×
Ad

ನೆರಳು, ನೆಲೆಯೇ ಇಲ್ಲದ ‘ಕೋಲೆಬಸವ’ ಸಮುದಾಯ

Update: 2026-01-21 09:20 IST

‘ಡುಂ ಡುಂ ಕೋಲೆ ಬಸವ’ ‘ಡೂ ಡೂ ಬಸವಣ್ಣ’ ಎಂದೆಲ್ಲಾ ಕರೆಯಲಾಗುವ ಕೋಲೆ ಬಸವ ಸಮುದಾಯವನ್ನು ನಾನಾ ಪ್ರದೇಶಗಳಲ್ಲಿ ನಾನಾ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ ಗಡಿಯಲ್ಲಿರುವ ಕೋಲಾರ, ರಾಯಚೂರು, ಬಳ್ಳಾರಿಗಳಲ್ಲಿ ‘ಗಂಗೆದ್ದುಲೊಳ್ಳು’, ‘ಗಂಗರೆಡ್ಡಿವಾರು’ ಅಂತ ಕರೆದರೆ ಮಿಕ್ಕ ಕಡೆಗಳಲ್ಲಿ ‘ಕೋಲೆ ಬಸವ’ ‘ನಂದಿವಾಲ’ ಮುಂತಾಗಿ ಕರೆಯುತ್ತಾರೆ. ತಮಿಳುನಾಡಿನಲ್ಲಿ ‘ಭೂಮಾಟೆಗಾರ್’ ಎಂದು ಕರೆಯುತ್ತಾರಂತೆ.

ಕಳೆದ ವಾರ ಸಂಕ್ರಾಂತಿ ಹಬ್ಬದ ದಿನ, ನಮ್ಮ ಮನೆ ಬಳಿ ಇರುವ ಕೊಡಿಗೇಹಳ್ಳಿಯಲ್ಲಿ ನೆಲೆಸಿರುವ ಕೋಲೆಬಸವ ಕುಟುಂಬಗಳು ಮುಂಜಾನೆಯೇ ಸಂಭ್ರಮದಲ್ಲಿದ್ದವು. ನಾಲ್ಕು ಗಂಟೆಗೆಲ್ಲ ಎದ್ದು ತಮ್ಮ ಆನೆಗಾತ್ರದ ಬಸವಣ್ಣಗಳಿಗೆ ಶುಭ್ರವಾಗಿ ಸ್ನಾನ ಮಾಡಿಸಿ, ಮೇವು ಹಾಕಿ, ಕಲಗಚ್ಚು ಕುಡಿಸಿ, ಮುಖಕ್ಕೆ ಮುಖವರ್ಣಿಕೆಯಂತಹ ಆಂಜನೇಯನ ವಿಗ್ರಹ ಕಟ್ಟಿ ಕೊಂಬಿಗೆ ಬಣ್ಣದ ಗುಬ್ಬೆಲು ಕಟ್ಟಿ, ಬಣ್ಣಬಣ್ಣದ ರೆಕ್ಕೆ ಬೊಂತಲು ಕಟ್ಟಿ, ಹಿಂದೆ ಬಾಲದ ಬಳಿ ಮೂವಲ ಪಟ್ಟಿ ಕಟ್ಟಿ, ನಾಲ್ಕೂ ಕಾಲಿಗೆ ಜಣಗೊಳಿಸುವ ಗೆಜ್ಜೆ ಕಟ್ಟಿ, ಮೈತುಂಬ ಬಣ್ಣಬಣ್ಣದ ಹೊದಿಕೆ ಹೊರಿಸಿ ಹೊರಟ ಕೋಲೆ ಬಸವಗಳು ನಮ್ಮ ಸಹಕಾರನಗರದ ಬೀದಿಬೀದಿಗಳಲ್ಲಿ ಕಾಣಿಸಿಕೊಂಡವು. ಡೋಲು, ನಾದಸ್ವರ ವಾದ್ಯಗಳೊಂದಿಗೆ ಇಡೀ ಪ್ರದೇಶ ಹಬ್ಬದ ವಾತಾವರಣದಿಂದಾಗಿ ಕಂಗೊಳಿಸುತ್ತಿತ್ತು. ಕೋಲೆ ಬಸವ ಅದೆಷ್ಟು ಸಿಂಗಾರಗೊಂಡು ಶ್ರೀಮಂತಿಕೆಯಿಂದ ಲಕಲಕಿಸುತ್ತಿತ್ತೋ ಅದರ ‘ಮಾಲಕ’ ಮಾತ್ರ ಹರಿದ ಮಾಸಲು ಬಟ್ಟೆಯಲ್ಲಿ ವಾದ್ಯ ನುಡಿಸುತ್ತಾ ಭಿಕ್ಷೆಗಾಗಿ ಅಂಗಲಾಚುತ್ತಿದ್ದ! ಇದು ಕೋಲೆ ಬಸವ ಸಮುದಾಯದ ವಾಸ್ತವ ಬದುಕು.

ನಮ್ಮ ‘ಅಲೆಮಾರಿ ಬುಡಕಟ್ಟು ಮಹಾಸಭಾ’ದ ಅತ್ಯಂತ ಕ್ರಿಯಾಶೀಲ ಕಾರ್ಯಕರ್ತ ತಮಟಂ ಶ್ರೀನಿವಾಸ, ಈತ ಕರ್ನಾಟಕ ಕೋಲೆ ಬಸವ ಸಮುದಾಯದ ಅಧ್ಯಕ್ಷ. ನನ್ನ ‘ಮೂಕನಾಯಕ’ ಪುಸ್ತಕ ಬಿಡುಗಡೆಗೊಳಿಸಲು ಗಜಗಾತ್ರದಲ್ಲಿದ್ದ ಕೋಲೆಬಸವನನ್ನು ತಂದು ರವೀಂದ್ರ ಕಲಾಕ್ಷೇತ್ರದ ಕಾಂಪೋಂಡಿನಲ್ಲಿ ನಿಲ್ಲಿಸಿದ್ದರು. ಅಂದು ಬಂದವರೆಲ್ಲ ಸುಂದರವಾಗಿ ಆಲಂಕೃತನಾದ ಈ ಕೋಲೆ ಬಸವನನ್ನು ನೋಡುತಿದ್ದರೇ ಹೊರತು ಬಿಡುಗಡೆಯಾದ ನನ್ನ ಪುಸ್ತಕದ ಬಗ್ಗೆ ಯಾರಿಗೂ ಗಮನವಿರಲಿಲ್ಲ! ಅದೇ ರೀತಿ ರಾಹುಲ್ ಗಾಂಧಿಯವರ ಭಾರತ ಯಾತ್ರೆಗೆ, ಇಂತಹ ನಾಲ್ಕು ಕೋಲೆ ಬಸವರನ್ನು ಚಿಕ್ಕನಾಯಕನಹಳ್ಳಿ ಬಳಿ ಕರೆತಂದಿದ್ದರು ತಮಟಂ ಶ್ರೀನಿವಾಸ್. ರಾಹುಲ್ ಗಾಂಧಿಯವರನ್ನು ನೋಡಲು ನಮ್ಮ ಕೋಲೆ ಬಸವರಿಗೆ ಅವಕಾಶ ಸಿಗಲಿಲ್ಲ, ಆದರೆ ರಾಹುಲ್ ಗಾಂಧಿಯವರನ್ನು ನೋಡಲು ಬಂದವರು ನಮ್ಮ ಕೋಲೆ ಬಸವರನ್ನು ನೋಡಿ ಸಂಪ್ರೀತರಾದರು.

‘ಡುಂ ಡುಂ ಕೋಲೆ ಬಸವ’ ‘ಡೂ ಡೂ ಬಸವಣ್ಣ’ ಎಂದೆಲ್ಲಾ ಕರೆಯಲಾಗುವ ಈ ಸಮುದಾಯವನ್ನು ನಾನಾ ಪ್ರದೇಶಗಳಲ್ಲಿ ನಾನಾ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ ಗಡಿಯಲ್ಲಿರುವ ಕೋಲಾರ, ರಾಯಚೂರು, ಬಳ್ಳಾರಿಗಳಲ್ಲಿ ‘ಗಂಗೆದ್ದುಲೊಳ್ಳು’, ‘ಗಂಗರೆಡ್ಡಿವಾರು’ ಅಂತ ಕರೆದರೆ ಮಿಕ್ಕ ಕಡೆಗಳಲ್ಲಿ ‘ಕೋಲೆ ಬಸವ’ ‘ನಂದಿವಾಲ’ ಮುಂತಾಗಿ ಕರೆಯುತ್ತಾರೆ. ತಮಿಳುನಾಡಿನಲ್ಲಿ ‘ಭೂಮಾಟೆಗಾರ್’ ಎಂದು ಕರೆಯುತ್ತಾರಂತೆ. ಹಿಂದೆ ಹಳ್ಳಿಗಳಿಗೆ ಬರುತ್ತಿದ್ದ ಕೋಲೆ ಬಸವರಿಂದ ‘ಸೀತಮ್ಮ ಕಲ್ಯಾಣಂ’ ‘ರಾಮ, ಲಕ್ಷ್ಮಣ, ಸೀತಮ್ಮ ಆಟ’ ಮುಂತಾಗಿ ನಾದಸ್ವರ ಮತ್ತು ಡೋಲು ಬಾರಿಸುತ್ತಾ ಆಟ ಆಡಿಸಿ, ಆಟ ಮುಗಿದ ಮೇಲೆ ಅಲ್ಲಿ ನೆರೆದಿದ್ದವರ ಬಳಿ ಮತ್ತು ಮನೆಮನೆಗೂ ಹೋಗಿ ಭಿಕ್ಷೆ ಬೇಡುತ್ತಿದ್ದರು.

ಕೋಲೆಬಸವ ಆಟ ಕರ್ನಾಟಕ ಜಾನಪದ ಲೋಕದ ಸಾಂಸ್ಕೃತಿಕ ಕಲೆಗಳಲ್ಲಿ ಪ್ರಮುಖವಾದುದು. ಸಂಕ್ರಾಂತಿ ಹಬ್ಬದಲ್ಲಂತೂ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಆಚರಿಸುವ ಅತಿ ಮುಖ್ಯವಾದಂತಹ ಜಾನಪದ ಕಲೆ ಇದು. ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಈ ಸಮುದಾಯ ಊರೂರು ಸುತ್ತುತ್ತಾ ಭಿಕ್ಷೆ ಬೇಡಿ ತಲೆತಲಾಂತರಗಳಿಂದಲೂ ತನ್ನ ಪಾರಂಪರಿಕ ಕುಲವೃತ್ತಿಯಾಗಿ ಸಂಚಾರಿ ಜೀವನ ಮಾಡುತ್ತಾ ಬಂದಿದೆೆ. ಸಿನೆಮಾ, ಟಿ.ವಿ., ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಇಂತಹ ಜಾನಪದ ಕಲೆಯ ಬದುಕುಗಳು ಕಣ್ಮರೆಯಾಗುತ್ತಿವೆ.

ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಸುಮಾರು 80 ಕುಟುಂಬಗಳಿವೆ, ಅಂತೆಯೇ ಹೊರಮಾವು ಸುಮಾರು 120 ಕುಟುಂಬ, ಕೆ.ಆರ್. ಪುರದ ಅಯ್ಯಪ್ಪದಲ್ಲಿ ಸುಮಾರು 130 ಕುಟುಂಬ, ಕೋರಮಂಗಲ 30 ಕುಟುಂಬ, ಆನೇಕಲ್ ತಾಲೂಕು ರಾಯಸಂದ್ರ ಸುಮಾರು 150 ಕುಟುಂಬ, ಹೊಂಗಸಂದ್ರ 20 ಕುಟುಂಬ, ಬೆಳ್ಳಾಕಳ್ಳಿ 50 ಕುಟುಂಬ, ಕೊತ್ತನೂರು ದಿನ್ನೆ 30 ಕುಟುಂಬ, ಲಗ್ಗೆರೆ 80 ಕುಟುಂಬ, ಸುಮ್ಮನಹಳ್ಳಿ 30 ಕುಟುಂಬ, ರಾಜರಾಜೇಶ್ವರಿ ನಗರ 130 ಕುಟುಂಬಗಳಿವೆ.

ಇವರಲ್ಲೂ ಕುಲಪಂಚಾಯಿತಿಗಳು ಇದ್ದು ಮುಗ್ಧ ಮತ್ತು ಅಸಹಾಯಕರಾದ ದುರ್ಬಲರನ್ನು ಗುರುತಿಸಿ ಅವರಲ್ಲಿ ಇಲ್ಲದ ತಪ್ಪುಗಳನ್ನು ಹುಡುಕಿ ಕುಲಪಂಚಾಯಿತಿ ಇಟ್ಟು, ಅವರಿಗೆ ಜುಲ್ಮಾನೆ ಹಾಕಿ ಹಣ ಪೀಕುತ್ತಾರೆ. ಕುಲಪಂಚಾಯಿತಿಗಳ ಯಜಮಾನರುಗಳು ಏನೂ ಕೆಲಸ ಮಾಡದ ಮೈಗಳ್ಳರಾಗಿದ್ದು, ಇಂತಹ ಕುಲಪಂಚಾಯತಿಗಳಿಂದ ಹಣ ಮಾಡಿ ಕುಡಿಯಲಿಕ್ಕೆ, ಬಾಡು ತಿನ್ನಲಿಕ್ಕೆ ಮಾರ್ಗ ಮಾಡಿಕೊಂಡಿರುತ್ತಾರೆ. ಈಚೆಗೆ ಆರ್.ಆರ್. ನಗರದ ಬಳಿ ಇರುವ ಕೋಲೆಬಸವ ಸಮುದಾಯದ ಹೆಣ್ಣುಮಗಳೊಬ್ಬಳಿಗೆ ಈ ಕುಲಪಂಚಾಯಿತಿದಾರರು ಕೊಡಬಾರದ ಕಿರುಕುಳ ಕೊಟ್ಟಾಗ ಈಕೆ ನಮ್ಮ ಮಹಾಸಭಾಕ್ಕೆ ಬಂದು ರಕ್ಷಣೆ ಕೇಳಿದರು. ನಾವು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದ ಮೇಲೆ ಈ ಪಂಚಾಯಿತಿದಾರರನ್ನು ಪೊಲೀಸರು ಕರೆಸಿ, ಇವರಿಗೆ ಮುಟ್ಟಿ ನೋಡಿಕೊಳ್ಳುವಂತೆ ‘ರಿಪೇರಿ’ ಮಾಡಿ ಆ ಹೆಣ್ಣುಮಗಳಿಗೆ ರಕ್ಷಣೆ ನೀಡಿದರು. ಈ ಪ್ರಕರಣ ಆದ ಮೇಲೆ ಈ ವಿಷಯ ಹೆಚ್ಚು ಪ್ರಚಾರವಾದ ನಂತರ ಎಲ್ಲಾ ಕಡೆ ಪಂಚಾಯಿತಿದಾರರು ಕುಲಪಂಚಾಯಿತಿ ಮಾಡಲು ಹಿಂಜರಿಯುತ್ತಾರೆ.

ಅಂತೆಯೇ ಕರ್ನಾಟಕದಲ್ಲಿ ಸುಮಾರು ವರ್ಷಗಳಿಂದ ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಸುಮಾರು 2,000 ಕುಟುಂಬಗಳು ಅಲೆಮಾರಿ ಜೀವನ ಮಾಡುತ್ತಾ ಜೀವಿಸುತ್ತಿವೆ. ಆಂಧ್ರ, ತೆಲಂಗಾಣ ರಾಜ್ಯಗಳಿಂದ ವಲಸೆ ಬಂದು ಕರ್ನಾಟಕದಲ್ಲಿ ಸುಮಾರು 70 ವರ್ಷಗಳಿಂದ ಅಲೆಮಾರಿ ಜೀವನವನ್ನು ನಡೆಸುತ್ತಾ, ರೈಲ್ವೆ ಹಳಿಗಳ ಪಕ್ಕ, ಊರಿನ ಹೊರವಲಯದಲ್ಲಿ ಮುಳ್ಳುಕಂಪೆಗಳ ಕುರುಚಲು ಬೆಳೆದ ಮೈದಾನದಲ್ಲಿ, ಸ್ಮಶಾನಗಳ ಅಕ್ಕಪಕ್ಕ ಟೆಂಟು, ಗುಡಾರಗಳನ್ನು ಹಾಕಿಕೊಂಡು ಬದುಕು ಸವೆಯುತ್ತಾರೆ. ದಿನನಿತ್ಯ ಬೆಳಗ್ಗೆ ನಾಲ್ಕೈದು ಗಂಟೆಗೆಲ್ಲ ಎದ್ದ ತಕ್ಷಣ ಕೋಲೆ ಬಸವಕ್ಕೆ ಸಿಂಗಾರ ಮಾಡಿಕೊಂಡು ಅದಕ್ಕೆ ಬೇಕಾಗಿರುವಂತಹ ವಸ್ತುಗಳನ್ನು ಜೋಳಿಗೆಗೆ ಹಾಕಿಕೊಂಡು ಮನೆಮನೆಗೂ ಹೋಗಿ ಡೋಲು, ನಾದಸ್ವರ ನುಡಿಸುತ್ತಾ ಭಿಕ್ಷಾಟನೆ ಮಾಡುತ್ತಾರೆ. ದುರಂತವೆಂದರೆ ಕೋಲೆ ಬಸವನೊಂದಿಗೆ ಹೊರಡುವ ಅಪ್ಪ, ಅಮ್ಮನೊಂದಿಗೆ ಬಹುತೇಕ ಕಡ್ಡಾಯವಾಗಿ ಕೂಸೊಂದು ಇದ್ದೇ ಇರುತ್ತದೆ! ನಾನು ಗಮನಿಸಿದಂತೆ ನಾಲ್ಕೈದು ತಿಂಗಳ ಹಸುಕೂಸಿನಿಂದ ಹತ್ತು ವರ್ಷದ ಮಗುವಿನವರೆಗೂ ಸದಾ ಇವರೊಂದಿಗೆ ಇರುತ್ತವೆ. ಬೇರೆ ಜಗತ್ತೇ ಗೊತ್ತಿಲ್ಲದ ಈ ಮಕ್ಕಳು ದೊಡ್ಡವ ರಾದಂತೆಲ್ಲ ಕೋಲೆಬಸವನ ಹಗ್ಗ ಹಿಡಿಯುತ್ತಾ, ನಾದಸ್ವರ, ಡೋಲು ಬಾರಿಸುತ್ತಾ ಭಿಕ್ಷೆಗಾಗಿ ಬೀದಿಗೆ ಇಳಿಯುತ್ತಾರೆ. ಇವರ ಬದುಕು ಇಷ್ಟೇ, ಈ ಮಕ್ಕಳಿಗೆ ಅಕ್ಷರದ ಪರಿಚಯವೇ ಇರಲ್ಲ, ಶಾಲೆಯೆಂಬ ಕಲ್ಪನೆಯೇ ಇರಲ್ಲ. ಬಹುಶಃ ಮತ್ಯಾವ ಅಲೆಮಾರಿ ಸಮುದಾಯದಲ್ಲೂ ಕುಲವೃತ್ತಿಗೆ ಇಷ್ಟೊಂದು ಅಂಟಿಕೊಂಡ ಮಕ್ಕಳನ್ನು ನಾನು ನೋಡಿದಂತಿಲ್ಲ.

ಆನೇಕಲ್ ಬಳಿಯ ರಾಯಸಂದ್ರದಲ್ಲಿ ಸುಮಾರು 108 ಕೋಲೆಬಸವ ಕುಟುಂಬಗಳಿಗೆ ನಿವೇಶನಗಳು ಮಂಜೂರಾಗಿ ಸುಮಾರು ಹತ್ತುಹದಿನೈದು ವರ್ಷ ಗಳಾಗಿವೆ. ಇವರಿಗೆ ಹಕ್ಕುಪತ್ರ ಕೊಡಲು ಸ್ಥಳೀಯ ಬಲಿಷ್ಠ ಜಾತಿಗಳು ಮತ್ತು ದಲಿತರು ಅಡ್ಡಿಯಾಗಿದ್ದಾರೆ. ಈ ವಿಷಯದಲ್ಲಿ ನಾನೇ ಖುದ್ದು ಕೋಲೆಬಸವ ಸಮುದಾಯದೊಂದಿಗೆ ಜಿಲ್ಲಾಧಿಕಾರಿಗಳನ್ನು ಅನೇಕ ಸಲ ಭೇಟಿ ಮಾಡಿದ್ದೇನೆ. ಇಲ್ಲಿ ಕಾನೂನಿನ ತೊಡಕು ಏನೂ ಇಲ್ಲ. ಆದರೆ ಸ್ಥಳೀಯ ಬಲಿಷ್ಠ ಜಾತಿಯವರು ಮತ್ತು ಕೆಲ ದಲಿತ ಮುಖಂಡರು ಈ ಕೋಲೆಬಸವರಿಗೆ ಹಕ್ಕುಪತ್ರ ನೀಡಲು ಬಿಡುತ್ತಿಲ್ಲ. ನಮ್ಮ ಸರಕಾರಕ್ಕೆ ಒಂದು ಗ್ರಾಮಾಂತರ ಪ್ರದೇಶದ ಬಲಿಷ್ಠರನ್ನೂ ಎದುರು ಹಾಕಿಕೊಳ್ಳುವ ತಾಕತ್ತಿಲ್ಲ!

ಕಳೆದ ವರ್ಷ ಶಿವರಾತ್ರಿಯ ದಿನ ವೆಂಕಟೇಶ ಎನ್ನುವ ಕೋಲೆಬಸವ ಸಮುದಾಯದ ವ್ಯಕ್ತಿ ಬೆಳಿಗ್ಗೆಯೇ ಎದ್ದು ತನ್ನ ಆನೆಗಾತ್ರದ ಕೋಲೆಬಸವನನ್ನು ಸಿಂಗರಿಸಿ ಸಿದ್ಧಗೊಳಿಸಿ ಬೀದಿಗಿಳಿದ ಸ್ವಲ್ಪ ಹೊತ್ತಿನಲ್ಲಿಯೇ ವೆಂಕಟೇಶನ ಕೋಲೆಬಸವ ಇದ್ದಕ್ಕಿದ್ದಂತೆ ಯಾವ ಕಾರಣಕ್ಕೋ ಏನೋ ಕೋಪಗೊಂಡು ವೆಂಕಟೇಶನನ್ನು ಗೋಡೆಗೆ ತಳ್ಳಿ, ವೆಂಕಟೇಶನ ಎದೆಗೆ ತಲೆ ಇಟ್ಟು ಅದುಮಿದ್ದೇ ತಡ, ವೆಂಕಟೇಶನ ಹೃದಯ ಛಿದ್ರಗೊಂಡು ಆತ ರಕ್ತ ಕಕ್ಕಿ ಅಲ್ಲೇ ಪ್ರಾಣಬಿಟ್ಟ! ವೆಂಕಟೇಶನ ಕುಟುಂಬ ಬೀದಿಗೆ ಬಿತ್ತು. ಈತ ನಮ್ಮ ಅಲೆಮಾರಿ ಬುಡಕಟ್ಟುಮಹಾಸಭಾದ ಸಕ್ರಿಯ ಕಾರ್ಯಕರ್ತ, ಈ ಅಪಘಾತದಲ್ಲಿ ಮಡಿದ ವೆಂಕಟೇಶನಿಗೆ ಪರಿಹಾರ ಕೊಡಿಸಲು ಈತ ಸತ್ತದಿನದಿಂದಲೂ ಮುಖ್ಯಮಂತ್ರಿಗಳಾದಿಯಾಗಿ ಸಂಬಂಧಿಸಿದ ಎಲ್ಲರಿಗೂ ಮನವಿ ನೀಡಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದೇವೆ. ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯನವರ ಸರಕಾರದಲ್ಲಿ ಕನಿಷ್ಠ ಈ ಕೆಲಸವೂ ಸಾಧ್ಯವಾಗುತ್ತಿಲ್ಲ!?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News