×
Ad

ಬಿಹಾರ: ಮಹಿಳೆಯ ಭೀಕರ ಹತ್ಯೆ; ನಾಲ್ವರ ವಿರುದ್ಧ ಪ್ರಕರಣ ದಾಖಲು

Update: 2023-07-10 08:20 IST

ಪಾಟ್ನಾ: ಭೂ ವಿವಾದವೊಂದಕ್ಕೆ ಸಂಬಂಧಿಸಿ ಮಹಿಳೆಯನ್ನು ಅಮಾನುಷವಾಗಿ ಥಳಿಸಿ, ಕಣ್ಣು ಕಿತ್ತು, ನಾಲಿಗೆ ಕತ್ತರಿಸಿ ಹತ್ಯೆ ಮಾಡಿದ ಅಮಾನುಷ ಘಟನೆ ಖಗಾರಿಯಾ ಜಿಲ್ಲೆಯಿಂದ ವರದಿಯಾಗಿದೆ.

ಶನಿವಾರ ಸಂಜೆ ಮೆಹಂದಿಪುರ ಗ್ರಾಮದ ತನ್ನ ಹೊಲದಲ್ಲಿ ಭತ್ತ ಬಿತ್ತನೆ ಮಾಡುತ್ತಿದ್ದಾಗ ಬೈಕ್ನಲ್ಲಿ ಬಂದ ನಾಲ್ಕು ಮಂದಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಬಳಿಕ ತಲೆ ಮರೆಸಿಕೊಂಡಿರುವ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

"ಮಹಿಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ಬೈಕ್ಗಳಲ್ಲಿ ಬಂದ ನಾಲ್ಕು ಮಂದಿ ಆಕೆಯನ್ನು ಥಳಿಸಿದ್ದಲ್ಲದೇ, ಚಾಕುವಿನಿಂದ ಕಣ್ಣು ಕಿತ್ತು, ನಾಲಿಗೆ ಕತ್ತರಿಸಿದ್ದಾರೆ. ಜತೆಗೆ ಗುಪ್ತಾಂಗವನ್ನೂ ಕತ್ತರಿಸಿ ಹಾಕಿದ್ದಾರೆ. ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ" ಎಂಬ ಪ್ರತ್ಯಕ್ಷದರ್ಶಿಗಳ ಸಾಕ್ಷಿಯನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೆರೆಯವರಾದ ಮಹೇಂದ್ರ ಸಿಂಗ್, ರುಲೊ ಸಿಂಗ್, ರಾಜ್ದೇವ್ ಸಿಂಗ್, ಫುಲುಂಗಿ ಸಿಂಗ್ ಮತ್ತು ಶ್ಯಾಮಕುಮಾರ್ ಸಿಂಗ್ ಅವರ ವಿರುದ್ಧ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಐದು ಬಿಘಾ ಜಮೀನಿನ ಬಗ್ಗೆ ನೆರೆಯವರ ಜತೆ ಸುಧೀರ್ಘ ಕಾಲದ ವಿವಾದ ಇತ್ತು. ಒಂಬತ್ತು ವರ್ಷದ ಹಿಂದೆ ಸಂತ್ರಸ್ತೆಯ ಪತಿ ಹಾಗೂ ಭಾವಂದಿರು ಇದೇ ವ್ಯಾಜ್ಯದ ಕಾರಣದಿಂದ ಹತ್ಯೆಯಾಗಿದ್ದರು. ವಿವಾದ ನ್ಯಾಯಾಲಯದಲ್ಲಿದ್ದು, ಆರೋಪಿಗಳು ಜಾಮೀನಿನ ಮೇಲೆ ಇದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಉದ್ರಿಕ್ತ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ 31ನ್ನು ತಡೆದು, ಆರೋಪಿಗಳನ್ನು ಬಂಧಿಸುವ ವರೆಗೂ ಮಹಿಳೆಯ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತರ ಜತೆಗೆ ಸಂಧಾನ ಮಾತುಕತೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಾಸು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News