ಮಧ್ಯಪ್ರದೇಶ | ಹಿಂದೂ ಧರ್ಮ ಪ್ರಚಾರಕ ಪ್ರೇಮಾನಂದ ಮಹಾರಾಜ್‌ಗೆ ಕಿಡ್ನಿ ದಾನ ಮಾಡಲು ಮುಂದಾದ ಮುಸ್ಲಿಂ ಯುವಕ
ಭೋಪಾಲ್ : ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ 26ರ ಹರೆಯದ ಮುಸ್ಲಿಂ ಯುವಕನೋರ್ವ ಹಿಂದೂ ಧರ್ಮಪ್ರಚಾರಕ ಪ್ರೇಮಾನಂದ ಗೋವಿಂದ ಶರಣ್ (ಪ್ರೇಮಾನಂದ ಜಿ ಮಹಾರಾಜ್) ಅವರಿಗೆ ತನ್ನ ಒಂದು ಕಿಡ್ನಿಯನ್ನು ದಾನ ಮಾಡಲು ಮುಂದಾಗಿದ್ದಾರೆ. ಅವರನ್ನು ಹಿಂದೂ-ಮುಸ್ಲಿಂ ಏಕತೆಯ ಸಂಕೇತ ಎಂದು ಕರೆದಿದ್ದಾರೆ.
ವೃಂದಾವನದಲ್ಲಿ ನೆಲೆಸಿರುವ ರಾಧಾ ವಲ್ಲಭ ಸಂಪ್ರದಾಯಕ್ಕೆ ಸೇರಿದ ಸಂತ ಪ್ರೇಮಾನಂದ ಮಹಾರಾಜ್ ಅವರು ಸರಿಸುಮಾರು 20 ವರ್ಷಗಳಿಂದ ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸುಮಾರು 19 ವರ್ಷಗಳ ಹಿಂದೆ ಅವರ ಎರಡೂ ಕಿಡ್ನಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ ಅವರು ಡಯಾಲಿಸಿಸ್ ಮೂಲಕ ಜೀವನ ನಡೆಸುತ್ತಿದ್ದಾರೆ. 56 ವರ್ಷ ವಯಸ್ಸಾಗಿದ್ದರೂ ಅವರು ಪ್ರತಿದಿನದ ಧಾರ್ಮಿಕ ಕಾರ್ಯಗಳು ಹಾಗೂ ರಾತ್ರಿ ಪಾದಯಾತ್ರೆಗಳನ್ನು ಮುಂದುವರಿಸಿದ್ದು, ಭಕ್ತರ ಮೆಚ್ಚುಗೆ ಗಳಿಸಿದ್ದಾರೆ.
ಅವರ ಜೀವನ ಮತ್ತು ಸಂದೇಶದಿಂದ ಪ್ರೇರಿತರಾದ ಇಟಾರ್ಸಿಯ ಆನ್‌ಲೈನ್ ಕನ್ಸಲ್ಟೆಂಟ್ ಮತ್ತು ಕಾನೂನು ದಾಖಲೆ ತಜ್ಞ ಆರಿಫ್ ಖಾನ್ ಚಿಷ್ತಿ ಅವರು ಆಗಸ್ಟ್ 20ರಂದು ಜಿಲ್ಲಾಧಿಕಾರಿ ಮತ್ತು ಪ್ರೇಮಾನಂದ ಜಿ ಮಹಾರಾಜ್ ಅವರಿಗೆ ಪತ್ರ ಬರೆದು ಮೂತ್ರಪಿಂಡವನ್ನು ದಾನ ಮಾಡಲು ಸಿದ್ದನಿರುವುದಾಗಿ ತಿಳಿಸಿದ್ದಾರೆ.
"ನಾನು ರೀಲ್‌ನಲ್ಲಿ ಮಹಾರಾಜ್ ಜಿ ಅವರು ಅಜ್ಮೀರ್‌ನ ಖ್ವಾಜಾ ಮೊಯಿನುದ್ದೀನ್ ಚಿಷ್ತಿ ಮತ್ತು ಅಮೀರ್ ಖುಸ್ರೋ ಬಗ್ಗೆ ಗೌರವದಿಂದ ಮಾತನಾಡಿರುವುದನ್ನು ನೋಡಿದೆ. ಅವರು ಸೌಹಾರ್ದತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ಅನಿಸಿತು. ದ್ವೇಷವು ಸುಲಭವಾಗಿ ಹರಡುವ ಈ ಕಾಲದಲ್ಲಿ ಅವರು ಬಾಂಧವ್ಯವನ್ನು ಕಾಪಾಡಲು ಕೆಲಸ ಮಾಡುತ್ತಿದ್ದಾರೆ. ಅವರ ಮನೋಭಾವವನ್ನು ಜೀವಂತವಾಗಿಡಲು ದೀರ್ಘಾಯುಷ್ಯ ಅತ್ಯಗತ್ಯ ಎಂದು ಚಿಷ್ತಿ ಹೇಳಿದರು.
ಸೂಫಿ ಸಂಪ್ರದಾಯವನ್ನು ಅನುಸರಿಸುವ ಚಿಷ್ತಿ, ಮಹಾರಾಜ್ ಜಿ ಅವರಿಗೆ ಕಿಡ್ನಿ ದಾನ ಮಾಡುವ ಬಗ್ಗೆ ಮೊದಲು ತನ್ನ ಪತ್ನಿಯ ಜೊತೆ ಮಾತುಕತೆ ನಡೆಸಿದ್ದಾರೆ. "2023ರಲ್ಲಿ ನನ್ನ ತಾಯಿಯನ್ನು ಕಳೆದುಕೊಂಡೆ, ಅದು ನನ್ನನ್ನು ಬಹುತೇಕ ನಿರ್ಜೀವನನ್ನಾಗಿ ಮಾಡಿತು. ನಾನು ಒಂದು ವರ್ಷದ ಹಿಂದೆ ವಿವಾಹವಾಗಿದ್ದೆ. ಪತ್ನಿಯ ಅನುಮತಿಯನ್ನು ಪಡೆದು ಅಧಿಕಾರಿಗಳಿಗೆ ಪತ್ರ ಬರೆದು ಕಿಡ್ನಿ ದಾನ ಮಾಡಲು ಮುಂದಾದೆ. ದೇಶದಲ್ಲಿ ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಏಕತೆಯನ್ನು ಉತ್ತೇಜಿಸುವಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಗುರುಗಳ ಜೀವನಕ್ಕಿಂತ ನನ್ನ ಜೀವನ ದೊಡ್ಡದಲ್ಲ" ಎಂದು ಚಿಷ್ತಿ ಹೇಳಿದರು.