ಅಮೆರಿಕಾ, ಜರ್ಮನಿ ನಂತರ ಕೇಜ್ರಿವಾಲ್‌ ಬಂಧನ ಕುರಿತು ವಿಶ್ವ ಸಂಸ್ಥೆ ಪ್ರತಿಕ್ರಿಯೆ

Update: 2024-03-29 09:26 GMT

ಅರವಿಂದ್‌ ಕೇಜ್ರಿವಾಲ್‌ | Photo: PTI 

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನದ ಕುರಿತು ಅಮೆರಿಕಾ ಮತ್ತು ಜರ್ಮನಿಯ ಹೇಳಿಕೆಗಳಿಂದ ಉದ್ಭವಿಸಿರುವ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್‌ ಅವರ ವಕ್ತಾರೆ ಸ್ಟಿಫಾನಿ ದುಜರ್ರಿಕ್, ಚುನಾವಣೆಗಳು ನಡೆಯಲಿರುವ ಭಾರತ ಅಥವಾ ಯಾವುದೇ ದೇಶದಲ್ಲಿ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ತಾವು ಬಹಳಷ್ಟು ನಿರೀಕ್ಷಿಸುವುದಾಗಿ ಹೇಳಿದ್ದಾರೆ.

ಕೇಜ್ರಿವಾಲ್‌ ಅವರನ್ನು ಈಡಿ ಬಂಧಿಸಿರುವುದು ಹಾಗೂ ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿರುವ ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.‌

“ಚುನಾವಣೆ ನಡೆಯುವ ಯಾವುದೇ ದೇಶದಂತೆ ಭಾರತದಲ್ಲೂ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸೇರಿದಂತೆ ಎಲ್ಲರ ಹಕ್ಕುಗಳನ್ನು ರಕ್ಷಿಸಲಾಗುವುದು. ಎಲ್ಲರೂ ಸ್ವತಂತ್ರ ಮತ್ತು ನ್ಯಾಯಯುತ ವಾತಾವರಣದಲ್ಲಿ ಮತದಾನ ಮಾಡಲು ಸಾಧ್ಯವಾಗಬೇಕೆಂದು ಆಶಿಸುತ್ತೇವೆ,” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬುಧವಾರ, ಕೇಜ್ರಿವಾಲ್ ಅವರ ಬಂಧನದ ಕುರಿತು ಟೀಕೆಗಳನ್ನು ಪ್ರತಿಭಟಿಸಲು ಭಾರತವು ಅಮೆರಿಕದ ಹಿರಿಯ ರಾಯಭಾರಿಯನ್ನು ಕರೆಸಿದ ಕೆಲವೇ ಗಂಟೆಗಳ ನಂತರ, ವಾಷಿಂಗ್ಟನ್ ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಉತ್ತೇಜಿಸುವ ತನ್ನ ಹೇಳಿಕೆಗೆ ಬದ್ಧ ಎಂದು ಪುನರುಚ್ಚರಿಸಿತು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಬಂಧಿಸಿದೆ.

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News