ಕೊಡಗಿನ ಕಾಫಿ ತೋಟಗಳು ಕಾರ್ಮಿಕರಿಗೆ ವರದಾನ
ಮಡಿಕೇರಿ: ಘಮಘಮಿಸುವ ಕಾಫಿ ಕಾವೇರಿ ನದಿಯ ತವರು ಜಿಲ್ಲೆ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇಲ್ಲಿನ ಕಾಫಿ ತೋಟಗಳು ರಾಜ್ಯ ಮಾತ್ರವಲ್ಲದೆ ಹೊರರಾಜ್ಯದ ಕಾರ್ಮಿಕರಿಗೂ ವರದಾನವಾಗಿದೆ. ಸುಮಾರು 1.50 ಲಕ್ಷ ಶ್ರಮಿಕ ಜೀವಿಗಳು ಕಾಫಿ ತೋಟಗಳಲ್ಲಿ ದುಡಿಯುವ ಮೂಲಕವೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ಕಾರ್ಮಿಕ ಕಾಯ್ದೆಯನ್ವಯ ತನಗೆ ಸಿಗಬೇಕಾದ ದಿನದ ವೇತನವನ್ನು ಧೈರ್ಯವಾಗಿ ಕೇಳುವ ಹಕ್ಕನ್ನು ಕಾರ್ಮಿಕ ಹೊಂದಿದ್ದಾನೆ. ಇದೇ ಕಾರಣದಿಂದ ಕಾಫಿ ತೋಟಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರು ನ್ಯಾಯಯುತ ವೇತನದಿಂದ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ.
ಕೊಡಗಿನ ಆಯಾ ಪರಿಸರ ಮತ್ತು ಪ್ರದೇಶದ ಸ್ಥಿತಿಗತಿಯನ್ನು ಅವಲಂಬಿಸಿ ಕಾಫಿ ಕೃಷಿಯನ್ನು ಮಾಡಲಾಗುತ್ತಿದೆ. ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ ರೋಬಸ್ಟಾ ಕಾಫಿಯನ್ನು ಬೆಳೆಯಲಾಗುತ್ತದೆ. ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಕಾಫಿ ಮುಖ್ಯ ಬೆಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾಫಿ ಕಟಾವು ಸಮಯದಲ್ಲಿ ಅಂದಾಜು ಒಂದೂವರೆ ಲಕ್ಷಕ್ಕೂ ಅಧಿಕ ಕಾರ್ಮಿಕರ ಅಗತ್ಯತೆ ಇದೆ. ಈ ಪೈಕಿ ಬಹುತೇಕ ಕಾರ್ಮಿಕರು ಹೊರರಾಜ್ಯಗಳಿಂದ ಬಂದು ದುಡಿ ಯುತ್ತಾರೆ. ಉತ್ತರ ಕರ್ನಾಟಕ, ತಮಿಳುನಾಡು, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಕಾರ್ಮಿಕರು ಕುಟುಂಬ ಸಹಿತ ತೋಟಗಳಿಗೆ ಆಗಮಿಸುತ್ತಾರೆ. ಕಾಫಿ ಕೆಲಸ ಮುಗಿಯುತ್ತಲೇ ಮತ್ತೆ ತಮ್ಮ ಊರಿಗೆ ಹಿಂದಿರುಗುತ್ತಾರೆ.
ಬಹಳ ವರ್ಷಗಳಿಂದ ಕೊಡಗಿನ ಕಾಫಿ ತೋಟಗಳಲ್ಲಿ ಆದಿವಾಸಿ ಸಮುದಾಯ ಹಾಗೂ ಸ್ಥಳೀಯ ಕಾರ್ಮಿಕರು ಶ್ರಮಿಕ ಜೀವಿಗಳಾಗಿ ದುಡಿಯುತ್ತಿದ್ದರು. ಆದರೆ, ವರ್ಷದಿಂದ ವರ್ಷಕ್ಕೆ ಕಾಫಿ ಕೃಷಿ ಮತ್ತು ಫಸಲು ಬೆಳವಣಿಗೆಯನ್ನು ಕಾಣಲು ಆರಂಭಿಸಿದಾಗ ಕಾಫಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರ ಅಗತ್ಯವೂ ಕಂಡು ಬಂತು. ಕಡಿಮೆ ಸಂಖ್ಯೆಯ ಸ್ಥಳೀಯ ಕಾರ್ಮಿಕರಿಂದ ತೋಟಗಳನ್ನು ನಿಭಾಯಿಸಲಾಗದ ಪರಿಸ್ಥಿತಿಯಿಂದ ಬೇಸತ್ತ ಬೆಳೆಗಾರರಿಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಕಾರ್ಮಿಕರನ್ನು ಆಹ್ವಾನಿಸುವುದು ಅನಿವಾರ್ಯವಾಯಿತು. ಇದೇ ಕಾರಣದಿಂದ ಕಳೆದ 10 ವರ್ಷಗಳಿಂದ ಕೊಡಗಿನ ಕಾಫಿ ತೋಟಗಳಲ್ಲಿ ಹೊರಗಿನ ಕಾರ್ಮಿಕರ ದುಡಿಮೆ ಅಧಿಕವಾಗಿದೆ. ತಮ್ಮ ರಾಜ್ಯಗಳಲ್ಲಿ ಕಡಿಮೆ ವೇತನವಿರುವ ಕಾರಣದಿಂದ ಅಲ್ಲಿನ ಕಾರ್ಮಿಕರು ಕೊಡಗಿನ ಕಾಫಿ ತೋಟಗಳಿಗೆ ಆಗಮಿಸಲು ಆರಂಭಿಸಿದರು. ಅಧಿಕ ವೇತನ, ಲೈನ್ ಮನೆ ಮತ್ತು ಮೂಲಭೂತ ಸೌಲಭ್ಯ ದೊರೆಯುವುದರಿಂದ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸುವ ಕಾಲ ದೂರವಾಗಿದೆ. ತೋಟದ ಮಾಲಕರು ಕಾರ್ಮಿಕರನ್ನು ತಮ್ಮ ಜೀವನದ ಒಂದು ಭಾಗ ಎಂದು ಪರಿಗಣಿಸುತ್ತಿದ್ದಾರೆ. ಕಾರ್ಮಿಕರು ಕೂಡ ಸಿಗುವ ವೇತನಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಕಾರ್ಮಿಕ ವರ್ಗ ರಾತ್ರಿ, ಹಗಲೆನ್ನದೆ ದುಡಿಯುತ್ತಿರುವ ಪರಿಣಾಮದಿಂದಲೇ ಇಲ್ಲಿನ ಕಾಫಿ ತೋಟಗಳು ಸಮೃದ್ಧಿ ಯಾಗಿದ್ದು, ಗುಣಮಟ್ಟದ ಕಾಫಿ ಉತ್ಪಾದನೆಯಾಗುತ್ತಿದೆ. ಕೊಡಗಿನ ಕಾಫಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಳೆಗಾರರ ನಿರೀಕ್ಷೆಗೂ ಮೀರಿ ಬೆಲೆ ಏರಿಕೆಯಾಗುತ್ತಿದೆ.
ಕಾಫಿ ಬೆಲೆ ಏರಿಕೆಯಾದಂತೆ ಕಾರ್ಮಿಕರಿಗೂ ತೃಪ್ತಿಕರ ವೇತನ ದೊರೆಯುತ್ತಿದೆ. ಕಾಫಿ ಕಟಾವು ಸಂದರ್ಭವಾದ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ತೋಟದ ಕಾರ್ಮಿಕರ ಆರ್ಥಿಕ ಬಲ ಹೆಚ್ಚುತ್ತದೆ. ಒಂದು ಕೆ.ಜಿ. ಕಾಫಿ ಕೊಯ್ದರೆ 5ರಿಂದ 8 ರೂ.ವರೆಗೂ ದೊರೆಯುತ್ತದೆ. ಈ ದಿನಗಳಲ್ಲಿ ಪುರುಷ ಹಾಗೂ ಮಹಿಳೆ ಎನ್ನುವ ಬೇಧವಿಲ್ಲದೆ ಇಡೀ ಕುಟುಂಬ ಸಹಿತ ಕಾಫಿ ಕೊಯ್ಲಿನಲ್ಲಿ ತೊಡಗಿಸಿಕೊಳ್ಳುತ್ತಾರೆ. ದಿನಕ್ಕೆ ಒಬ್ಬ ಕಾರ್ಮಿಕ ಕಡಿಮೆ ಎಂದರೂ ಒಂದರಿಂದ ಒಂದೂವರೆ ಸಾವಿರ ರೂ.ವರೆಗೂ ದುಡಿಯುತ್ತಾರೆ. ಒಂದು ಮನೆಯಲ್ಲಿ ಐದು ಮಂದಿ ದುಡಿದರೆ ದಿನದ ಆದಾಯ 5 ಸಾವಿರ ರೂ. ಮೀರುತ್ತದೆ. ಕಾಫಿ ಕಟಾವು ಅಲ್ಲದೆ ಬೇರೆ ದಿನಗಳಲ್ಲಿ ತೋಟದ ನಿರ್ವಹಣೆಗಾಗಿ ದುಡಿಯುವ ಕಾರ್ಮಿಕರ ವೇತನ 450 ರಿಂದ600 ರೂ.ಗಳ ವರೆಗೆ ಇದೆ.
ಕಾಫಿ ತೋಟಗಳಲ್ಲಿನ ದುಡಿಮೆಯಿಂದಲೇ ಬಹಳಷ್ಟು ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಸಂತೃಪ್ತಿಯಿಂದ ಮಕ್ಕಳ ಮದುವೆ ಮಾಡುತ್ತಿದ್ದಾರೆ. ಪುಟ್ಟ ಸೂರನ್ನುತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಶ್ರಮಿಕ ವರ್ಗಕ್ಕೆ ಕೊಡಗಿನ ಕಾಫಿ ತೋಟಗಳು ವರದಾನವಾಗಿವೆ.
ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೊಂದಿಕೊಂಡಿರುವ ಹಸಿರ ಪರಿಸರದ ಕೊಡಗು ಕಾಫಿ ಕೃಷಿಗೆ ಅನುಕೂಲಕರ ವಾತಾವರಣವನ್ನು ಹೊಂದಿದೆ. ಮಳೆ, ಗಾಳಿ, ಚಳಿ, ಮಂಜು ಮತ್ತು ಬಿಸಿಲಿನ ಸಮಾನ ಹಂಚಿಕೆಯ ಹವಾಗುಣದಲ್ಲಿ ಕಾಫಿ ಘಮಘಮಿಸುತ್ತಿದೆ. ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ಮತ್ತು ಪೊನ್ನಂಪೇಟೆ ಈ ಐದು ತಾಲೂಕುಗಳನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗು ಒಟ್ಟು 4,106 ಚ. ಕಿ.ಮೀ. ಭೌಗೋಳಿಕ ಪ್ರದೇಶವನ್ನು ಹೊಂದಿದೆ. ಕೊಡಗು ವರ್ಷಕ್ಕೆ ಸುಮಾರು 1,11,000 ಮೆಟ್ರಿಕ್ ಕಾಫಿಯನ್ನು ಉತ್ಪಾದಿಸುತ್ತಿದ್ದು, ಇದು ರಾಜ್ಯದ ಶೇ.51 ಮತ್ತು ದೇಶದ ಉತ್ಪಾದನೆಯ ಶೇ.42ರಷ್ಟಿದೆ. ಕಾಫಿ ಕೃಷಿಯು ಕಾರ್ಮಿಕ ಪ್ರಧಾನವಾಗಿದ್ದು, ಕೊಡಗಿನ ಕಾಫಿ ತೋಟಗಳಲ್ಲಿ ಶೇ.51ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ.