×
Ad

ಮಾರುಕಟ್ಟೆಯಲ್ಲಿ ಸೋನೆ ಅವರೆ ಕಾಯಿ ಘಮಲು

Update: 2025-12-29 12:44 IST

ಹೊಸಕೋಟೆ: ಚುಮುಚುಮು ಚಳಿಯಲ್ಲಿ ಮಾರುಕಟ್ಟೆ ತುಂಬೆಲ್ಲ ಸೋನೆ ಅವರೆ ಘಮಲು ಹೆಚ್ಚಾಗಿದ್ದು, ಚಳಿಗಾಲದ ವಿಶೇಷ ಖಾದ್ಯ ಅವರೆಕಾಯಿ ಖರೀದಿಸಲು ಗ್ರಾಹಕರು ಅತ್ಯುತ್ಸಾಹ ತೋರುತ್ತಿದ್ದಾರೆ. ಅವರೆ ಜತೆಗೆ ತೊಗರಿ ಕೂಡ ಬೇಡಿಕೆ ಸೃಷ್ಟಿಸಿಕೊಂಡು ಅವರ ಜತೆ ಪೈಪೋಟಿಗಿಳಿದಿದೆ.

ಕೇವಲ ತರಕಾರಿ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ, ತಳ್ಳುವ ಗಾಡಿಗಳಲ್ಲಿ ರಸ್ತೆ ಬದಿಗಳಲ್ಲಿ ನಗರ ಮತ್ತು ಗ್ರಾಮಿಣ ಭಾಗದ ಮನೆ-ಮನೆಗಳ ಮುಂದೆಲ್ಲಾ ಅವರೆಕಾಯಿ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಸೂರ್ಯನ ಬಿಸಿಲು ನೆಲಕ್ಕೆ ತಾಗುವ ಸಮಯ ಹಾಗೂ ಸಂಜೆ ಮುಳುಗುವ ಹೊತ್ತು ಬಂತೆಂದರೆ ಸಾಕು ಅವರೆ ಕಾಯಿ ವ್ಯಾಪಾರ ಜೋರಾಗಿ ನಡೆಯುತ್ತದೆ.

ರೈತರೆ ಹೊಲದಿಂದ ಬಿಡಿಸಿ ಕೊಂಡು ತಂದ ಸೋನೆ ಅವರೆ ಕಾಯಿಗೆ ಎಲ್ಲಿಲ್ಲದ ಬೇಡಿಕೆ ಇದ್ದಾಗ್ಯೂ ಕೂಡ ಹೊರ ಜಿಲ್ಲೆಯಿಂದ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿರುವ ತಾಜಾ ಅವರೆಕಾಯಿ ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಅವರೆಕಾಯಿ ಘಮಲಿಗೆ ಗ್ರಾಹಕರು ಮನಸೋತಿದ್ದು ಇದರಿಂದ ಸಹಜವಾಗಿಯೇ ಇತರ ತರಕಾರಿಗಳಿಗೆ ಬೇಡಿಕೆ ಕುಸಿದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರತುಪಡಿಸಿ ಬೇರೆಡೆ ಅವರೆಕಾಯಿಯನ್ನು ಹೆಚ್ಚಾಗಿ ಬೆಳೆಯುವುದಿಲ್ಲ. ಹಾಗಾಗಿ ಹೊರ ಜಿಲ್ಲೆ ಹಾಗೂ ಅಕ್ಕಪಕ್ಕದ ರಾಜ್ಯಗಳಿಂದ ಮಾರುಕಟ್ಟೆ ಪ್ರವೇಶಿಸಿದೆ.

ದರದಲ್ಲಿ ಸ್ವಲ್ಪಹೆಚ್ಚಳ: ಕಳೆದ ಸಾಲಿನಲ್ಲಿ ಅವರೆಕಾಯಿಗೆ 40 ರಿಂದ 50 ದರ ಇತ್ತು. ಈ ವರ್ಷ ತುಸು ಹೆಚ್ಚಾಗಿದ್ದು, ಕೆ.ಜಿ.ಗೆ 50ರಿಂದ 60 ರೂ.ವರೆಗೆ ಮಾರಾಟವಾಗುತ್ತಿದೆ. ಗುಣಮಟ್ಟದ ಕಾಯಿಗಳು ಮಾರುಕಟ್ಟೆಗೆ ಬಂದಿವೆ.

ಚಳಿಗಾಲದಲ್ಲಿ ಸಿಗುವ ಅವರೆಕಾಯಿಗೆ ಸಾಮಾನ್ಯವಾಗಿ ವಿಶೇಷ ಬೇಡಿಕೆ ಇರುತ್ತದೆ. ಸಾರ್ವ ಜನಿಕರು ತರಹೇ ವಾರಿ ಅವರೆಕಾಯಿ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಉಪ್ಸಾರು, ಸಾರು, ಉಪ್ಪಿಟ್ಟು ರೊಟ್ಟಿ ಚಪಾತಿ ಜತೆಗೆ ಫಲ್ಯವಾಗಿಯೂ ಅವರೆಕಾಳು ಸ್ವಾದಿಷ್ಟ ರುಚಿ ನೀಡುತ್ತದೆ. ಚಳಿಗಾಲದಲ್ಲಿ ಸಿಗುವ ತಾಜಾ ಅವರೆಕಾಯಿ ಘಮಲು ಮೂಗಿಗೆ ಬಡಿದ ಕೂಡಲೇ ಖರೀದಿಸುವ ಮನಸ್ಸಾಗುತ್ತದೆ.

ಕಾಯಿ ಬಿಡಿಸುವುದು, ಹುಳ ಬಾಧೆ ತುಸು ಕಿರಿಕಿರಿ ಎನಿಸಿದರೂ ಮನೆ ಮಂದಿಯೆಲ್ಲ ಇಷ್ಟಪಟ್ಟು ಸವಿಯುವುದರಿಂದ ಅವರೆಕಾಯಿಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗುತ್ತಿದೆ. ಸೋನೆ ಅವರೆ ಕಾಯಿಗೆ ಹೆಚ್ಚು ಬೇಡಿಕೆಯಿದ್ದು ಕೆಲವರು ರೈತರ ಹೊಲಗಳಿಗೆ ತೆರಳಿ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುತ್ತಾರೆ. ಜನವರಿವರೆಗೂ ಅವರೆಕಾಯಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಸಸ್ಯಹಾರಕ್ಕೂ ಮಾಂಸಾಹಾರಕ್ಕೂ ಸೈ: ಅವರೆಕಾಯಿ ಕೇವಲ ಸಸ್ಯಹಾರಕ್ಕೆ ಮಾತ್ರ ಬಳಕೆಯಾಗುತ್ತದೆ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಸ್ಯಹಾರದ ಜತೆಗೆ ಮಾಂಸಹಾರಕ್ಕೂ ಅವರೆಕಾಯಿ ಬಳಕೆ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಕೋಳಿ, ಕುರಿ ಮಾಂಸದ ಸಾರಿಗೆ ಅವರೆಕಾಯಿ ವಿಶೇಷ ರುಚಿ ನೀಡುತ್ತದೆ. ಸಂಜೆಯ ಕುರುಕಲು ತಿಂಡಿಯಾಗಿಯೂ ಬಳಕೆಯಾಗುತ್ತದೆ.

ಹೆದ್ದಾರಿ ಬದಿಯಲ್ಲಿ ವ್ಯಾಪಾರ ಜೋರು: ಅವರೆಕಾಯಿ ಮತ್ತು ತೊಗರಿಕಾಯಿಗಳ ರಾಶಿ ರಾಶಿಯನ್ನು ಬೆಂಗಳೂರು-ಕೋಲಾರ ಚಿಂತಾಮಣಿ ಹೆದ್ದಾರಿಯ ರಸ್ತೆ ಬದಿಗಳಲ್ಲಿ ಕಾಣಬಹುದು. ಈ ಸ್ಥಳಗಳಲ್ಲಿ ವ್ಯಾಪಾರಿಗಳು ತಮ್ಮ ತಳ್ಳುಗಾಡಿ ಅಥವಾ ಟೆಂಟ್ ಕೆಳಗಡೆ ಹಾಕಿಕೊಂಡಿರುತ್ತಾರೆ. ಹೊರ ಜಿಲ್ಲೆಗಳಿಂದ ಟೆಂಪೊಗಳಲ್ಲಿ ಮೂಟೆ ಮೂಟೆಗಳು ಪ್ರತೀ ಅಂಗಡಿ ಮುಂದೆ ಇಳಿಸುತ್ತಾರೆ.

ತೊಗರಿಗೂ ಬೇಡಿಕೆ

ಚಳಿಗಾಲದ ಅತಿಥಿಯಾಗಿರುವ ಅವರೆಕಾಯಿ ಜತೆಗೆ ತೊಗರಿ ಕಾಯಿ ಕೂಡ ಮಾರುಕಟ್ಟೆ ಪ್ರವೇಶಿಸಿದ್ದು, ತನ್ನದೇ ಆದ ಬೇಡಿಕೆ ಸೃಷ್ಟಿಸಿಕೊಂಡಿದೆ. ಗುಣಮಟ್ಟದ ಕಾಯಿ ಮತ್ತು ದಪ್ಪಕಾಳುಗಳ ಗಾತ್ರದ ಆಧಾರದ ಮೇಲೆ ಕೆ.ಜಿ.ಗೆ 50ರಿಂದ 60ಕ್ಕೆ ತೊಗರಿಕಾಯಿ ಕೂಡ ಮಾರಾಟವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News