ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಚಾಕಲೇಟ್ ಪ್ಯಾಕೆಟ್ ಗಳಲ್ಲಿ 1 ಕೆಜಿ ಎಂಡಿಎಂಎ ಅಡಗಿಸಿಟ್ಟಿದ್ದ ಮಹಿಳೆಯ ಬಂಧನ
Photo: wikiwand.com (ಸಾಂದರ್ಭಿಕ ಚಿತ್ರ)
ಕೋಝಿಕ್ಕೋಡ್: ಓಮಾನ್ ನಿಂದ ಆಗಮಿಸಿದ ಮಹಿಳೆಯೊಬ್ಬರು ಚಾಕಲೇಟ್ ಪ್ಯಾಕೆಟ್ ಗಳಲ್ಲಿ ಒಂದು ಕಿ.ಗ್ರಾಂ ಎಂಡಿಎಂಎ ಬಚ್ಚಿಟ್ಟಿದ್ದು ಪತ್ತೆಯಾದ ನಂತರ ಇಲ್ಲಿನ ಕರೀಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿರುವ ಘಟನೆ ಬುಧವಾರ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಆಕೆಯನ್ನು ಸ್ವೀಕರಿಸಲು ಬಂದ ಮೂವರು ಪುರುಷರನ್ನೂ ಬಂಧಿಸಲಾಗಿದೆ.
ಪತ್ತನಂತಿಟ್ಟದ ವಝುಮುಟ್ಟಂನ ನೆಲ್ಲಿವಲೈಲ್ ಹೌಸ್ ನ ಎನ್.ಎಸ್. ಸೂರ್ಯ (31) ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯನ್ನು ಸ್ವೀಕರಿಸಲು ಬಂದಿದ್ದ ಮೂವರು ವ್ಯಕ್ತಿಗಳಾದ ತಿರುರಂಗಡಿಯ ಮಿನ್ನಿಯೂರ್ ಮೂಲದ ಅಲಿ ಅಕ್ಬರ್ (32), ಸಿ.ಪಿ. ಶಫೀರ್ (30) ಮತ್ತು ವೆಳ್ಳಾಲಿಕ್ಕುನ್ನುವಿನ ಎಂ. ಮುಹಮ್ಮದ್ ರಫಿ (30) ಅವರನ್ನು ಇನ್ಸ್‌ಪೆಕ್ಟರ್ ಎ. ಅಬ್ಬಾಸ್ ಅಲಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ ಎಂದು ತಿಳಿದು ಬಂದಿದೆ.
ಮಸ್ಕತ್ ನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಆಗಮಿಸಿದ ಸೂರ್ಯ, ಲಗೇಜ್ ತಪಾಸಣೆಯ ಸಮಯದಲ್ಲಿ ಎಂಡಿಎಂ ನೊಂದಿಗೆ ಸಿಕ್ಕಿಬಿದ್ದಿದ್ದಾರೆ. ಆಕೆ ವಿಮಾನದಲ್ಲಿ ಬರುತ್ತಿರುವ ಸುಳಿವು ಸಿಕ್ಕ ಮೇರೆಗೆ ಪೊಲೀಸರು ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾಯುತ್ತಿದ್ದರು.
ಕಸ್ಟಮ್ಸ್ ಚೆಕ್ಕಿಂಗ್ ಮುಗಿಸಿದ ಆರೋಪಿತ ಮಹಿಳೆಯು ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯನ್ನು ಸ್ವೀಕರಿಸಲು ಬಂದ ಮೂವರನ್ನೂ ಪೊಲೀಸರು ವಶಕ್ಕೆ ಪಡೆದರು. ಲಗೇಜ್ ಪರಿಶೀಲಿಸಿದಾಗ, ಚಾಕಲೇಟ್ ಪ್ಯಾಕೆಟ್‌ನಲ್ಲಿ ಬಚ್ಚಿಟ್ಟಿದ್ದ ಎಂಡಿಎಂಎ ಪತ್ತೆಯಾಯಿತು ಎನ್ನಲಾಗಿದೆ. ಮಹಿಳೆಯ ಮೂಲಕ ಮಾದಕವಸ್ತುಗಳನ್ನು ರವಾನಿಸಿದ ವ್ಯಕ್ತಿಯ ಬಗ್ಗೆಯೂ ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ವಿವರವಾದ ತನಿಖೆ ನಡೆಯುತ್ತಿದೆ ಎಂದು ಡಿವೈಎಸ್ಪಿ ಪಿ ಕೆ ಸಂತೋಷ್ ತಿಳಿಸಿದ್ದಾರೆ.
ಮಹಿಳೆಯು ಜುಲೈ 16 ರಂದು ಮಸ್ಕತ್ ಗೆ ಬಂದಿಳಿದು ಕೆಲವೇ ದಿನಗಳ ನಂತರ ಹಿಂತಿರುಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆಕೆಯನ್ನು ಮಾದಕವಸ್ತು ಸಾಗಿಸಲು ತಂಡವು ನೇಮಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.