ಹಲವೆಡೆ ನೆಲಕಚ್ಚಿರುವ ರಾಗಿ ಪೈರು, ಕಟಾವಿಗೂ ತೊಂದರೆ, ಕಟಾವು ಯಂತ್ರಕ್ಕೆ ಮೊರೆ
ಶಿಡ್ಲಘಟ್ಟ : ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮಳೆಯಿಂದ ನೆಲಕಚ್ಚಿದ ರಾಗಿ ಪೈರಿಗೆ ಇದೀಗ, ಬೀಳುತ್ತಿರುವ ತುಂತುರು ಮಳೆ, ತೇವಾಂಶದ ಕಾಟ ಶುರುವಾಗಿದೆ. ರೈತರಿಗೆ ರಾಗಿ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
ತಾಲೂಕಿನಲ್ಲಿ ರಾಗಿ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಮುಂಗಾರು ಅವಧಿಯಲ್ಲಿ ರಾಗಿ ಬೆಳೆಯನ್ನು ಬಿತ್ತನೆ ಮಾಡಲಾಗಿದೆ. ಇದೀಗ ಬೆಳೆಯು, ಕಟಾವಿನ ಹಂತ ತಲುಪಿದ್ದು, ತೇವಾಂಶ, ತುಂತುರು ಮಳೆಯಿಂದಾಗಿ ಕಟಾವಿಗೂ ಸಮಸ್ಯೆಯ ಜೊತೆಗೆ ಕಟಾವಿನ ನಂತರ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕಾದ ಅನಿವಾರ್ಯವಿದೆ. ಇಲ್ಲವಾದಲ್ಲಿ ಫಸಲು ಹಾಳಾಗುವ ಭೀತಿ ಎದುರಾಗಿದೆ. ಸದ್ಯ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಒಣ ಹುಲ್ಲಿಗೂ ಹಾನಿಯಾಗುವ ಸಾಧ್ಯತೆ ಇದೆ.
ಹವಾಮಾನ ವೈಪರೀತ್ಯ: ರೈತರಿಗೆ, ಎಕರೆ ಉಳುಮೆ ಮಾಡಲು 3,600ರೂ. ವೆಚ್ಚ ಮಾಡಲಾಗುತ್ತದೆ. ಕೂಲಿ ನೀಡಿ ಕುಂಟೆ ಹಾಕುವುದಕ್ಕೆ ಎಕರೆಗೆ ಸುಮಾರು 1,400ರೂ., ಇರ ಖರ್ಚುಗಳು ಸೇರಿ ಒಟ್ಟು 15 ಸಾವಿರ ರೂ.ಗೂ ಹೆಚ್ಚು ಖರ್ಚು ಬರುತ್ತದೆ. ಇಷ್ಟೆಲ್ಲಾ ವೆಚ್ಚಮಾಡಿ, ಬೆಳೆ ಬೆಳೆದರೆ, ವಾತಾವರಣ ವೈಪರಿತ್ಯದಿಂದಾಗಿ ಬೆಳೆದ ಬೆಳೆ ಬಾಗಿದೆ. ಇದರಿಂದ ನಷ್ಟದ ಆತಂಕ ಎದುರಾಗಿದೆ. ಇನ್ನೂ ವಾಯುಭಾರ ಕುಸಿತದ ಪರಿಣಾಮ, ಹಲವು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಿಳಿಸಿದ್ದು, ಈ ಅವಧಿಯಲ್ಲಿ ಮಳೆಯಾದರೆ ರಾಗಿ ಕಟಾವಿಗೂ ಹೆಚ್ಚಿನ ಸಮಸ್ಯೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಕಾರ್ಮಿಕರಿಗೆ ಬೇಡಿಕೆ: ಅನೇಕ ಸವಾಲುಗಳ ನಡುವೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ರೈತರಿಗೆ ಕೃಷಿ ಕಾರ್ಮಿ ಕರು ಸಿಗದಂತಾಗಿದ್ದಾರೆ. ಒಂದು ವೇಳೆ ಸಿಕ್ಕರೂ ಸಮಯಕ್ಕೆ ಸರಿಯಾಗಿ ಸಿಗದೆ, ಸಮಸ್ಯೆ ಎದುರಿಸುವಂತೆ ಆಗಿದೆ. ಕೂಲಿ ವಿಷಯಕ್ಕೆ ಬಂದರೆ ಪುರುಷರಿಗೆ 700 ರೂ.ಮಹಿಳೆಯರಿಗೆ 350 ರೂ. ಜತೆಗೆ ಊಟದ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಇಷ್ಟೆಲ್ಲ ಶ್ರಮಪಟ್ಟರೂ ಹಾಕಿರುವ ಬಂಡವಾಳ ಬಂದರೆ ಸಾಕು ಎಂಬಂತಹ ಪರಿಸ್ಥಿತಿ ರೈತರದ್ದಾಗಿದೆ. ಕೃಷಿ ಕಾರ್ಮಿಕರಿಗೆ ಸಾಕಷ್ಟು ಬೇಡಿಕೆಯಿದೆ.
ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಬಹಳಷ್ಟು ರಾಗಿ ಫಸಲು ನೆಲಕಚ್ಚಿದೆ. ಕೆಲವು ಮಂದಿ ರೈತರು, ತೆನೆ ಕಟಾವು ಮಾಡಿಕೊಂಡಿದ್ದು, ತಡವಾಗಿ ಬಿತ್ತನೆ ಮಾಡಿರುವಂತಹ ರೈತರ ಹೊಲಗಳಲ್ಲಿನ ಬೆಳೆಗಳು, ಮಳೆಯಿಂದಾಗಿ ಕೆಲಕಚ್ಚಿವೆ. ದೊಡ್ಡ ಮಟ್ಟದಲ್ಲಿ ರಾಗಿ ಬೆಳೆದವರು ಯಂತ್ರಗಳನ್ನು ಬಳಸಿಕೊಂಡು ಕಟಾವು ಮಾಡುತ್ತಾರೆ. ಯಂತ್ರದಲ್ಲಿ ಪುಡಿಯಾಗಿ ಬೀಳುವುದರಿಂದ ಪಸಲು ಸಮರ್ಪಕವಾಗಿ ಸಿಗುವುದಿಲ್ಲ.
-ನಾಗರಾಜಪ್ಪ, ರೈತ ಮಳ್ಳೂರು.