×
Ad

ಝುಬಿನ್ ಗರ್ಗ್ ಸಾವಿನ ಪ್ರಕರಣ | ಸೋದರನ ಬಂಧನದ ಬಳಿಕ ಅಸ್ಸಾಂ ಸಿಐಸಿ ರಾಜೀನಾಮೆ

Update: 2025-11-06 20:08 IST

ಭಾಸ್ಕರಜ್ಯೋತಿ ಮಹಂತಾ , ಜುಬಿನ್ ಗರ್ಗ್ | Photo Credit : X

ಗುವಾಹಟಿ,ನ.6: ಸಿಂಗಾಪುರದಲ್ಲಿ ಖ್ಯಾತ ಗಾಯಕ ಝುಬಿನ್ ಗರ್ಗ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸೋದರ ಶ್ಯಾಮಕಾನು ಮಹಂತಾ ಅವರನ್ನು ಪೋಲಿಸರು ಬಂಧಿಸಿರುವ ಹಿನ್ನೆಲೆಯಲ್ಲಿ ಅಸ್ಸಾಮಿನ ಮುಖ್ಯ ಮಾಹಿತಿ ಆಯುಕ್ತ(ಸಿಐಸಿ) ಭಾಸ್ಕರಜ್ಯೋತಿ ಮಹಂತಾ ಅವರು ಗುರುವಾರ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾರ ಸಲಹೆಯ ಮೇರೆಗೆ ಮಹಂತಾ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಗರ್ಗ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಇತರ ಆರು ಜನರೊಂದಿಗೆ ಬಂಧಿಸಲ್ಪಟ್ಟಿರುವ ಶ್ಯಾಮಕಾನು ಮಹಂತಾಗೆ ಸಂಬಂಧಿಸಿದಂತೆ ಹಲವಾರು ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾದ ಬಳಿಕ ವಿವಾದದ ನಡುವೆಯೇ ಮಹಂತಾ ರಾಜೀನಾಮೆ ನೀಡಿದ್ದಾರೆ. ಶ್ಯಾಮಕಾನು ಸಿಂಗಾಪುರದಲ್ಲಿ ಆಯೋಜಿಸಿದ್ದ ನಾಲ್ಕನೇ ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ತೆರಳಿದ್ದ ಗರ್ಗ್ ಸೆ.19ರಂದು ಸಮುದ್ರದಲ್ಲಿ ಈಜುತ್ತಿರುವಾಗ ಮುಳುಗಿ ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸೋದರನ ಹೆಸರು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಬಳಿಕ ಸಿಐಸಿ ಹುದ್ದೆಯಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂದು ತಾನು ಭಾವಿಸಿದ್ದೇನೆ ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಅಸ್ಸಾಮಿನ ಮಾಜಿ ಡಿಜಿಪಿ ಮಹಂತಾ ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

‘ನನ್ನ ಸೋದರನಿಗೆ ಸಂಬಂಧಿಸಿದಂತೆ ಯಾವುದೇ ಆರ್‌ಟಿಐ ಅರ್ಜಿ ಸಲ್ಲಿಕೆಯಾದರೆ ಅದು ಅನುಮಾನಗಳಿಗೆ ಅಥವಾ ತಪ್ಪು ವ್ಯಾಖ್ಯಾನಗಳಿಗೆ ಕಾರಣವಾಗಬಹುದು ಎಂದು ನನ್ನ ಆತ್ಮಸಾಕ್ಷಿ ಹೇಳಿದ್ದರಿಂದ ಸಣ್ಣ ಅನುಮಾನವನ್ನೂ ತಪ್ಪಿಸಲು ರಾಜೀನಾಮೆ ನೀಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

ತನ್ನ ಉದ್ದೇಶಗಳ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಕಚೇರಿಗೆ ತಾನು ಮಾಹಿತಿ ನೀಡಿದ್ದೇನೆ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆರ್‌ಟಿಐ ಅರ್ಜಿಯನ್ನು ತನ್ನ ಗಮನಕ್ಕೆ ತರುವಂತೆ ತನ್ನ ಸಹೋದ್ಯೋಗಿಗಳಿಗೆ ಸೂಚಿಸಿದ್ದೇನೆ. ಇತ್ತೀಚಿನ ಒಂದು ಆರ್‌ಟಿಐ ಅರ್ಜಿಯು ಶ್ಯಾಮಕಾನುವನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಂಜೂರಾದ ಸರಕಾರಿ ಅನುದಾನಗಳ ಕುರಿತು ವಿವರಗಳನ್ನು ಕೋರಿತ್ತು. ಅರ್ಜಿದಾರರು ತನ್ನ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿ ತನಗೆ ಪತ್ರವನ್ನೂ ಬರೆದಿದ್ದರು ಮತ್ತು ಇದು ತನ್ನ ನಿರ್ಧಾರವನ್ನು ಇನ್ನಷ್ಟು ಬಲಪಡಿಸಿತ್ತು. ಎಂದು ಮಹಂತಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News