×
Ad

ಗುರು-ಗಾಂಧಿ ಭೇಟಿಗೆ ನೂರು ವರ್ಷ: ದೇಶದ ಇತಿಹಾಸ, ವರ್ತಮಾನ ಮತ್ತು ಭವಿಷ್ಯ

Update: 2025-12-03 12:21 IST

ಹಿಂದುಳಿದ ವರ್ಗಗಳು ಸಾರ್ವಜನಿಕ ರಸ್ತೆಯಲ್ಲಿ ನಡೆದಾಟ, ದೇವಸ್ಥಾನ ಪ್ರವೇಶ, ಸಹಭೋಜನ, ಅಂತರ್ಜಾತಿ ವಿವಾಹ, ಶಿಕ್ಷಣ, ಉದ್ಯೋಗದಿಂದ ಸಂಪೂರ್ಣ ವಂಚಿತರಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಮತ್ತು ಮಹಾತ್ಮಾ ಗಾಂಧಿಯವರ ಭೇಟಿ ಸಾಮಾಜಿಕ ಕ್ರಾಂತಿಗೆ ಪ್ರವೇಶಿಕೆಯಾಯಿತು. ಜಗತ್ತಿನಾದ್ಯಂತ ಅನುಯಾಯಿಗಳನ್ನು ಹೊಂದಿರುವ, ಜಗತ್ತಿನ ಎಲ್ಲಾ ಮಹಾತ್ಮರಿಗೆ ಸ್ಫೂರ್ತಿಯಾಗಿದ್ದ ಮಹಾತ್ಮಾ ಗಾಂಧೀಜಿಯವರಿಗೆ ನಾರಾಯಣ ಗುರುಗಳು ಸ್ಫೂರ್ತಿಯಾಗಿದ್ದರು ಎನ್ನುವುದು ದಕ್ಷಿಣ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ.

ವಿವಿಧತೆಯಲ್ಲಿ ಏಕತೆಯನ್ನು ಮೊತ್ತಮೊದಲಿಗೆ ಸಾರಿದ ಆಧ್ಯಾತ್ಮಿಕ ಗುರು, ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು ಮತ್ತು ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಭೇಟಿಯಾಗಿ ನೂರು ವರ್ಷಗಳಾಗುತ್ತವೆ. 1925ರಲ್ಲಿ ಕೇರಳದ ಶಿವಗಿರಿ ಆಶ್ರಮ ಅಂಗಳದಲ್ಲಿ ಮಹಾತ್ಮಾ ಗಾಂಧಿ ಮತ್ತು ಶ್ರೀ ನಾರಾಯಣ ಗುರು ನಡೆಸಿದ ಸಂಭಾಷಣೆ, ಕೇವಲ ಇಬ್ಬರು ಮಹಾನುಭಾವರ ಮಾತುಕತೆ ಅಲ್ಲ! ಅದು ‘ಭಾರತದ ಆತ್ಮ’ದಲ್ಲಿ ಬಿತ್ತಿದ ಬೀಜ. ಅದಾಗಲೇ ಬ್ರಿಟಿಷರ ದಬ್ಬಾಳಿಕೆಯ ಜೊತೆಗೆ, ಸಂಪ್ರದಾಯದ ದಾಸ್ಯವನ್ನು ಹೊತ್ತುಕೊಂಡಿದ್ದ ದೇಶವು ಜಾತಿಯ ಹೆಸರಿನಲ್ಲಿ ಮಾಡುತ್ತಿದ್ದ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವಲ್ಲಿ ಗುರು-ಗಾಂಧಿ ಭೇಟಿ ಮಹತ್ವದ ಪಾತ್ರವನ್ನು ವಹಿಸಿತ್ತು. ಈ ಸಾಮಾಜಿಕ ಕ್ರಾಂತಿಯ ಮೊಳಕೆ ಈಗ ಹೆಮ್ಮರವಾಗಿದ್ದು, ಅದಕ್ಕೀಗ ನೂರು ವರ್ಷಗಳು. ಕರ್ನಾಟಕದ ಪಾಲಿಗೆ, ಅದರಲ್ಲೂ ಕರಾವಳಿ ಕರ್ನಾಟಕದ ಪಾಲಿಗಂತೂ ಈ ಮಹಾತ್ಮರ ಭೇಟಿ ಮಾಡಿದ ಪರಿಣಾಮಗಳು ಅನೂಹ್ಯವಾಗಿದೆ.

ಮಹಾತ್ಮಾ ಗಾಂಧೀಜಿಯವರು ಐದು ಬಾರಿ ಕೇರಳಕ್ಕೆ ಭೇಟಿ ನೀಡಿದ್ದರು. ಎರಡನೇ ಬಾರಿ ಮಹಾತ್ಮಾ ಗಾಂಧೀಜಿಯವರು ವೈಕಂ ಸತ್ಯಾಗ್ರಹವನ್ನು ಬೆಂಬಲಿಸಲೆಂದೇ ಕೇರಳಕ್ಕೆ ಭೇಟಿ ನೀಡಿದ್ದರು. ‘ವೈಕಂ ದೇವಾಲಯದ ಸುತ್ತಲಿನ ಸಾರ್ವಜನಿಕ ರಸ್ತೆಗಳಲ್ಲಿ ಹಿಂದುಳಿದ ವರ್ಗಗಳು ನಡೆದಾಡುವಂತಿಲ್ಲ’ ಎಂಬ ಆದೇಶದ ವಿರುದ್ಧ ನಾರಾಯಣ ಗುರುಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿತ್ತು. ನಾರಾಯಣ ಗುರುಗಳ ಈ ಹೋರಾಟವನ್ನು ಬೆಂಬಲಿಸಿ ಗಾಂಧೀಜಿಯವರು 1925 ಮಾರ್ಚ್ ತಿಂಗಳಲ್ಲಿ ಕೇರಳಕ್ಕೆ ಬಂದವರು ಶಿವಗಿರಿ ಮಠ ಮತ್ತು ನಾರಾಯಣ ಗುರುಗಳನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಇದು ಮಹಾತ್ಮಾ ಗಾಂಧೀಜಿಯವರಿಗೆ ‘ಜ್ಞಾನೋದಯ ನೀಡಿದ ಭೇಟಿ’ಯಾಯಿತು. ಈ ಇಬ್ಬರು ಮಹಾನ್ ಮಹಾತ್ಮರ ಭೇಟಿಯನ್ನು ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶ್ರೀ ನಾರಾಯಣ ಗುರುಗಳಿಗೆ ಅವರ ಭಕ್ತ ಎಂ.ಕೆ. ಗೋವಿಂದದಾಸರು ದಾನ ಮಾಡಿದ ಕಟ್ಟಡವನ್ನು ಶ್ರೀ ನಾರಾಯಣ ಗುರು ಮತ್ತು ಗಾಂಧೀಜಿಯವರ ಭೇಟಿಯ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಈ ಕಟ್ಟಡಕ್ಕೆ ಈಗ ‘ಗಾಂಧಿ ಆಶ್ರಮ’ ಎಂದು ಹೆಸರಿಡಲಾಗಿದೆ.

ಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಮಾತುಕತೆಯನ್ನು ಕುಮಾರನ್ ಅವರು ಅನುವಾದಿಸುತ್ತಿದ್ದರು. ಹಿಂದೂ ಧರ್ಮದೊಳಗಿನ ಅಸ್ಪಶ್ಯತೆ, ಹೋರಾಟದಲ್ಲಿ ಹಿಂಸಾ ಮಾರ್ಗ ಮತ್ತು ಅಹಿಂಸಾ ಮಾರ್ಗ, ಮತಾಂತರದ ಬಗ್ಗೆ ಚರ್ಚೆ ನಡೆಯಿತು. ಅಲ್ಲಿಯವರೆಗೂ ವರ್ಣಾಶ್ರಮ ಧರ್ಮದ ಮೃದು ಪ್ರತಿಪಾದಕರಾಗಿದ್ದ ಮಹಾತ್ಮಾ ಗಾಂಧಿಯವರು ಈ ಭೇಟಿಯ ಬಳಿಕ ವರ್ಣಾಶ್ರಮ ವ್ಯವಸ್ಥೆಯ ವಿರೋಧಿಯಾದರು.

‘‘ಅಸ್ಪಶ್ಯತೆ ತೊಲಗಬೇಕು. ಅದರ ಹೊರತಾಗಿ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಏನು ಕ್ರಮ ತೆಗೆದುಕೊಳ್ಳಬೇಕು?’’ ಎಂದು ಮಹಾತ್ಮಾ ಗಾಂಧಿಯವರು ನಾರಾಯಣ ಗುರುಗಳನ್ನು ಪ್ರಶ್ನಿಸುತ್ತಾರೆ. ‘‘ಹಿಂದುಳಿದ ವರ್ಗಗಳಿಗೆ ಅಧಿಕಾರ, ಸಂಪತ್ತು, ಶಿಕ್ಷಣ ನೀಡಬೇಕು’’ ಎಂದು ನಾರಾಯಣ ಗುರುಗಳು ಪ್ರತಿಪಾದಿಸುತ್ತಾರೆ.

ಮತಾಂತರದ ಬಗ್ಗೆ ಸ್ಪಷ್ಟತೆ ಹೊಂದಿಲ್ಲದ ಮಹಾತ್ಮಾ ಗಾಂಧಿಯವರಿಗೆ ನಾರಾಯಣ ಗುರುಗಳು ಸ್ಪಷ್ಟತೆಯನ್ನು ನೀಡುತ್ತಾರೆ. ‘‘ಮತಾಂತರ ಹೊಂದುವುದು ಶೋಷಿತರ ತಪ್ಪಲ್ಲ. ಅವರು ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯವನ್ನು ಬಯಸಿ ಮತಾಂತರ ಆಗುವುದನ್ನು ತಪ್ಪೆಂದು ಹೇಳಲು ಆಗುವುದಿಲ್ಲ’’ ಎಂದು ಗುರುಗಳು ಗಾಂಧೀಜಿಯವರಿಗೆ ಹೇಳುತ್ತಾರೆ. ಗಾಂಧೀಜಿಯವರು ಹಿಂದೂ ಧರ್ಮದಲ್ಲಿ ಅಧ್ಯಾತ್ಮಿಕ ವಿಮೋಚನೆ ಸಾಧ್ಯ ಎಂದು ಗುರುಗಳಲ್ಲಿ ವಾದಿಸುತ್ತಾರೆ. ನಾರಾಯಣ ಗುರುಗಳು ಸ್ಪಷ್ಟವಾಗಿ ‘‘ನನ್ನ ಜನರಿಗೆ ಅಧ್ಯಾತ್ಮಿಕ ವಿಮೋಚನೆಗಿಂತ ಮುಖ್ಯವಾಗಿ ಭೌತಿಕ ವಿಮೋಚನೆ (ಸಾಮಾಜಿಕ, ರಾಜಕೀಯ, ಆರ್ಥಿಕ ಸ್ವಾತಂತ್ರ್ಯ) ಮುಖ್ಯ’’ ಎಂದು ಪ್ರತಿಪಾದಿಸುತ್ತಾರೆ. ಇವೆಲ್ಲವೂ ಗಾಂಧೀಜಿಯ ಕಣ್ತೆರೆಸಿ ಮುಂದಿನ ಹೆಜ್ಜೆಗಳನ್ನಿಡಲು ಸಹಾಯ ಮಾಡುತ್ತವೆ.

ಗಾಂಧೀಜಿ ಅಸ್ಪಶ್ಯತೆಯನ್ನು ವಿರೋಧಿಸಿದರೂ, ಅವರು ವರ್ಣಾಶ್ರಮ ವ್ಯವಸ್ಥೆಯನ್ನು ನಂಬಿದ್ದರು. ನಾರಾಯಣ ಗುರುಗಳ ಭೇಟಿ ಬಳಿಕ ವರ್ಣ ವ್ಯವಸ್ಥೆಯ ಬಗ್ಗೆ ಗಾಂಧೀಜಿಯವರ ಮನಸ್ಥಿತಿಯನ್ನು ಬದಲಾಯಿಸಿತು.

ಆ ದಿನ ಗಾಂಧೀಜಿ ಶಿವಗಿರಿಯಲ್ಲಿ ವಿಶ್ರಾಂತಿ ಪಡೆದರು. ಶಿವಗಿರಿ ಮಠದ ಸೌಂದರ್ಯ ಮತ್ತು ಶುಚಿತ್ವವನ್ನು ಗಾಂಧೀಜಿ ಹೊಗಳಿದರು. ಆ ದಿನವೂ ದೊಡ್ಡ ಜನಸಮೂಹ ಜಮಾಯಿಸಿತ್ತು. ನಾರಾಯಣ ಗುರುಗಳೊಂದಿಗೆ ವೇದಿಕೆಯಲ್ಲಿ ಕುಳಿತಿದ್ದ ಗಾಂಧೀಜಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಅಸ್ಪಶ್ಯತೆ, ವೈಕಂ ಸತ್ಯಾಗ್ರಹ, ಖಾದಿ ಬಳಕೆ ಬಗ್ಗೆ ಮಹಾತ್ಮಾ ಗಾಂಧಿಯವರು ಭಾಷಣ ಮಾಡಿದರೆ, ನಾರಾಯಣ ಗುರುಗಳು ‘‘ಗಾಂಧೀಜಿ ಸಲಹೆ ನೀಡಿದುದನ್ನು ಅನುಸರಿಸಿ’’ ಎಂದು ಕರೆ ನೀಡಿದರು.

ಶ್ರೀ ನಾರಾಯಣ ಗುರು ದಕ್ಷಿಣ ಭಾರತದ ಸಾಮಾಜಿಕ ಹೋರಾಟಗಳ ದಿಕ್ಕನ್ನು ಬದಲಿಸಿದ ಮಹಾಸಂತ ಸಮಾಜ ಸುಧಾರಕ. ನಾರಾಯಣ ಗುರುಗಳು ಪೆರಿಯಾರ್‌ರಂತೆ ಧರ್ಮವನ್ನು ತಿರಸ್ಕರಿಸಲಿಲ್ಲ, ಬದಲಾಗಿ ಧರ್ಮವನ್ನು ಮರುಪರಿಭಾಷಿಸಿದರು. ಗಾಂಧೀಜಿ ಮತ್ತು ಗುರುಗಳ ಭೇಟಿಯ ಚಿಂತನೆಯ ಪ್ರತಿಫಲನ ಕರ್ನಾಟಕದ ಕರಾವಳಿ ಭಾಗದಲ್ಲೂ ಸ್ಪಷ್ಟವಾಗಿ ಕಾಣುತ್ತದೆ. ಕರಾವಳಿ ಪ್ರದೇಶಗಳಲ್ಲಿನ ಕರ್ಮಠ ಮಠಗಳು, ಸಾಂಸ್ಕೃತಿಕ ಕೇಂದ್ರಗಳಿಗೆ ನಾರಾಯಣ ಗುರು-ಗಾಂಧೀಜಿ ಭೇಟಿ ಪರಿಣಾಮ ಬೀರಿತ್ತು. ನಾರಾಯಣ ಗುರುಗಳ ಚಿಂತನೆ ಮತ್ತು ಗಾಂಧೀಜಿಯವರ ಜನಾಂದೋಲನವು ಕರಾವಳಿಯ ಬೌದ್ಧಿಕ ನೆಲೆಯನ್ನು ಬದಲಿಸಿತು. ಬಸವಣ್ಣನ ವಚನಗಳ ಸಮಾನತೆಯ ಶಕ್ತಿ, ಸೂಫಿ ಪರಂಪರೆಯ ಮಾನವೀಯತೆ ಮತ್ತು ನಾರಾಯಣ ಗುರು-ಗಾಂಧಿ ಚಿಂತನೆಗಳು ಕರಾವಳಿಯಲ್ಲಿ ಸಹಜವಾಗಿ ಒಂದಕ್ಕೆ ಒಂದು ಸೇರುತ್ತಾ ಮಾನವೀಯತೆಯ ಹೊಸ ವ್ಯಾಖ್ಯಾನ ನೀಡಿದವು.

ಅಲ್ಪಸಂಖ್ಯಾತರು, ಮೀನುಗಾರ ಜನಾಂಗಗಳು, ತಳಸಮುದಾಯದ ಕಾರ್ಮಿಕರ ಜಾಗೃತಿ ಈ ಕಾಲದಲ್ಲಿ ಹೆಚ್ಚು ಗಾಢವಾಯಿತು. ಇದರ ಪರಿಣಾಮವಾಗಿ ಶಿಕ್ಷಣದ ಚಳವಳಿಗಳು, ಸಮಾನ ಹಕ್ಕಿನ ಹೋರಾಟಗಳು ಮತ್ತು ಸಂಘಟಿತ ಸಾಮಾಜಿಕ ಚಳವಳಿಗಳು ಕರಾವಳಿಯಲ್ಲಿ ವೇಗ ಪಡೆದವು. ಭವಿಷ್ಯದ ಭಾರತದ ಮಟ್ಟಿಗೆ ಈ ಭೇಟಿಯ ಪಾತ್ರವನ್ನು ನೋಡಿದರೆ, ಅದು ಕೇವಲ ಜಾತಿನಿರ್ಮೂಲನದ ಚಿಂತನೆಯಲ್ಲ. ಅದು ಭಾರತವನ್ನು ಸಾಮಾಜಿಕವಾಗಿ ಬೌದ್ಧಿಕವಾಗಿ ಮರುಕಟ್ಟುವಿಕೆಗೆ ತಳಪಾಯವಾಯಿತು.

ದಕ್ಷಿಣ ಕನ್ನಡ ಜಿಲ್ಲೆಯು ನಾರಾಯಣ ಗುರುಗಳನ್ನು ಮತ್ತು ಮಹಾತ್ಮಾ ಗಾಂಧೀಜಿಯವರನ್ನು ಒಂದೇ ದೇವಸ್ಥಾನದಲ್ಲಿ ‘ಆರಾಧಿಸುವ’ ಏಕೈಕ ಸ್ಥಳವಾಗಿದೆ. ಮಂಗಳೂರಿನ ಕಂಕನಾಡಿ ಗರೋಡಿಯಲ್ಲಿ ಮಹಾತ್ಮಾ ಗಾಂಧೀಜಿಯವರಿಗೂ, ನಾರಾಯಣ ಗುರುಗಳಿಗೂ ತ್ರಿಕಾಲ ಪೂಜೆ ನಡೆಯುತ್ತದೆ. ಇದು ಕರ್ನಾಟಕ ಕರಾವಳಿ ಮೇಲೆ ನಾರಾಯಣ ಗುರು-ಮಹಾತ್ಮಾ ಗಾಂಧಿ ಭೇಟಿಯ ಪರಿಣಾಮದ ಸಂಕೇತದಂತಿದೆ.

ಬಿಲ್ಲವ ಸಮುದಾಯದ ಗಾಂಧೀವಾದಿ ನಾಯಕ ಕೊರಗಪ್ಪ ಅವರು ನಾರಾಯಣ ಗುರುಗಳನ್ನು ಭೇಟಿಯಾಗಿದ್ದು ಕೂಡಾ ಕರಾವಳಿ ಪಾಲಿಗೆ ಅತ್ಯಂತ ಮಹತ್ವದ್ದು. ತೀರಾ ಹಿಂದುಳಿದ ವರ್ಗವಾಗಿದ್ದ ಬಿಲ್ಲವರಿಗೆ ಕರಾವಳಿಯಲ್ಲಿ ದೇವಸ್ಥಾನ ಪ್ರವೇಶ ಇರಲಿಲ್ಲ. ಆಗ ಕೊರಗಪ್ಪ ಅವರು ಬಿಲ್ಲವ ಹಿರಿಯರ ನಿಯೋಗದ ನೇತೃತ್ವ ವಹಿಸಿ ಶ್ರೀ ನಾರಾಯಣ ಗುರುಗಳನ್ನು ಭೇಟಿ ಮಾಡಿದರು. ಬಿಲ್ಲವರಿಗೆ ದೇವಾಲಯ ನಿರ್ಮಿಸಲು ಮಾರ್ಗದರ್ಶನ ನೀಡಲು ಶ್ರೀ ನಾರಾಯಣ ಗುರುಗಳನ್ನು ಆಹ್ವಾನಿಸಿದರು. ಅದರಂತೆ ನಾರಾಯಣ ಗುರುಗಳು ಮಂಗಳೂರಿಗೆ ಆಗಮಿಸಿ ದೇವಸ್ಥಾನ ನಿರ್ಮಾಣಕ್ಕೆ ಕುದ್ರೋಳಿ ಪ್ರದೇಶವನ್ನು ಆಯ್ಕೆ ಮಾಡಿದರು. ಶ್ರೀ ನಾರಾಯಣ ಗುರುಗಳು ಕೊರಗಪ್ಪ ಅವರ ಮನೆಯಲ್ಲಿ ಕುಳಿತು ದೇವಾಲಯ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮುದಾಯದ ಹಿರಿಯರ ಜೊತೆ ಚರ್ಚಿಸಿದರು. ಅದರ ಫಲವಾಗಿ ಸರ್ವ ಜನಾಂಗದವರೂ ಯಾವುದೇ ಅಸ್ಪಶ್ಯತೆ ಇಲ್ಲದೆ ದೇವಸ್ಥಾನದೊಳಗೆ ಪ್ರವೇಶಿಸಬಹುದಾದ ’ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ’ ಸ್ಥಾಪನೆಯಾಯಿತು. ಹಿಂದುಳಿದ ವರ್ಗಗಳೇ ಇಲ್ಲಿ ದೇವರನ್ನು ಅರ್ಚನೆ ಮಾಡುವ ಮೂಲಕ ಸಾಮಾಜಿಕ ಕ್ರಾಂತಿಗೆ ಕರಾವಳಿಯಲ್ಲಿ ನಾರಾಯಣ ಗುರುಗಳು ನಾಂದಿ ಹಾಡಿದರು.

ಹಿಂದುಳಿದ ವರ್ಗಗಳು ಸಾರ್ವಜನಿಕ ರಸ್ತೆಯಲ್ಲಿ ನಡೆದಾಟ, ದೇವಸ್ಥಾನ ಪ್ರವೇಶ, ಸಹಭೋಜನ, ಅಂತರ್ಜಾತಿ ವಿವಾಹ, ಶಿಕ್ಷಣ, ಉದ್ಯೋಗದಿಂದ ಸಂಪೂರ್ಣ ವಂಚಿತರಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಮತ್ತು ಮಹಾತ್ಮಾ ಗಾಂಧಿಯವರ ಭೇಟಿ ಸಾಮಾಜಿಕ ಕ್ರಾಂತಿಗೆ ಪ್ರವೇಶಿಕೆಯಾಯಿತು. ಜಗತ್ತಿನಾದ್ಯಂತ ಅನುಯಾಯಿಗಳನ್ನು ಹೊಂದಿರುವ, ಜಗತ್ತಿನ ಎಲ್ಲಾ ಮಹಾತ್ಮರಿಗೆ ಸ್ಫೂರ್ತಿಯಾಗಿದ್ದ ಮಹಾತ್ಮಾ ಗಾಂಧೀಜಿಯವರಿಗೆ ನಾರಾಯಣ ಗುರುಗಳು ಸ್ಫೂರ್ತಿಯಾಗಿದ್ದರು ಎನ್ನುವುದು ದಕ್ಷಿಣ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. ಮಹಾತ್ಮಾಗಾಂಧೀಜಿಯವರಿಗೆ ಜ್ಞಾನೋದಯ ಮಾಡಿಸಿದ ಗುರು-ಗಾಂಧಿ ಭೇಟಿಯನ್ನು ಮತ್ತೆ ನೆನೆಯುವುದು, ಆ ಮೂಲಕ ಇಬ್ಬರ ಸಮ ಸಮಾಜದ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ.ಕೆ. ಹರಿಪ್ರಸಾದ್

contributor

Similar News