಹೆಚ್ಚದಂತೆ ತಡೆಯುವ ನಿಖರ ದಾಳಿ. ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆದಿಲ್ಲ. ಗುರಿಗಳ ಆಯ್ಕೆ ಹಾಗೂ ಕಾರ್ಯಾಚರಣೆಯ ವಿಧಾನದಲ್ಲೂ ಭಾರತ ಗರಿಷ್ಠ ಸಂಯಮ ಸಾಧಿಸಿದೆ ಎಂದು ಸಚಿವಾಲಯ ವಿವರ ನೀಡಿದೆ. ಘಟನೆಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ನಾವು ಬದ್ಧ ಎಂದು ಸ್ಪಷ್ಟಪಡಿಸಿದೆ.

ಸಮರ ಸಾರಿರುವ ಭಾರತಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ಎಲ್ಲ ಹಕ್ಕನ್ನು ಪಾಕಿಸ್ತಾನ ಮೀಸಲಿರಿಸಿಕೊಂಡಿದೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಸ್ಪಷ್ಟಪಡಿಸಿದ್ದಾರೆ. ಈ ಪ್ರತ್ಯುತ್ತರದ ಕ್ರಮ ಈಗಾಗಲೇ ಆರಂಭವಾಗಿದೆ ಎಂದು ವಿವರಿಸಿದ್ದಾರೆ.

ಪಾಕಿಸ್ತಾನದ ಸಶಸ್ತ್ರ ಪಡೆಗಳ ಜತೆ ಇಡೀ ದೇಶ ಸಂಘಟಿತವಾಗಿ ನಿಲ್ಲಲಿದೆ. ರಾಷ್ಟ್ರದ ನೈತಿಕತೆ ಮತ್ತು ಬದ್ಧತೆ ಗರಿಷ್ಠವಾಗಿದೆ. ಶತ್ರುಗಳ ಜತೆ ಹೇಗೆ ವ್ಯವಹರಿಸಬೇಕು ಎನ್ನುವುದು ಪಾಕಿಸ್ತಾನದ ಸಶಸ್ತ್ರ ಪಡೆಗಳಿಗೆ ಹೆಚ್ಚಾಗಿ ತಿಳಿದಿದೆ. ಶತ್ರುದೇಶದ ನೀಚ ಗುರಿಗಳು ಯಶಸ್ವಿಯಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಜೈಶ್ ಇ ಮೊಹ್ಮದ್ ನ ಬಹವಾಲ್ ಪುರ ಮತ್ತು ಲಷ್ಕರ್ ಎ ತೊಯ್ಬಾದ ಮುರಿಡ್ಕೆ ಮೇಲೆ ಸೇರಿದಂತೆ ಒಂಬತ್ತು ಕೇಂದ್ರಗಳ ಮೇಲೆ ಭಾರತ ದಾಳಿ ನಡೆಸಿದೆ. ಅತ್ಯಾಧುನಿಕ ನಿಖರ ಶಸ್ತ್ರಾಸ್ತ್ರಗಳನ್ನು ಮತ್ತು ಗುಪ್ತಚರ ಆಧರಿತ ಗುರಿಗಳನ್ನು ಬಳಸಿಕೊಂಡು ಸೇನೆ, ನೌಕಾಪಡೆ ಹಾಗೂ ವಾಯುಪಡೆ ಸಂಘಟಿತ ದಾಳಿಗಳನ್ನು ನಡೆಸಿದೆ. ಆದರೆ ಎಲ್ಲೂ ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News