ಬಿಹಾರ ಗ್ರಾಮಗಳಲ್ಲಿ ಭಯ, ಗೊಂದಲ: ಮತದಾರರ ಪಟ್ಟಿ ಪರಿಷ್ಕರಣೆ ನಡುವೆ ಪೌರತ್ವ ಸಾಬೀತಿಗೆ ಸ್ಥಳೀಯರ ಪರದಾಟ; ವರದಿ
PC : indianexpress.com
ಪಾಟ್ನಾ: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ನಡೆಯುತ್ತಿದ್ದಂತೆ ಗ್ರಾಮೀಣ ಜನರು ಭಯ ಮತ್ತು ಗೊಂದಲದಲ್ಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಸರಕಾರವು ನೀಡಿರುವ ಹಲವು ಗುರುತಿನ ಚೀಟಿಗಳನ್ನು ಅವರು ಹೊಂದಿದ್ದರೂ ತಮ್ಮ ಪೌರತ್ವವನ್ನು ಸಾಬೀತುಗೊಳಿಸಲು ಅಗತ್ಯ ದಾಖಲೆಗಳು ಅವರ ಬಳಿಯಲ್ಲಿಲ್ಲ ಎಂದು newindianexpress.com ವರದಿ ಮಾಡಿದೆ.
‘ನಾನು ಜನಿಸಿ ದಶಕಗಳೇ ಕಳೆದಿವೆ, ಆದರೆ ನಾನು ನನ್ನ ಪೌರತ್ವವನ್ನು ಸಾಬೀತುಗೊಳಿಸಬೇಕಾದ ದಿನವು ಬರುತ್ತದೆ ಎಂದು ನಾನೆಂದಿಗೂ ಯೋಚಿಸಿರಲಿಲ್ಲ’ ಎಂದು ಸಮಸ್ಟಿಪುರ ಜಿಲ್ಲೆಯ ಮಾಲ್ತಿ ಬೆಡೌಲಿಯಾ ಗ್ರಾಮದ ಕೂಲಿ ಕಾರ್ಮಿಕ ರಾಮಸೇವಕ ಪಾಸ್ವಾನ್ ಅಳಲು ತೋಡಿಕೊಂಡರು. ಮತದಾರರ ಗುರುತಿನ ಚೀಟಿ,ಆಧಾರ್ ಕಾರ್ಡ್,ನರೇಗಾ ಜಾಬ್ ಕಾರ್ಡ್ ಮತ್ತು ಆಯುಷ್ಮಾನ್ ಹೆಲ್ತ್ ಕಾರ್ಡ್ ಇದ್ದರೂ ಪ್ರಸ್ತುತ ನಡೆಯುತ್ತಿರುವ ಮತದಾರರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಇವ್ಯಾವುದನ್ನೂ ಪೌರತ್ವದ ಮಾನ್ಯ ಪುರಾವೆಯಾಗಿ ಸ್ವೀಕರಿಸಲಾಗುತ್ತಿಲ್ಲ.
ತನ್ನ ಮಾಲಿಕನ ಭೂಮಿಯಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸವಿರುವ ಪಾಸ್ವಾನ್, ಪಕ್ಕಾ ಮನೆ ನಿರ್ಮಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ತನ್ನ ಬಳಿ ಸ್ವಂತ ಭೂಮಿಯೂ ಇಲ್ಲ ಎಂದು ಹೇಳಿದರು. ‘ನಾವಿಬ್ಬರೂ ಅನಕ್ಷರಸ್ಥರು,ನಮ್ಮ ಬಳಿ ಜನನ ಪ್ರಮಾಣಪತ್ರಗಳಿಲ್ಲ. ನಾವು ಈ ದೇಶದ ಪ್ರಜೆಗಳು ಎನ್ನುವುದನ್ನು ಸಾಬೀತುಗೊಳಿಸುವುದು ಹೇಗೆ? ನಮಗೆ ದಾಖಲೆಗಳನ್ನು ಒದಗಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ’ ಎಂದು ಅವರ ಪತ್ನಿ ಶಾಂತಿದೇವಿ ಹೇಳಿದರು.
ಪೌರತ್ವ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್‌ನ ಪಾತ್ರವನ್ನೂ ಪಾಸ್ವಾನ್ ಪ್ರಶ್ನಿಸಿದರು. ಬ್ಯಾಂಕ್ ಖಾತೆ ತೆರೆಯಲು ಅಥವಾ ಸರಕಾರಿ ಶಾಲೆಯಲ್ಲಿ ಪ್ರವೇಶಕ್ಕೆ ಆಧಾರ್ ಅಗತ್ಯವಾಗಿದ್ದರೆ ಪೌರತ್ವವನ್ನು ಸಾಬೀತುಗೊಳಿಸಲು ಅದೇಕೆ ಮಾನ್ಯವಲ್ಲ ಎಂದು ಅವರು ಕೇಳಿದರು.
‘ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ನಾವು ಕೇಳಿದ್ದೇವೆ,ಆದರೆ ನಮಗೆ ಫಾರ್ಮ್‌ಗಳನ್ನು ಒದಗಿಸಲು ಯಾವುದೇ ಅಧಿಕಾರಿ ಅಥವಾ ಬೂತ್ ಮಟ್ಟದ ಏಜೆಂಟ್ ನಮ್ಮನ್ನು ಈವರೆಗೆ ಭೇಟಿಯಾಗಿಲ್ಲ ’ಎಂದು ಇನ್ನೋರ್ವ ಗ್ರಾಮಸ್ಥ ಲೋಚನ ಮಹತೋ ಹೇಳಿದರೆ,‘ನಮ್ಮ ಮೂವರು ಮಕ್ಕಳು ಸ್ಥಳೀಯ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ,ಆದರೆ ಅವರ ಜನನ ಪ್ರಮಾಣಪತ್ರಗಳಿಲ್ಲ. ನಾವು ನಮ್ಮ ಪೌರತ್ವವನ್ನು ಕಳೆದುಕೊಳ್ಳುವ ಭೀತಿಯಿಂದ ನಡುಗುತ್ತಿದ್ದೇವೆ ’ಎಂದು ಅವರ ಪತ್ನಿ ಸವಿತಾದೇವಿ ಗೋಳು ತೋಡಿಕೊಂಡರು.
ಗ್ರಾಮದಲ್ಲಿಯ ಇತರರ ಪರಿಸ್ಥಿತಿಯೂ ಇದೇ ಆಗಿದೆ. ಸಮಷ್ಟಿಪುರ ಜಿಲ್ಲಾ ಕೇಂದ್ರದಿಂದ ಕೇವಲ ಏಳು ಕಿ.ಮೀ.ಅಂತರದಲ್ಲಿರುವ,ಸುಮಾರು 5,000 ಜನಸಂಖ್ಯೆ ಹೊಂದಿರುವ ಈ ಗ್ರಾಮದ ಹಲವರು ತಮಗಿನ್ನೂ ಅಗತ್ಯ ಮತದಾರರ ಪರಿಶೀಲನೆ ಫಾರ್ಮ್‌ಗಳು ಸಿಕ್ಕಿಲ್ಲ ಎಂದು ಹೇಳಿದರು.
ಅರ್ಹ ಮತದಾರರಿಗೆ ಫಾರ್ಮ್ ವಿತರಣೆಯ ಚುನಾವಣಾ ಆಯೋಗದ ಹೇಳಿಕೆ ವಾಸ್ತವದಿಂದ ದೂರವಾಗಿದೆ. ಹಲವಾರು ವ್ಯತ್ಯಾಸಗಳಿವೆ. ಅನೇಕ ನಿಜವಾದ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ ಎಂದು ರೋಹ್ತಾಸ್ ಜಿಲ್ಲೆಯ ಗ್ರಾಮವೊಂದರ ನಿವಾಸಿ ಅಮರೇಂದ್ರ ಪಾಲ್ ಹೇಳಿದರು.
ವಿವಿಧ ಜಿಲ್ಲೆಗಳಲ್ಲಿಯ ಹಲವಾರು ಗ್ರಾಮಗಳ ನಿವಾಸಿಗಳೂ ಇಂತಹುದೇ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.