ನೀವು ಸ್ಪೇನ್ ಗೆ ಹೋಗಬಹುದು, ಆದರೆ…: ಮಮತಾ ಬ್ಯಾನರ್ಜಿ ವಿರುದ್ಧ ಅಧೀರ್ ರಂಜನ್ ಚೌಧರಿ ವಾಗ್ದಾಳಿ
Photo: PTI
ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ವ್ಯಾಪಕವಾಗಿ ಹಬ್ಬಿದ್ದರೂ, ಸ್ಪೇನ್ ಪ್ರವಾಸ ಕೈಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, ಅವರು ಸ್ಪೇನ್ ಪ್ರವಾಸ ಮಾಡಬಲ್ಲರೆ ಹೊರತು ಜನರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ ಎಂದು ndtv.com ವರದಿ ಮಾಡಿದೆ.
ಪತ್ರಿಕಾಗೋಷ‍್ಠಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ, “ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ ಡೆಂಗ್ಯೂ ಹರಡುತ್ತಿರುವ ಬಗ್ಗೆ ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ. ಹೀಗಿದ್ದೂ, ಸಾಮಾನ್ಯ ಜನರ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯವನ್ನು ಇದು ತೋರಿಸುತ್ತಿದೆ. ಅವರು ಸ್ಪೇನ್ ಗೆ ಹೋಗಬಹುದೇ ಹೊರತು ಇಲ್ಲಿನ ಜನರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಟೀಕಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ತಮ್ಮ ಯೂರೋಪ್ ಪ್ರವಾಸದ ಸಂದರ್ಭದಲ್ಲಿ ಐಷಾರಾಮಿ ಹೋಟೆಲ್ ನಲ್ಲಿ ಉಳಿದುಕೊಂಡಿರುವ ಕುರಿತೂ ಅಧೀರ್ ರಂಜನ್ ಚೌಧರಿ ವಾಗ್ದಾಳಿ ನಡೆಸಿದ್ದಾರೆ.
“ಮುಖ್ಯಮಂತ್ರಿಯು ತಮ್ಮ ವೇತನ ಪಡೆಯುವುದಿಲ್ಲ ಎಂದು ನಾವು ಕೇಳಿದ್ದೇವೆ. ಅವರು ತಮ್ಮ ಕೃತಿಗಳು ಹಾಗೂ ಕಲಾಕೃತಿಗಳ ಮಾರಾಟದಿಂದ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ, ದಿನಕ್ಕೆ 3 ಲಕ್ಷ ವೆಚ್ಚವಾಗುವ ಮ್ಯಾಡ್ರಿಡ್ ಹೋಟೆಲ್ ನಲ್ಲಿ ಅವರು ಹೇಗೆ ಉಳಿದುಕೊಂಡಿದ್ದಾರೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಯೂರೋಪ್ ಭೇಟಿಯನ್ನು ಐಷಾರಾಮಿ ಪ್ರವಾಸ ಎಂದು ಬಣ್ಣಿಸಿರುವ ಚೌಧರಿ, “ನೀವು ಈ ಪ್ರವಾಸಕ್ಕಾಗಿ ಎಷ್ಟು ವೆಚ್ಚ ಮಾಡಿದ್ದೀರಿ? ಯಾವ ಉದ್ಯಮಿಯನ್ನು ಇಲ್ಲಿಗೆ ಕರೆ ತಂದಿದ್ದೀರಿ? ಜನರನ್ನು ಮೂರ್ಖರನ್ನಾಗಿಸಬೇಡಿ” ಎಂದು ಕಿಡಿ ಕಾರಿದ್ದಾರೆ.
“ನೀವು ಬಿಸ್ವಾ ಬಾಂಗ್ಲಾ ಔದ್ಯಮಿಕ ಸಭೆಗೆ ಖರ್ಚು ಮಾಡಿದ್ದರಲ್ಲಿ ಶೇ. 10ರಷ್ಟು ಮರಳಿ ಬಂದಿದ್ದರೂ, ಲಕ್ಷಾಂತರ ನಿರುದ್ಯೋಗಿ ಬಂಗಾಳದ ಯುವಕರಿಗೆ ಉದ್ಯೋಗ ದೊರೆತಿರುತ್ತಿತ್ತು. ಯಾವ ಸ್ಪೇನ್ ಕಂಪನಿಗಳು ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮಾಡಲು ಬಯಸುತ್ತಿವೆ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ” ಎಂದು ಅವರು ಆಗ್ರಹಿಸಿದ್ದಾರೆ.