×
Ad

ಈಗಲಾದರೂ ಕ್ಷಮೆ ಕೇಳುತ್ತೀರಾ? ಸುದ್ದಿ ನಿರೂಪಕ ಸುಶಾಂತ್ ಸಿನ್ಹಾ ಪ್ರಶ್ನಿಸಿದ ಜನರು

Update: 2024-02-19 23:47 IST

Photo | PC: @Politics_2022_/X

ಹೊಸದಿಲ್ಲಿ: ಕಳೆದ ತಿಂಗಳು ನಡೆದ ಚಂಡೀಗಢದ ಮೇಯರ್ ಚುನಾವಣೆಯ ವೇಳೆ ಮತಪತ್ರಗಳನ್ನು ತಿದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ ಚುನಾವಣಾಧಿಕಾರಿ ಅನಿಲ್ ಮಸಿಹ್ ಮತ ಪತ್ರಗಳನ್ನು ತಿದ್ದಿರುವುದನ್ನು ಸುಪ್ರೀಂ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ನಿರೂಪಕ ಸುಶಾಂತ್ ಸಿನ್ಹಾ, ಚಂಡೀಗಢ ಚುನಾವಣಾ ಅಧಿಕಾರಿ ಅನಿಲ್ ಮಸಿಹ್ ಅವರನ್ನು ಮತಪತ್ರ ತಿದ್ದಿದ ಪ್ರಕರಣ ನಡೆದ ಬಳಿಕ ಸಮರ್ಥಿಸಿಕೊಂಡಿದ್ದರು.

ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಮತಗಳ ಮೇಲೆ ಗುರುತುಗಳನ್ನು ಹಾಕಿದ್ದಾರೆ ಎಂದು ಚುನಾವಣಾಧಿಕಾರಿ ಮಸಿಹ್ ಅವರ ಮೇಲೆ ಆರೋಪವಿತ್ತು. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಆರೋಪಕ್ಕೆ ಪೂರಕ ಸಾಕ್ಷ್ಯ ಸಿಕ್ಕಿತು. ವೀಡಿಯೊದಲ್ಲಿ ಮಸಿಹ್ ಮತ ಪತ್ರಗಳನ್ನು ತಿದ್ದುತ್ತಿರುವಂತೆ ತೋರುತ್ತಿದೆ. ಹೀಗಿದ್ದರೂ ನಿರೂಪಕ ಸುಶಾಂತ್ ಸಿನ್ಹಾ ಅವರು ಮಸಿಹ್ ಅವರ ರಕ್ಷಣೆಗೆ ಬಂದರು. ವೀಡಿಯೊ ಉದ್ದೇಶಪೂರ್ವಕವಾಗಿ ತಿದ್ದುಪಡಿ ಮಾಡುವಂತೆ ಕಾಣುತ್ತಿಲ್ಲ, ಬದಲಾಗಿ ಸಾಮಾನ್ಯ ಚುನಾವಣಾ ಪ್ರಕ್ರಿಯೆಯಂತೆ ಕಂಡು ಬರುತ್ತದೆ ಎಂದು ಹೇಳಿದ್ದರು. ಪ್ರತಿಪಕ್ಷಗಳು, ವಿಶೇಷವಾಗಿ ಬಿಜೆಪಿಯ ಪ್ರತಿಸ್ಪರ್ಧಿಗಳು, ವೀಡಿಯೊವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದರು.

ಅನಿಲ್ ಮಸಿಹ್ ಅವರು ನಂತರ ಅಮಾನ್ಯವೆಂದು ಘೋಷಿಸಿದ ಎಂಟು ಮತಪತ್ರಗಳಲ್ಲಿ ಒಂದು ಗುರುತು ಸೇರಿಸಿರುವುದನ್ನು ಒಪ್ಪಿಕೊಂಡಿರುವುದರಿಂದ ಈಗ ಲೆಕ್ಕಾಚಾರಗಳೆಲ್ಲವೂ ಬದಲಾಗಿದೆ. ಈಗ ರಾಜೀನಾಮೆ ನೀಡಿರುವ ಬಿಜೆಪಿ ಮೇಯರ್ ಮನೋಜ್ ಸೋಂಕರ್ ಅವರ ಗೆಲುವಿನಲ್ಲಿ ಅನಿಲ್ ಮಸಿಹ್ ಹಾಕಿರುವ ಗುರುತು ಮತಗಳು ನಿರ್ಣಾಯಕ ಪಾತ್ರ ವಹಿಸಿವೆ.

ಮತದಾನ ಪ್ರಕ್ರಿಯೆಯಲ್ಲಿ ಈಗಾಗಲೇ ವಿರೂಪಗೊಳಿಸಿದ ಮತಪತ್ರಗಳನ್ನು ಕೌನ್ಸಿಲರ್‌ಗಳೇ ಗುರುತು ಹಾಕುವ ಮೂಲಕ ಮಾಡಿದ್ದಾರೆ ಎಂದು ಹೇಳುವ ಮೂಲಕ ಮಸಿಹ್ ತನ್ನ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಮಸಿಹ್ ಪ್ರಕಾರ, ಈ ಹೆಚ್ಚುವರಿ ಗುರುತುಗಳು ಮತಪತ್ರಗಳನ್ನು ಪ್ರತ್ಯೇಕಿಸಲು ಮಾಡಿರುವುದಾಗಿತ್ತು.

ಆದರೆ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಮಸಿಹ್ ಅವರ ಪ್ರತಿವಾದವನ್ನು ನಿರಾಕರಿಸಿದರು, ಮತ ಪತ್ರಗಳಲ್ಲಿ ಅಂತಹ ಹೆಚ್ಚುವರಿ ಗುರುತುಗಳನ್ನು ಮಾಡಲು ಯಾವ ನಿಯಮಗಳೂ ಇಲ್ಲ ಎಂದು ಸೂಚಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಮಸಿಹ್ ಅವರ ಹಸ್ತಕ್ಷೇಪವು ಅವರ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ಪೀಠವು ಒತ್ತಿಹೇಳಿತು.

ಫೆಬ್ರವರಿ 20, ಮಂಗಳವಾರದಂದು ಮತಪತ್ರಗಳನ್ನು ಖುದ್ದಾಗಿ ಪರಿಶೀಲಿಸಲು ನಿರ್ಧರಿಸಿದ ಸುಪ್ರೀಂ ಕೋರ್ಟ್ ಈಗ ಪ್ರಕರಣವನ್ನು ತನ್ನ ಅಂಗಳದಲ್ಲಿಟ್ಟಿದೆ. ಪ್ರಸಕ್ತ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ವಶದಲ್ಲಿರುವ ಮತಪತ್ರಗಳನ್ನು ತನ್ನ ಮುಂದೆ ಹಾಜರುಪಡಿಸಲು ಪೀಠವು ಆದೇಶಿಸಿದೆ. ಇದಲ್ಲದೆ, ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರಿಗೆ ವಿಚಾರಣೆಯ ಸಮಯದಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಸುಶಾಂತ್ ಸಿನ್ಹ, ಮಸಿಹ್ ಅವರನ್ನು ಈ ಹಿಂದೆ ಸಮರ್ಥಿಸಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡರು. ಸಿನ್ಹಾ ಅವರು ಮಸೀಹ್ ಅವರನ್ನು ಸಮರ್ಥಿಸಿದ್ದು. ಈಗ ಅವರ ಲೆಕ್ಕಾಚಾರ ತಲೆಕೆಳಗಾಗಿರುವುದು ಸಾಬೀತಾಗಿದೆ ಎಂದು ವಿವಿಧ ಸಾಮಾಜಿಕ ಮಾಧ್ಯಮ ಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಸಿನ್ಹಾ ಅವರು ಮಸಿಹ್‌ಗೆ ಕ್ಲೀನ್ ಚಿಟ್ ನೀಡಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರೆಯೇ? ಈಗಲಾದರೂ ಕ್ಷಮೆ ಕೇಳುತ್ತಾರೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News