×
Ad

ಹೌದಿಗಳ ದಾಳಿ ತಡೆಯುವ ಅಮೆರಿಕ ನೇತೃತ್ವದ ಒಕ್ಕೂಟಕ್ಕೆ ಸೇರುವುದಿಲ್ಲ: ಸ್ಪೇನ್ ಘೋಷಣೆ

Update: 2023-12-25 22:11 IST

Photo: NDTV 

ಮ್ಯಾಡ್ರಿಡ್: ಕೆಂಪು ಸಮುದ್ರದ ಜಲಮಾರ್ಗದಲ್ಲಿ ಸಂಚರಿಸುವ ಹಡಗುಗಳನ್ನು ಯೆಮನ್‍ನ ಹೌದಿ ಬಂಡುಗೋರರ ದಾಳಿಯಿಂದ ರಕ್ಷಿಸುವ ಉದ್ದೇಶದ ಅಮೆರಿಕ ನೇತೃತ್ವದ ಒಕ್ಕೂಟಕ್ಕೆ ಸೇರುವುದಿಲ್ಲ ಎಂದು ಸ್ಪೇನ್ ಘೋಷಿಸಿದೆ.

ಕೆಂಪು ಸಮುದ್ರದ ವ್ಯಾಪಾರ ಮಾರ್ಗದಲ್ಲಿ ಸಂಚರಿಸುವ ಹಡಗುಗಳ ಮೇಲೆ ಇರಾನ್ ಬೆಂಬಲಿತ ಹೌದಿ ಬಂಡುಗೋರರು ದಾಳಿ ನಡೆಸುತ್ತಿದ್ದು, ಇದು ಹಮಾಸ್- ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಫೆಲೆಸ್ತೀನಿಯರನ್ನು ಬೆಂಬಲಿಸುವ ಕ್ರಮವಾಗಿದೆ ಎಂದಿದ್ದಾರೆ. ಈ ದಾಳಿಯನ್ನು ತಡೆಯುವ ಉದ್ದೇಶದಿಂದ ತಾನು ಸ್ಥಾಪಿಸಿರುವ ಒಕ್ಕೂಟಕ್ಕೆ 20ಕ್ಕೂ ಹೆಚ್ಚು ದೇಶಗಳು ಸೇರ್ಪಡೆಗೊಂಡಿರುವುದಾಗಿ ಅಮೆರಿಕ ರವಿವಾರ ಹೇಳಿದೆ. ಆದರೆ ಈ ಒಕ್ಕೂಟವನ್ನು ತಾನು ಸೇರುವುದಿಲ್ಲ ಎಂದು ಸ್ಪೇನ್ ಸರಕಾರ ಘೋಷಿಸಿದ್ದು ಈ ನಿರ್ಧಾರಕ್ಕೆ ಕಾರಣ ತಿಳಿಸಿಲ್ಲ. ಸ್ಥಳೀಯ ಮಾಧ್ಯಮಗಳ ಪ್ರಕಾರ ಈ ನಿರ್ಧಾರದ ಹಿಂದೆ ರಾಜಕೀಯ ಕಾರಣಗಳಿವೆ. ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಸ್ ಸರಕಾರವನ್ನು ಬೆಂಬಲಿಸುವ ಒಕ್ಕೂಟವನ್ನು ರಚಿಸುವ ಪ್ರಯತ್ನದಲ್ಲಿದ್ದು ಇದಕ್ಕೆ ಅಮೆರಿಕದ ವಿದೇಶಾಂಗ ನೀತಿಯನ್ನು ಕಟುವಾಗಿ ವಿರೋಧಿಸುವ ಎಡಪಕ್ಷ `ಸುಮರ್ ಪಕ್ಷ'ದ ಬೆಂಬಲ ಅಗತ್ಯವಿರುವುದರಿಂದ ಸರಕಾರ ಈ ನಿಲುವು ತಳೆದಿದೆ.

ಸ್ಪೇನ್‍ನ ನಿರ್ಧಾರವನ್ನು ಹೌದಿಗಳು ಸ್ವಾಗತಿಸಿದ್ದು `ಕಡಲ ಸಂಚಾರ ವಿಷಯದಲ್ಲಿ ಅಮೆರಿಕ ಮತ್ತು ಬ್ರಿಟನ್ ಹೆಣೆದಿರುವ ಸುಳ್ಳಿನ ಬಲೆಯೊಳಗೆ ಸಿಲುಕಲು ನಿರಾಕರಿಸಿರುವ ಸ್ಪೇನ್‍ನ ನಿರ್ಧಾರ ಶ್ಲಾಘನೀಯ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News