×
Ad

ಇಂಟಾಕ್: ಮಂಗಳೂರು ಕೆಥೊಲಿಕ್ ಪಾರಂಪರಿಕ ಮನೆಗಳ ಛಾಯಾಚಿತ್ರ ಪ್ರದರ್ಶನ

Update: 2025-10-27 14:33 IST

ಮಂಗಳೂರು: ಭಾರತೀಯ ಕಲೆ ಮತ್ತು ಪರಂಪರೆಯನ್ನು ಸಂರಕ್ಷಿಸುವ ಸಂಸ್ಥೆಗಳಲ್ಲಿ ಒಂದಾದ ‘ಇಂಟಾಕ್’ನ ಮಂಗಳೂರು ವಿಭಾಗವು ‘ಆಲ್ಬಮ್ ಆಫ್ ದಿ ಪೋರ್ಚಸ್’ ಎಂಬ ಶೀರ್ಷಿಕೆಯಡಿ ಸಾಂಪ್ರದಾಯಿಕ ಮಂಗಳೂರು ಕೆಥೊಲಿಕ್ ಮನೆಗಳ ಛಾಯಾಚಿತ್ರ ಪ್ರದರ್ಶನವನ್ನು ಇತ್ತೀಚೆಗೆ ನಗರದ ಕೊಡಿಯಾಲ್‌ಗುತ್ತು ಕಲಾ ಕೇಂದ್ರ ದಲ್ಲಿ ಏರ್ಪಡಿಸಿತ್ತು.

ಮಂಗಳೂರು ತನ್ನ ಸಾಂಪ್ರದಾಯಿಕ ಕೆಥೊಲಿಕ್ ಮನೆಗಳಿಗಾಗಿ ಪ್ರಸಿದ್ಧ. ಅವು ಐರೋಪ್ಯ ಮತ್ತು ಸ್ಥಳೀಯ ಶೈಲಿಗಳನ್ನು ಹೊಂದಿದ್ದು, ದಕ್ಷಿಣ ಭಾರತದ ಪರಿಸರಕ್ಕೆ ಹೊಂದಿಕೊಂಡಿವೆ. ಅವುಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲು ಮುಂಬಾಗಿಲಿನ ಮಂಟಪ (ವರಾಂಡ), ದೈನಂದಿನ ಪ್ರಾರ್ಥನೆಗೆ ಪೂಜಾಸ್ಥಳ ಮತ್ತು ಸಾಂಪ್ರದಾಯಿಕ ಮಂಗಳೂರು ಹೆಂಚಿನ ಛಾವಣಿಯು ಹಲವು ತಲೆಮಾರುಗಳ ಕುಟುಂಬ ಸ್ಮರಣೆಯನ್ನು ಕಾಪಾಡುತ್ತಿತ್ತು. ಇಂಟಾಕ್‌ನ ಈ ಯೋಜನೆಯು ನಗರದಾದ್ಯಂತ 27 ಮನೆಗಳನ್ನು ದಾಖಲಿಸಿದೆ. ಅವುಗಳ ವಾಸ್ತುಶಿಲ್ಪ, ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಂಗ್ರಹಿಸಿದೆ.

ಇಂಟಾಕ್‌ನ ಮಂಗಳೂರು ವಿಭಾಗ ಸಂಚಾಲಕ ಮತ್ತು ವಾಸ್ತುಶಿಲ್ಪಿಸುಭಾಷ್ ಬಸು ನೇತೃತ್ವದಲ್ಲಿ ಛಾಯಾಗ್ರಾಹಕ ಮುರಳಿ ಅಬ್ಬೆಮನೆ ಮತ್ತು ಸಂಶೋಧಕಿ ಶರ್ವಾಣಿ ಭಟ್ ಸಹಕಾರದೊಂದಿಗೆ ದಾಖಲೀಕರಣ ನಡೆಯಿತು.

ಹ್ಯಾರಿಯಟ್ ದ್ಯಾಸಾಗರ್, ಡಾ.ಮೈಕೆಲ್ ಲೋಬೊ, ನಯನಾ ಫೆರ್ನಾಂಡಿಸ್, ವಿನ್ಸೆಂಟ್ ಡಿಸೋಜ ಅವರು ಮನೆಗಳ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಕುರಿತು ಮಾಹಿತಿಗಳನ್ನು ಒದಗಿಸಿದ್ದರು.

ಫಾದರ್ ಮಲ್ಲರ್ ಆಸ್ಪತ್ರೆಗೆ ಪ್ರಮುಖ ಕೊಡುಗೆ ನೀಡಿದ ಡಾ.ಲಾರೆನ್ಸ್ ಫೆರ್ನಾಂಡಿಸ್‌ಗೆ ಸಂಬಂಧಿ ಸಿದ ಫರ್ನ್‌ಡೇಲ್ ಮನೆ, ಡಾ.ಡೆರೆಕ್ ಮತ್ತು ಪ್ಯಾಟ್ಸಿ ಲೋಬೊ ಹಾಗೂ ಅವರ ಕುಟುಂಬ ವಂಶಾವಳಿಗೆ ಸಂಬಂಧಿಸಿದ ನಂದಿಗುಡ್ಡ ಮನೆ, ಸಂಶೋಧಕ, ವಂಶಾವಳಿ ಶಾಸ್ತ್ರಜ್ಞ ಡಾ.ಮೈಕೆಲ್ ಲೋಬೊ ಅವರ ಕುಟುಂಬದ ಮನೆ ಕ್ಯಾಮೆಲಾಟ್ ದಾಖಲೀಕರಣದಲ್ಲಿ ಸೇರಿವೆ.

ಕೆಥೊಲಿಕ್ ಪರಂಪರೆಯ ಅಮೂಲ್ಯ ಅಂಗ ವಾಗಿರುವ ಈ ಕಟ್ಟಡಗಳಲ್ಲಿ ಹಲವಾರು ಮನೆಗಳು ಇನ್ನೂ ಬಳಕೆಯಲ್ಲಿವೆ. ಕೆಲವು ಖಾಲಿಯಾಗಿದ್ದು, ಮತ್ತು ಕೆಲವು ಮಾರಾಟವಾಗಿವೆ ಅಥವಾ ಕೆಡವಲ್ಪಟ್ಟಿವೆ ಎಂದು ಇಂಟಾಕ್ ತಿಳಿಸಿದೆ.

ಭವಿಷ್ಯದ ಪೀಳಿಗೆಗಳಿಗೆ ಈ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ಇದನ್ನು ಆಲ್ಬಮ್-ಪುಸ್ತಕ ರೂಪದಲ್ಲಿ ಪ್ರಕಟಿಸಲು ಯೋಜಿಸಲಾಗಿದೆ. ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರ ಪರಿಸರದಲ್ಲಿ ಈ ಇತಿಹಾಸದ ಬಹುಭಾಗವನ್ನು ಅಳಿಸಿಹಾಕುವ ಆತಂಕದ ಮಧ್ಯೆ, ಈ ಯೋಜನೆಯು ದಾಖಲೀಕರಣ ಮತ್ತು ಸಂರಕ್ಷಣೆಯ ಮೂಲಕ ಪರಂಪರೆಯನ್ನು ಉಳಿಸುತ್ತದೆ ಎಂದು ಇಂಟಾಕ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News