×
Ad

ತಿಪ್ಪೆಗುಂಡಿ, ಸ್ಮಶಾನದಂತಾದ ವಿಶ್ವಶ್ರೇಷ್ಠ 'ರಾಷ್ಟ್ರಕೂಟ ಕೋಟೆ'

ಕವಿರಾಜಮಾರ್ಗ ತೋರಿದ ನೆಲಕ್ಕೆ ಸರಕಾರ ನಿರ್ಲಕ್ಷ್ಯ ►ಕೋಟೆಯಲ್ಲಿ ಕುಡುಕರ ಹಾವಳಿ: ಬಯಲಲ್ಲೇ ಶೌಚ!

Update: 2026-01-21 14:57 IST

ಕಲಬುರಗಿ: ಕಾವೇರಿಯಿಂದ ಮಾಗೋ ದಾವರಿವರ ಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಳಯ ವಿಲೀನ ವಿಶದ ವಿಷಯ ವಿಶೇಷಂ (1-36). ಇದು ವಿಶ್ವಶ್ರೇಷ್ಠ ರಾಷ್ಟ್ರಕೂಟರ ಆಸ್ಥಾನದಲ್ಲಿದ್ದ ಶ್ರೀವಿಜಯ ರಚಿಸಿದ ಎನ್ನಲಾದ ಕನ್ನಡದ ಮೊದಲ ಉಪಲಬ್ಧ ಕೃತಿ ‘ಕವಿರಾಜ ಮಾರ್ಗ’ದಲ್ಲಿ ಬರುವಂತಹ ಕಾವ್ಯದ ಭಾಗ. ಇದರಲ್ಲಿ ಕಾವೇರಿಯಿಂದ ಗೋದಾವರಿ ನದಿವರೆಗೆ ಇದ್ದಿರುವ ನಾಡು ‘ಕರುನಾಡು’ ಎಂದು ಉಲ್ಲೇಖಿಸಲಾಗಿದೆ. ಆದರೆ ಇದೇ ಕೃತಿ ನೀಡಿರುವ ರಾಷ್ಟ್ರಕೂಟರ ರಾಜಧಾನಿ ಮಳಖೇಡಕ್ಕೆ ಇಂದು ಕೇಂದ್ರ, ರಾಜ್ಯ ಸರಕಾರಗಳು ನಿರ್ಲಕ್ಷ್ಯ ತೋರುತ್ತಿವೆ. ಆಗಿನ ಮಾನ್ಯಖೇಟ ಈಗಿನ ಸೇಡಂ ತಾಲೂಕಿನ ಮಳಖೇಡದಲ್ಲಿ 8ನೆಯ ಶತಮಾನದಲ್ಲಿ ನಿರ್ಮಿತವಾದ ಭವ್ಯ ಕೋಟೆಯು ಇಂದು ಅವಸಾನದತ್ತ ಸಾಗಿದೆ. ಇಂದಿಗೂ ಇದು ಸರಕಾರಗಳಿಂದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಸಾ.ಶ. 793-814ರ ಅವಧಿಯಲ್ಲಿ ರಾಷ್ಟ್ರಕೂಟರ ದೊರೆಯಾಗಿದ್ದ ಮುಮ್ಮಡಿ ಗೋವಿಂದನ ಕಾಲದಲ್ಲಿ ಆರಂಭವಾದ ಕೋಟೆಯ ನಿರ್ಮಾಣವು ಆತನ ಮಗನಾದ ಅಮೋಘವರ್ಷ ನೃಪತುಂಗನ ಕಾಲಾವಧಿಯಲ್ಲಿ ಪೂರ್ಣವಾಯಿತು. ಅಲ್ಲಿಂದ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಲಾಚೂರ್ಯರು, ಯಾದವರು, ಕಾಕತೀಯರು, ದೆಹಲಿ ಸುಲ್ತಾನರು, ಬಹಮನಿ ಸುಲ್ತಾನರು, ಬಿಜಾಪುರ ಸುಲ್ತಾನರು, ಮೊಘಲರು ಹಾಗೂ ಕೊನೆಯಲ್ಲಿ ಹೈದರಾಬಾದ ನಿಝಾಮರು ಈ ಕೋಟೆಯನ್ನು ಆಳಿದ್ದರು. ಅದಾದ ಬಳಿಕ ಸ್ವತಂತ್ರ ಭಾರತಕ್ಕೆ ಸೇರಿದ ಈ ಪ್ರದೇಶವು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ.

ಭೀಮಾನದಿಯ ಉಪನದಿ ಕಾಗಿಣಾ ತಟದಲ್ಲಿರುವ ರಾಷ್ಟ್ರಕೂಟರ ಸಾಮ್ರಾಜ್ಯವು ಅಂದಿನ ವಿಶ್ವದ ನಾಲ್ಕು ಮಹಾನ್ ಸಾಮ್ರಾಜ್ಯಗಳಲ್ಲಿ ಒಂದಾಗಿದೆ ಎಂದು ಅರಬ್ ಪ್ರವಾಸಿ ಸುಲೇಮಾನ್(ಸಾ.ಶ.851) ಬಣ್ಣಿಸಿದ್ದಾನೆ. ಅಲ್ಲದೆ, ಮಾನ್ಯಖೇಟವು ಇಂದ್ರನ ರಾಜಧಾನಿ ಅಮರಾವತಿಯನ್ನೇ ಮೀರಿಸುವಂತಿತ್ತು ಎಂದು ವರ್ಣಿಸಲಾಗಿದೆ. ಅಂತಹ ಸಾಮ್ರಾಜ್ಯದ ಕೋಟೆ ಇಂದು ತಿಪ್ಪೆಗುಂಡಿ, ಸ್ಮಶಾನದಂತೆ ಕಾಣಿಸುತ್ತಿದೆ ಎಂದರೆ ಇದಕ್ಕೆಲ್ಲ ಕಾರಣ ಇಲ್ಲಿನ ಸರಕಾರ, ಜನಪ್ರತಿನಿಧಿಗಳು ಎಂದರೆ ತಪ್ಪಿಲ್ಲ.

ಕೋಟೆಯಲ್ಲಿ ಮೂಳೆಗಳು ಪತ್ತೆ; ಉತ್ಖನನದ ಅಗತ್ಯ:

ಮಳಖೇಡದಲ್ಲಿ ಕನ್ನಡದ 8 ಹಾಗೂ ಅರೇಬಿಕ್ ಭಾಷೆಯ ಒಂದು ಶಾಸನ ಪತ್ತೆಯಾಗಿದೆ. 40 ಎಕರೆಗೂ ಹೆಚ್ಚು ವಿಸ್ತಾರವುಳ್ಳ ಈ ಕೋಟೆಯೊಳಗೆ, ಸುತ್ತಮುತ್ತಲೂ ಉತ್ಖನ್ನದ ಕಾರ್ಯ ನಡೆಯಬೇಕಿದೆ. ಕೋಟೆ ಆವರಣದಲ್ಲಿ ಕೆಲವು ತೋಪುಗಳು ಕಾಣುತ್ತಿದ್ದವು. ಆದರೆ ಇಂದು ಅವುಗಳೂ ಸಿಗುತ್ತಿಲ್ಲ. ನಾಗೇಶ್, ನಂದಿ ಹಾಗೂ ಗೋಪುರದ ದ್ವಾರ ಬಾಗಿಲಿಗೆ ಲೇಪಿತವಾದ ಮಹಾವೀರ, ನೃತ್ಯರೂಪದರ್ಶಿ, ಪರ್ಶಿಯನ್ ಭಾಷೆಯ ಕಲಾಕೃತಿ ಸೇರಿದಂತೆ ಆವರಣದಲ್ಲಿ ವಿವಿಧ ಕಲೆ ಹೊಂದಿರುವ ಶಿಲ್ಪಾಕೃತಿಗಳು ಕಾಣುತ್ತವೆ. ಆವರಣದಲ್ಲಿ ಭೂಮಿ ಅಗೆದರೆ ಗತಕಾಲದ ಮೂಳೆಗಳು ಗೋಚರಿಸುತ್ತವೆ. ಆದರೆ ಇನ್ನಷ್ಟು ಉತ್ಖನನ, ಸಂಶೋಧನೆಗಳು ನಡೆದರೆ ರಾಷ್ಟ್ರಕೂಟರ ಕಲೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ ಕುರಿತಾಗಿ ಮತ್ತಷ್ಟು ಅಂಶಗಳು ಗೊತ್ತಾಗಲಿವೆ. ಅದಕ್ಕೆ ಸರಕಾರ ಮುತುವರ್ಜಿ ವಹಿಸಬೇಕಿದೆಯಷ್ಟೇ!.

ತಿಪ್ಪೆಗುಂಡಿ, ಸ್ಮಶಾನದಂತಾದ ಕೋಟೆ; ಬಯಲಲ್ಲೇ ಶೌಚ..!

ಶಹಾಬಾದ್ ಕಲ್ಲುಗಳಿಂದ ಕಟ್ಟಿರುವ ಕೋಟೆಯಾಗಿದ್ದು, ಮೂರು ಸುತ್ತಿನ ಕೋಟೆ ಎನಿಸಿದೆ. 4 ಪ್ರವೇಶ ದ್ವಾರಗಳಿವೆ, 52 ಬುರುಜುಗಳು ಹೊಂದಿದೆ. ಕೆಲವು ಪ್ರವೇಶದ್ವಾರ, ಬುರುಜುಗಳು ಕಾಣಿಸಿದರೆ ಇನ್ನುಳಿದವು ಗೋಚರಿಸುವುದಿಲ್ಲ. ಮಳಖೇಡ ಬಸ್ ನಿಲ್ದಾಣದಿಂದ ಕೋಟೆಗೆ ಹೋಗಬೇಕಾದರೆ ಇಕ್ಕಟ್ಟಾದ ರಸ್ತೆಯಲ್ಲೇ ಸಾಗಬೇಕಾಗುತ್ತದೆ. ದ್ವಾರ ಬಾಗಿಲಲ್ಲೇ ಕಸದ ರಾಶಿ ಕಾಣುವುದಂತು ನಿಶ್ಚಿತ. ಇನ್ನೂ ಒಳಗಡೆ ಪ್ರವೇಶಿಸಿದರೆ ಯಾವುದೋ ಸ್ಮಶಾನ ಸ್ಥಳಕ್ಕೆ ಹೋಗುತ್ತಿರುವಂತೆ ಭಾಸವಾಗುತ್ತದೆ. ಎಲ್ಲೊಂದರಲ್ಲಿ ಗಿಡಗಂಟಿಗಳು ಕಾಣಿಸಿದರೆ, ಗೋಡೆಗಳೂ ಶಿಥಿಲ

ಗೊಂಡು ನೆಲಕ್ಕುರುಳಿವೆ. ಬಯಲಲ್ಲೇ ಶೌಚಾಲಯ ಮಾಡಿರುವುದಂತೂ ನೋಡಿದರೆ ನೀವೇ ಅಸಹ್ಯ ಪಡುತ್ತೀರಿ; ಎಂತಹ? ಪರಿಸರ ನಿರ್ಮಾಣವಾಗಿದೆಯೆಂದು.

ಕೋಟೆಯಲ್ಲಿ ಕುಡುಕರದ್ದೇ ಹಾವಳಿ:

ಕೋಟೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಗಿಡಗಂಟಿಗಳ ಮಧ್ಯೆಯೇ ಮದ್ಯಪಾನ - ಧೂಮಪಾನ ಮಾಡಿರುವ ಸ್ಥಳಗಳು ಪ್ರತ್ಯಕ್ಷವಾಗುತ್ತವೆ. ನಿತ್ಯವೂ ಇಲ್ಲಿ ಕುಡುಕರ ಹಾವಳಿ ತಪ್ಪಿದ್ದಲ್ಲ. ಕೆಲವರು ಇಲ್ಲಿ ಬಂದು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು ಸಾಮಾನ್ಯವಾಗಿಬಿಟ್ಟಿದೆ. ಕೋಟೆಯೊಳಗೆ ನೋಡಿದಾಗ ಬಿಯರ್ ಬಾಟಲ್, ಸಿಗರೇಟ್ ಇನ್ನಿತರ ವಸ್ತುಗಳು ಸಿಗುತ್ತವೆ. ಎಷ್ಟು ಸಲ ಸ್ವಚ್ಛಗೊಳಿಸಿದರೂ ಇಂತಹ ದುಷ್ಕೃತ್ಯ ಮರುಕಳಿಸುತ್ತಿವೆ ಎಂದು ಶ್ರೀಶೈಲ್ ಪೂಜಾರಿ ಹೇಳಿದ್ದಾರೆ.

ಮೂಲಸೌಕರ್ಯಗಳಿಲ್ಲ; ದತ್ತು ಪಡೆದವರು ಕಾಣೆ:

ಪಟ್ಟದಕಲ್ಲು, ಬಾದಾಮಿ, ಐಹೊಳೆ, ವಿಜಯನಗರದ ಹಂಪಿ, ಬೇಲೂರು, ಎಲ್ಲೋರಾ.. ಹೀಗೆ ಅನೇಕ ಐತಿಹಾಸಿಕ ಸ್ಥಳಗಳಿಗೆ ಸಿಕ್ಕ ಪ್ರಾತಿನಿಧ್ಯತೆ (ವಿಶ್ವ ಪಾರಂಪರಿಕ) ದಕ್ಷಿಣ ಭಾರತವನ್ನಾಳಿದ ರಾಷ್ಟ್ರಕೂಟರ ರಾಜಧಾನಿ ನೆಲಕ್ಕೆ ಕೊಟ್ಟಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಗೆ ಐತಿಹಾಸಿಕ ಕೊಡುಗೆ ನೀಡಿರುವ ಸಾಮ್ರಾಜ್ಯಕ್ಕೆ ಕನಿಷ್ಠ ಸೌಲಭ್ಯಗಳಾದರೂ ಒದಗಿಸುವಲ್ಲಿ ಸರಕಾರಗಳು ವಿಫಲಗೊಂಡಿವೆ. ವಿಶ್ವ ಪ್ರವಾಸಿಗರ ಆಕರ್ಷಣೆಗಷ್ಟೇ ಅಲ್ಲ, ಇಲ್ಲಿನ ಆಸಕ್ತರ ಗಮನ ಸೆಳೆಯುವುದಕ್ಕಾದರೂ ಕುಡಿಯುವ ನೀರು, ಶೌಚಾಲಯ ಮತ್ತಿತ್ತರ ಮೂಲಸೌಲಭ್ಯ ನೀಡುತ್ತಿಲ್ಲ. ಇತ್ತ ಕೋಟೆ ಅಭಿವೃದ್ಧಿಗೆ ದತ್ತು ಪಡೆದ ಹೈದರಾಬಾದಿನ ಕೃಷ್ಣ ಕೃಟಿ ಫೌಂಡೇಶನ್‌ನ ಪತ್ತೆಯೇ ಇಲ್ಲ.

ಇನ್ನು, ಕೋಟೆಯ ರಕ್ಷಣೆಗೆ ಕೈಜೋಡಿಸಬೇಕೆನ್ನುವ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು, 2023ರ ನವೆಂಬರ್ ತಿಂಗಳಲ್ಲಿ ಕೋಟೆಗೆ ಭೇಟಿ ನೀಡಿದ್ದರು. ನೃಪತುಂಗರ ಪ್ರತಿಮೆ ನಿರ್ಮಾಣ, ಮತ್ತಿತ್ತರ ಅಭಿವೃದ್ಧಿಗೆ ಭರವಸೆ ನೀಡಿದ್ದರು. ಆದರೆ ಅವರು ಹೇಳಿದ ಒಂದು ಅಂಶವೂ ಇದುವರೆಗೆ ಈಡೇರಿಲ್ಲ ಎನ್ನುವುದು ದೊಡ್ಡ ದುರಂತವೇ ಸರಿ.

ಮಳಖೇಡದ ಕೋಟೆಯ ಅಭಿವೃದ್ಧಿ ಮಾಡಿದ್ದೇ ಆದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ, ಕೋಟೆಯ ರಕ್ಷಣೆಯಾಗುತ್ತದೆ. ದೇಶಿ, ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ವ್ಯಾಪಾರ- ವಹಿವಾಟು ವೃದ್ಧಿಸುತ್ತದೆ. ಹೀಗೆ ಅನೇಕ ಕ್ಷೇತ್ರಗಳಲ್ಲಿ ಬದಲಾವಣೆಯಾದರೆ ಜನರ ಜೀವನಮಟ್ಟ, ಆರ್ಥಿಕ ಚಟುವಟಿಕೆಗಳು ಕ್ರಮೇಣ ಸುಧಾರಿಸತೊಡಗುತ್ತವೆ. ಇದರಿಂದ ಗ್ರಾಮವೂ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ಸ್ಥಳೀಯರು.

ಮಳಖೇಡ ಕೋಟೆಯು ಇತಿಹಾಸ ಮತ್ತು ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುತ್ತದೆ. ಈಗಾಗಲೇ ಸರಕಾರದಿಂದ ಅನುದಾನ ಬಿಡುಗಡೆಯಾಗಿ ಗೋಡೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇನ್ನಷ್ಟು ಅನುದಾನ ಬಿಡುಗಡೆಗೆ ಪ್ರಯತ್ನಿಸಿ ಅಭಿವೃದ್ಧಿಗೆ ಶ್ರಮಿಸಲಾಗುವುದು.

-ಡಾ.ಶರಣಪ್ರಕಾಶ್ ಪಾಟೀಲ್

ಸೇಡಂ ಶಾಸಕ, ಸಚಿವ

ಮಳಖೇಡ ಕೋಟೆಯೊಳಗಿರುವ ಅಕ್ರಮ ಮನೆಗಳ ತೆರವುಗೊಳಿಸಬೇಕು, ಭದ್ರತಾ ಸಿಬ್ಬಂದಿ ನೇಮಿಸುವುದು, ಕೋಟೆಯೊಳಗೆ ಉದ್ಯಾನವನ, ದ್ವೀಪದ ವ್ಯವಸ್ಥೆ, ರಸ್ತೆ, ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು. ಪ್ರತಿ ವರ್ಷ ರಾಷ್ಟ್ರಕೂಟ ಉತ್ಸವ ಮಾಡುವುದಲ್ಲದೆ ಕೋಟೆಯ ಅಭಿವೃದ್ಧಿಗೆ ನೂರು ಕೋಟಿ ಅನುದಾನ ಮೀಸಲಿಡಬೇಕು.-

-ಮುತ್ತಣ್ಣ ಎಸ್.

ನಡಗೇರಿ ಹೋರಾಟಗಾರರು, ಕಲಬುರಗಿ

ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 34 ಕೋಟಿ ರೂ. ಅನುದಾನ ನೀಡಲು ಅನುಮೋದಿಸಲಾಗಿದೆ. ಅದರಲ್ಲಿ 3/1 ಭಾಗದಷ್ಟು ಅನುದಾನ ಕೆಕೆಆರ್‌ಡಿಬಿ ಕೊಡಲಿದ್ದು, ಅದಕ್ಕಾಗಿ ಅಪ್ರೂವಲ್ ಕೂಡ ಕೊಟ್ಟಿದೆ. ಮಂಜೂರಾಗಿರುವ ಹಣ ಸರಕಾರ ಬಿಡುಗಡೆ ಮಾಡಲಿದೆ.

- ಮಂಜುಳಾ, ಉಪನಿರ್ದೇಶಕರು

ಪುರಾತತ್ವ ಸಂಗ್ರಹಾಲಯ ಪರಂಪರೆ ಇಲಾಖೆ ಕಲಬುರಗಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News