×
Ad

ಕಾರ್ಖಾನೆಗಳಲ್ಲಿ ದಿನನಿತ್ಯದ ಕೆಲಸದ ಅವಧಿ ವಿಸ್ತರಣೆ | ಮಸೂದೆ ಅಂಗೀಕರಿಸಿದ ಗೋವಾ ವಿಧಾನಸಭೆ

Update: 2025-07-25 21:18 IST

 ಸಾಂದರ್ಭಿಕ ಚಿತ್ರ | PC: NDTV

 

ಹೊಸದಿಲ್ಲಿ, ಜು. 25: ಉದ್ಯಮಗಳ ಸುಗಮ ನಿರ್ವಹಣೆಗೆ ಕಾರ್ಖಾನೆಗಳಲ್ಲಿ ದಿನನಿತ್ಯದ ಕೆಲಸದ ಅವಧಿಯ ಮಿತಿಯನ್ನು 9ರಿಂದ 10 ಗಂಟೆಗೆ ಏರಿಕೆ ಮಾಡುವ ಮಸೂದೆಯನ್ನು ಗೋವಾ ವಿಧಾನ ಸಭೆ ಅಂಗೀಕರಿಸಿದೆ.

ಕಾರ್ಖಾನೆಗಳಲ್ಲಿ ದಿನನಿತ್ಯದ ಕೆಲಸದ ಅವಧಿಯನ್ನು ವಿಸ್ತರಿಸಲು ಹಾಗೂ ಓವರ್‌ ಟೈಮ್ ಕೆಲಸಕ್ಕೆ ಅನುಮತಿಸಲಾದ ಮಿತಿಯನ್ನು ಹೆಚ್ಚಿಸಲು ಕಾರ್ಖಾನೆ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ಕೋರಿದ ಮಸೂದೆಯನ್ನು ವಿಧಾನ ಸಭೆ ಗುರುವಾರ ರಾತ್ರಿ ಅಂಗೀಕರಿಸಿದೆ.

ಸದನದ ಮುಂಗಾರು ಅಧಿವೇಶನದ ಸಂದರ್ಭ ಗುರುವಾರ ರಾಜ್ಯ ಕಾರ್ಖಾನೆಗಳು ಹಾಗೂ ಬಾಯ್ಲರ್‌ ಗಳ ಖಾತೆಯ ಸಚಿವ ನೀಲಕಂಠ ಹಲರ್ನಕರ್ ಕಾರ್ಖಾನೆಗಳ (ಗೋವಾ ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು.

ಈ ಮಸೂದೆ ಮೂಲಕ ಗೋವಾಕ್ಕೆ ಅನ್ವಯವಾಗುವಂತೆ ಕೇಂದ್ರ ಕಾಯ್ದೆಯ ಸೆಕ್ಷನ್ 54ಕ್ಕೆ ತಿದ್ದುಪಡಿ ತರುವ ಹಾಗೂ ವಯಸ್ಕ ಕಾರ್ಮಿಕರ ದೈನಂದಿನ ಕೆಲಸದ ಅವಧಿಯನ್ನು 9ರಿಂದ 10 ಗಂಟೆಗೆ ಏರಿಕೆ ಮಾಡಲು ಸರಕಾರ ಯೋಜಿಸಿದೆ.

ತ್ರೈಮಾಸಿಕದಲ್ಲಿ ಅನುಮತಿಸಲಾದ ಗರಿಷ್ಟ ಓವರ್‌ಟೈಮ್ ಅನ್ನು 125ರಿಂದ 144 ಗಂಟೆಗಳಿಗೆ ಏರಿಕೆ ಮಾಡಲು ಕಾಯ್ದೆಯ ಸೆಕ್ಷನ್ 65ಕ್ಕೆ ತಿದ್ದುಪಡಿ ಮಾಡುವಂತೆ ಕೂಡ ಈ ಮಸೂದೆ ಕೋರಿತ್ತು.

ನಿಯಮಗಳಿಗೆ ಸುಧಾರಣೆ ತರುವ ಹಾಗೂ ಸರಳಗೊಳಿಸುವ ಮೂಲಕ ಉದ್ಯಮಗಳ ಸುಗಮ ನಿರ್ವಹಣೆಯ ಗುರಿಯನ್ನು ಪ್ರಸ್ತಾವಿತ ತಿದ್ದುಪಡಿ ಹೊಂದಿದೆ ಎಂದು ಮಸೂದೆಗೆ ಲಗತ್ತಿಸಲಾದ ಉದ್ದೇಶ ಹಾಗೂ ಕಾರಣಗಳ ಕುರಿತ ಹೇಳಿಕೆ ತಿಳಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News