×
Ad

‘ಸೂಪರ್ ಬಾಸ್’ ಪಾಲಿಗೆ ನಿತಿನ್ ನಬಿನ್ ಬೆದರಿಕೆಯಾಗುವ ಸಾಧ್ಯತೆ ಉಂಟೇ?

Update: 2026-01-22 10:46 IST

2029ರ ಹೊತ್ತಿಗೆ, ಸೂಪರ್ ಬಾಸ್ 80 ವರ್ಷಗಳನ್ನು ಸಮೀಪಿಸಲಿದ್ದಾರೆ.

ಅಮಿತ್ ಶಾ, ಆದಿತ್ಯನಾಥ್ ಮತ್ತು ದೇವೇಂದ್ರ ಫಡ್ನವಿಸ್‌ರಂಥವರ ಉತ್ತರಾಧಿಕಾರದ ಹೋರಾಟ ನಡೆಯುವುದಿದೆ.ಹಾಗಿರುವಾಗಲೇ ಈಗ ನಿಷ್ಠಾವಂತನನ್ನು ತಂದು ಕೂರಿಸಿಕೊಳ್ಳುವ ಮೂಲಕ ಸೂಪರ್ ಬಾಸ್ ಎಲ್ಲವೂ ತನ್ನ ನಿಯಂತ್ರಣದಲ್ಲಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಈಗ ಪಕ್ಷದ ಸಂಘಟನೆ ತಾನು ಬಯಸಿದಂತೆ ಆಗುತ್ತದೆ ಎಂಬುದು ಅವರಿಗೆ ಖಚಿತವಾಗಿದೆ. ಅವರ ಸ್ವಂತ ಪ್ರಾಬಲ್ಯವನ್ನು ಸವಾಲು ಮಾಡುವ ಯಾವುದೇ ಪರ್ಯಾಯ ಶಕ್ತಿ ಕೇಂದ್ರ ಹುಟ್ಟಿಕೊಳ್ಳಲು ಅವಕಾಶವೇ ಇರುವುದಿಲ್ಲ.

ಬಿಜೆಪಿಗೆ ಕಡೆಗೂ ಹೊಸ ಅಧ್ಯಕ್ಷರು ಬಂದಿದ್ದಾರೆ.

ಬಿಹಾರದ 45 ವರ್ಷದ ಯುವ ನಾಯಕ ನಿತಿನ್ ನಬಿನ್ ಅವರನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಪಟ್ಟಕ್ಕೇರಿಸಲಾಗಿದೆ.

1980ರಲ್ಲಿ ಸ್ಥಾಪನೆಯಾದ ಒಂದು ಪಕ್ಷ ಅದೇ ವರ್ಷದಲ್ಲಿ ಜನಿಸಿದ ನಾಯಕನಿಗೆ ನಾಯಕತ್ವದ ಜವಾಬ್ದಾರಿ ಹಸ್ತಾಂತರಿಸಿದೆ.

ನೋಡುವುದಕ್ಕೆ ಇದು ಯುವ ಭಾರತ ಅಧಿಕಾರ ವಹಿಸಿಕೊಳ್ಳುವ ಪರಿಪೂರ್ಣ ಚಿತ್ರವೆಂಬಂತಿದೆ. ಆದರೆ ಈ ಪರದೆಯನ್ನು ಸರಿಸಿ ನೋಡಿದರೆ, ಅದೊಂದು ಸಾಮೂಹಿಕ ನಾಯಕತ್ವದ ಪಕ್ಷವಾಗಿ ಉಳಿಯದೆ, ಪ್ರೈವೇಟ್ ಲಿಮಿಟೆಡ್ ಪಕ್ಷವಾಗಿ ಬದಲಾಗಿರುವ ನೇಪಥ್ಯದ ತಣ್ಣಗಿನ ಸತ್ಯ ಕಾಣುತ್ತದೆ. ಈ ಪ್ರೈವೇಟ್ ಲಿಮಿಟೆಡ್ ಪಕ್ಷಕ್ಕೆ ಒಬ್ಬರೇ ಸೂಪರ್ ಬಾಸ್. ಅವರದೇ ಸರ್ವೋಚ್ಚ ಆಳ್ವಿಕೆ.

ನಿತಿನ್ ನಬಿನ್ ಅಧಿಕಾರ ವಹಿಸಿಕೊಳ್ಳುವ ಸಮಾರಂಭದ ವೇದಿಕೆಯಲ್ಲಿ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ, ಹೊಸದಾಗಿ ನೇಮಕಗೊಂಡ ನಿತಿನ್ ನಬಿನ್ ಕಡೆಗೆ ಸನ್ನೆ ಮಾಡಿ, ‘‘ಪಕ್ಷದ ವಿಷಯಗಳಿಗೆ ಬಂದಾಗ, ನಾನು ಕೇವಲ ಕೆಲಸಗಾರ. ಅವರು ನನಗೂ ಬಾಸ್’’ ಎಂದುಬಿಟ್ಟರು.

ಆದರೆ, ಇದು ಒಂದು ಕಟು ಸತ್ಯವನ್ನು ಮರೆಮಾಚಲು ವಿನ್ಯಾಸಗೊಳಿಸಲಾದ ದಾರಿ ತಪ್ಪಿಸುವ ಮಾತಾಗಿತ್ತು.

ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಯಾವತ್ತೋ ಇಲ್ಲವಾಗಿದೆ. ಅಲ್ಲಿ ಈಗ ಕೇಂದ್ರೀಕೃತ ಕಮಾಂಡ್ ಎಲ್ಲವನ್ನೂ ನಡೆಸುತ್ತಿದೆ. ಹಾಗಾಗಿ, ಈ ಸೂಪರ್ ಬಾಸ್ ಸಾಮ್ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಎನ್ನಿಸಿಕೊಂಡವರು ವಾಸ್ತವದಲ್ಲಿ ರಾಷ್ಟ್ರೀಯ ವ್ಯವಸ್ಥಾಪಕ ಮಾತ್ರವಾಗಿದ್ದಾರೆ.

ಈ ಗೊಣಗಾಟದ ಆಳವನ್ನು ಅರ್ಥಮಾಡಿಕೊಳ್ಳಲು, ಪ್ರಧಾನಿಯವರು ಬಳಸಿದ ‘ಕೆಲಸಗಾರ-ಬಾಸ್’ ಪದಗಳನ್ನು ನೋಡಬೇಕು.

ತಮ್ಮ ಮೇಲೆಯೇ ಅವಲಂಬಿತವಾಗಿರುವ, ತಮಗಿಂತ 25 ವರ್ಷ ಕಿರಿಯ ವ್ಯಕ್ತಿಯನ್ನು ಪ್ರಧಾನಿ ಮೋದಿ ಬಹಿರಂಗವಾಗಿಯೇ ಬಾಸ್ ಎನ್ನುವಾಗ, ಅವರು ಒಂದು ಶ್ರೇಣಿ ವ್ಯವಸ್ಥೆಯೊಳಗೆ ತಮ್ಮನ್ನು ತಾವು ನೋಡುತ್ತಿರಲಿಲ್ಲ.ಬದಲಿಗೆ, ಅವರು ತಾವು ಮಾತ್ರ ಬಾಸ್ ಎಂಬುದನ್ನು ಎಲ್ಲರೆದುರು ಮರು ಸ್ಥಾಪಿಸುತ್ತಿದ್ದರು.

ಇದು ಸಿನಿಕತನದ, ಆದರೂ ಅದ್ಭುತವಾದ ರಾಜಕೀಯ ತಂತ್ರವಾಗಿದೆ. ಇದು ಆರೆಸ್ಸೆಸ್‌ನಿಂದ ಪಡೆದ ಬಳುವಳಿಯ ಹಾಗಿದೆ.

ಇಷ್ಟೆಲ್ಲ ಆದಮೇಲೆ, ನಿತಿನ್ ನಬಿನ್ ಎಂಬ ಯುವಕ ಈ ದೇಶದ ಪ್ರಧಾನಿಗೇ ಬಾಸ್ ಎಂದು ಬಿಜೆಪಿ ಈಗ ಶಾಶ್ವತ ಕಚೇರಿಗಳನ್ನು ಹೊಂದಿರುವ 772 ಜಿಲ್ಲೆಗಳಲ್ಲಿ ಯಾರಾದರೂ ನಂಬಲು ಸಾಧ್ಯವೆ?

ಹೊರಗಿನವರಿಗೆ ಬಾಸ್ ಥರ ಕಾಣಿಸುವ ಅವರು ಭಾರತ ಸರಕಾರದ ಸಂಪುಟ ಸಚಿವರನ್ನು ಪಕ್ಷದ ಕಚೇರಿಗೆ ಕರೆಸಿ ಪ್ರಶ್ನೆ ಮಾಡಬಲ್ಲರೆ? ಸರಕಾರದ ತಪ್ಪುಗಳಿಗೆ ವಿವರಣೆ ಕೇಳಬಲ್ಲರೆ? ಪ್ರಧಾನಿ ಬಯಸುವ ಅಭ್ಯರ್ಥಿಯನ್ನು ಅವರು ವೀಟೋ ಮಾಡಬಹುದೇ? ಪಕ್ಷದ ಯಾವುದೇ ಹುದ್ದೆಗೆ ಪ್ರಧಾನಿ ಸೂಚಿಸಿದ ವ್ಯಕ್ತಿ ಸೂಕ್ತ ಅಲ್ಲ ಎಂದು ಹೇಳಬಲ್ಲರೇ?

2026ರ ಬಿಜೆಪಿಯಲ್ಲಿ ಅಧಿಕಾರ ಸಾಂಸ್ಥಿಕ ಸ್ವರೂಪದ್ದಾಗಿ ಉಳಿದಿಲ್ಲ. ಬದಲಾಗಿ, ಅದು ನಾಯಕನ ಚರಿಷ್ಮಾವನ್ನು ಅವಲಂಬಿಸಿದೆ.

ನಬಿನ್‌ಗೆ ನೀಡಲಾದ ‘ಬಾಸ್’ ಬಿರುದು ಒಂದು ವಿಧ್ಯುಕ್ತ ಹಾರ ಅಷ್ಟೆ. ಮತ್ತದು ಬಲುಭಾರವಾಗಿದೆ, ಆಲಂಕಾರಿಕ ಮಾತ್ರವಾಗಿದೆ, ಅಂತಿಮವಾಗಿ ಉಸಿರುಗಟ್ಟಿಸುವಂಥದ್ದಾಗಿದೆ.

ಇದು ಅಧಿಕಾರದ ಕೇಂದ್ರೀಕರಣ ಮಾತ್ರವಲ್ಲ, ಬಿಜೆಪಿಯ ಐತಿಹಾಸಿಕ ಗುರುತಿನ ಅಳಿಸುವಿಕೆ ಎಂಬುದು ಈಗಿನ ದುರಂತ.

ಬಿಜೆಪಿ ಒಂದು ಕಾಲದಲ್ಲಿ ಪಾರ್ಟಿ ವಿತ್ ಎ ಡಿಫರೆನ್ಸ್ ಎಂದು ಹೇಳಿಕೊಳ್ಳುತ್ತಿದ್ದ ಪಕ್ಷವಾಗಿತ್ತು. ಅದು, ಎಲ್ಲಾ ದೋಷಗಳ ಹೊರತಾಗಿಯೂ ಸಾಮೂಹಿಕ ನಾಯಕತ್ವದ ಚೌಕಟ್ಟಿನೊಳಗೆ ದುಡಿದಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರ ಪಕ್ಷವಾಗಿತ್ತು.

ವೈಯಕ್ತಿಕ ಮಹತ್ವಾಕಾಂಕ್ಷೆಗಳು ತುಂಬಾ ತೀವ್ರಗೊಂಡಾಗ, ಆರೆಸ್ಸೆಸ್ ಮೂಲಕ ಮತ್ತೆ ಹಳಿಗೆ ಬರುತ್ತಿದ್ದ ಪಕ್ಷವಾಗಿತ್ತು.

2002ರಲ್ಲಿ ಒಬ್ಬ ಪ್ರಧಾನಿ ಒಬ್ಬ ಮುಖ್ಯಮಂತ್ರಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ರಾಜ ಧರ್ಮದ ಬಗ್ಗೆ ಎಚ್ಚರಿಸುವುದು ಸಾಧ್ಯವಿತ್ತು.

ಎಲ್ಲಾ ಪ್ರಜೆಗಳನ್ನು ತಾರತಮ್ಯವಿಲ್ಲದೆ ನಡೆಸಿಕೊಳ್ಳುವುದು ಆಡಳಿತಗಾರನ ಕರ್ತವ್ಯ ಎಂಬುದನ್ನು ನೆನಪಿಸಬಹುದಿತ್ತು. ವ್ಯಕ್ತಿ ಮತ್ತು ರಾಜ್ಯದ ನಡುವಿನ, ರಾಜಕಾರಣಿ ಮತ್ತು ರಾಜಧರ್ಮದ ನಡುವಿನ ವ್ಯತ್ಯಾಸವನ್ನು ತೋರಿಸುವುದು ನಡೆದಿತ್ತು.

ಆದರೆ, 2026ರಲ್ಲಿ ರಾಜ ಧರ್ಮವನ್ನೇ ಮರು ವ್ಯಾಖ್ಯಾನಿಸಲಾಗಿದೆ.

ಅದು ಇನ್ನು ಮುಂದೆ ನ್ಯಾಯ, ಸಮಾನತೆ ಅಥವಾ ಕಟ್ಟಕಡೆಯ ಮನುಷ್ಯನ ಕಲ್ಯಾಣದ ಬಗ್ಗೆ ಹೇಳುವುದಿಲ್ಲ.ಬದಲಾಗಿ, ಹೇಗಾದರೂ ಗೆಲ್ಲುವುದೇ ಇಂದು ರಾಜ ಧರ್ಮವಾಗಿದೆ. ಎಷ್ಟೇ ಬೆಲೆ ತೆತ್ತಾದರೂ, ನಿರ್ದಯವಾಗಿ ಅಧಿಕಾರವನ್ನು ವಶ ಮಾಡಿಕೊಳ್ಳುವುದೇ ಇಂದು ರಾಜಧರ್ಮವಾಗಿದೆ.

ಒಂದು ಕಾಲದಲ್ಲಿ ನಾಗಪುರದ ಕಡೆಗೆ ತೋರಿಸಿದ್ದ ನೈತಿಕ ದಿಕ್ಸೂಚಿ ಈಗ ಹುಚ್ಚೆದ್ದ ಹಾಗೆ ತಿರುಗುತ್ತಿದೆ. ಖಜಾನೆಯ ಆಕರ್ಷಣೆಯೊಂದೇ ಮುಖ್ಯ ಶಕ್ತಿಯಾಗಿದೆ. ಈ ರೂಪಾಂತರಕ್ಕೆ ಆರೆಸ್ಸೆಸ್ ಸ್ವತಃ ಮೂಕ ಪ್ರೇಕ್ಷಕನಾಗಿ ನಿಂತಿದೆ. ಸ್ವತಃ ಮೋಹನ್ ಭಾಗವತ್ ಅಚ್ಚರಿಗೊಂಡು ನಿಂತುಬಿಟ್ಟಿದ್ದಾರೆ.

ನಿತಿನ್ ನಬಿನ್ ಅವರ ನೇಮಕಾತಿ ಸಂಘದ ಸಾಂಪ್ರದಾಯಿಕ ಸಮಾಲೋಚನೆಯಿಂದ ನಿಶ್ಚಯವಾದದ್ದಲ್ಲ.

ಒಂದು ಕಾಲದಲ್ಲಿ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಆರೆಸ್ಸೆೆಸ್ ಈಗ ದುಡ್ಡಿನ ಗುಡ್ಡೆಯ ಮೇಲೆ ರಾರಾಜಿಸುತ್ತಿರುವ ಚುನಾವಣಾ ಯಂತ್ರಕ್ಕೆ ಸೇವೆ ಸಲ್ಲಿಸುವಲ್ಲಿಗೆ ಬಂದುಮುಟ್ಟಿದೆ.

ಸಂಘ ಮೌನವಾಗಿದೆ ಎನ್ನುವುದಕ್ಕಿಂತಲೂ, ಇದೆಲ್ಲವನ್ನೂ ನೋಡುತ್ತ ಅದಕ್ಕೆ ಗರಬಡಿದಂತಾಗಿದೆ.

ಸರಕಾರ ನೀವು ನೋಡಿಕೊಳ್ಳುವುದಾದರೆ ಪಕ್ಷವನ್ನು ನಮ್ಮ ಕೈಗೆ ಕೊಡಿ ಎಂದು ಸಂಘ ಹೇಳಿದೆ ಎನ್ನಲಾಗಿತ್ತು. ಆದರೆ ಈಗ ಅದ್ಯಾವುದೂ ನಡೆಯಲ್ಲ, ಈಗ ಏನಿದ್ದರೂ ಸೂಪರ್ ಬಾಸ್ ಹೇಳಿದ್ದೇ ಫೈನಲ್. ಸಂಘವೂ ಅದನ್ನೇ ಕೇಳಬೇಕು. ಕೇಳಿಕೊಂಡು ಸುಮ್ಮನಿರಬೇಕು ಅಷ್ಟೇ.

ಪ್ರಸ್ತುತ ವ್ಯವಸ್ಥೆಯ ಅತ್ಯಂತ ಆಕ್ರಮಣಕಾರಿ ಅಂಶವೆಂದರೆ ಇವತ್ತಿನ ರಾಜಕೀಯವನ್ನು ಆವರಿಸಿರುವ ಅಸಹನೀಯ ಆರ್ಥಿಕ ಅಸಮಾನತೆ.

2014ರಲ್ಲಿ ಬಿಜೆಪಿ ಮೊದಲು ಅಧಿಕಾರಕ್ಕೆ ಬಂದಾಗ ಅದರ ಬಳಿ ಸುಮಾರು 670 ಕೋಟಿ ರೂ. ಇತ್ತು. ಆಗಲೇ ಅದು ಒಂದು ರಾಜಕೀಯ ಪಕ್ಷದ ಬಳಿಯಿದ್ದ ಬಹಳ ದೊಡ್ಡ ಮೊತ್ತವಾಗಿತ್ತು. ಈಗ 2026ರಲ್ಲಿ ಬಿಜೆಪಿ 10,000 ಕೋಟಿ ರೂ. ಗೂ ಹೆಚ್ಚಿನ ನಿಧಿಯನ್ನು ಹೊಂದಿದೆ.

ಇದು ಕೇವಲ ನಿಧಿಯಲ್ಲಿನ ಏರಿಕೆಯಲ್ಲ. ಪ್ರಜಾಪ್ರಭುತ್ವದಲ್ಲಿ ಒಪ್ಪಲು ಸಾಧ್ಯವಿಲ್ಲದ ಅತಿಕ್ರಮಣ ಇದಾಗಿದೆ.

2024ರ ಚುನಾವಣೆಗಳ ವೆಚ್ಚ 3,350 ಕೋಟಿ ರೂ.ಗಳನ್ನು ದಾಟಿದೆ ಎಂದು ವರದಿಗಳು ಹೇಳುತ್ತವೆ.

ಇದೇ ಹೊತ್ತಲ್ಲಿ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಬಳಿ ಸಂಪನ್ಮೂಲದ ತೀವ್ರ ಕೊರತೆಯಿದೆ. ಅದರ ನಡುವೆಯೂ ಅವುಗಳ ಖಾತೆಗಳನ್ನು ಸ್ಥಗಿತಗೊಳಿಸುವುದು ಕೂಡ ನಡೆಯುತ್ತದೆ.

2014ರಲ್ಲಿ 200 ತಾತ್ಕಾಲಿಕ ಕಚೇರಿಗಳಿದ್ದ ಬಿಜೆಪಿ ಈಗ 770ಕ್ಕೂ ಹೆಚ್ಚು ಭವ್ಯ, ಶಾಶ್ವತ ಜಿಲ್ಲಾ ಪ್ರಧಾನ ಕಚೇರಿಗಳನ್ನು ಹೊಂದಿದೆ. ಅಂದರೆ ಅಷ್ಟರ ಮಟ್ಟಿಗೆ ಪಕ್ಷದ ಆಸ್ತಿ ಬೆಳೆದಿದೆ. ಹಾಗಾದರೆ, ಈ ಹಣ ಎಲ್ಲಿಂದ ಬರುತ್ತಿದೆ?

2024ರಲ್ಲಿ ಚುನಾವಣಾ ಬಾಂಡ್‌ಗಳ ರದ್ದತಿಯನ್ನು ಪಾರದರ್ಶಕತೆಯ ಗೆಲುವು ಎನ್ನಲಾಯಿತು. ಆದರೆ ಬಿಜೆಪಿಗೆ ಹರಿದುಬರುವ ನಿಧಿಯೇನೂ ಕಡಿಮೆಯಾಗಿಲ್ಲ. ಬದಲಾಗಿ ಅದು ಇನ್ನು ಹೆಚ್ಚಾಗಿದೆ. ಹಣ ಈಗ ಚುನಾವಣಾ ಟ್ರಸ್ಟ್ ಗಳು ಮತ್ತು ನೇರ ಕಾರ್ಪೊರೇಟ್ ದೇಣಿಗೆಗಳ ಮೂಲಕ ಬರುತ್ತಿದೆ.

ಇತ್ತೀಚೆಗೆ ಬಯಲಿಗೆ ಬಂದಿರುವ ಹೆಸರುಗಳು ಕ್ವಿಡ್ ಪ್ರೊ ಕ್ವೋ ಅಂದರೆ ಅವರು ಕೊಟ್ಟಿದ್ದಕ್ಕೆ ಅವರಿಗೆ ಬೇರೆ ಲಾಭ ಮಾಡಿ ಕೊಡುವ ವ್ಯವಹಾರದ ಕಥೆ ಹೇಳುತ್ತವೆ.

ಸುರೇಶ್ ಅಮೃತಲಾಲ್ ಕೋಟಕ್ ಅವರು ಬಿಜೆಪಿಗೆ 30 ಕೋಟಿ ರೂ. ಕೊಟ್ಟಿದ್ದಾರೆ. ವಿರೋಧ ಪಕ್ಷಗಳಲ್ಲಿ ರಾಜಕೀಯ ಹಿತಾಸಕ್ತಿಗಳನ್ನು ಹೊಂದಿರುವ ರಾಮ್ಕಿ ಗ್ರೂಪ್, ಇದ್ದಕ್ಕಿದ್ದಂತೆ 25 ಕೋಟಿ ರೂ. ದೇಣಿಗೆ ನೀಡುತ್ತದೆ.

ಹಣ ಎಲ್ಲಿಗೆ ಹೋಗಬೆಕು, ಯಾರಿಗೆ ಹೋಗಬಾರದು ಎಂದು ನಿಯಂತ್ರಿಸುವುದಕ್ಕೆ ತನಿಖಾ ಏಜೆನ್ಸಿಗಳಿವೆ.

ಸರಕಾರಿ ಗುತ್ತಿಗೆಗಳನ್ನು ಪಡೆಯುವ ಕಂಪೆನಿಗಳು ಪಕ್ಷದ ಖಾತೆಗಳಿಗೆ ಕೋಟಿಗಟ್ಟಲೆ ಹಣ ಹರಿಸುತ್ತಿರುವ ಭಯಂಕರ ವಾಸ್ತವವನ್ನು ಕಾಣಬಹುದು. ಇದು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲಾದ ಹೊಸ ಗುಜರಾತ್ ಮಾದರಿಯಾಗಿದೆ.

ಸಾರ್ವಜನಿಕರ ದುಡ್ಡಿನಿಂದ ಖಾಸಗಿ ಯೋಜನೆಗಳಿಗೆ ಹಣಕಾಸು ಒದಗಿಸಲಾಗುತ್ತದೆ.

ಖಾಸಗಿ ಫಲಾನುಭವಿಗಳು ಆಡಳಿತ ಪಕ್ಷಕ್ಕೆ ಹಣಕಾಸು ಒದಗಿಸುತ್ತಾರೆ.

ಇದು ತನ್ನನ್ನು ತಾನು ಅಧಿಕಾರದಲ್ಲಿ ಭದ್ರಪಡಿಸಿಕೊಳ್ಳುವ ಬಗೆಯಾಗಿದೆ.

ಸಾಮಾನ್ಯ ಮತದಾರರು ಇಲ್ಲಿ ಲೆಕ್ಕಕ್ಕಿಲ್ಲವಾಗಿದ್ದಾರೆ. ಇಲ್ಲಿ ಅಪಾಯವೆಂದರೆ ಹಣ ಮಾತ್ರವಲ್ಲ. ಆ ಹಣ ಸಂಸ್ಥೆಗಳ ಮೌನವನ್ನು ಖರೀದಿಸಿದೆ. ಅದು ರಾಜ್ಯದ ಅಧಿಕಾರವನ್ನು ಖರೀದಿಸಿದೆ.

ಒಂದೇ ಪಕ್ಷವು ಶೇ. 90 ರಾಜಕೀಯ ಬಂಡವಾಳವನ್ನು ನಿಯಂತ್ರಿಸಿದಾಗ, ಮುಕ್ತ ಮತ್ತು ನ್ಯಾಯಯುತ ಚುನಾವಣೆ ಎಂಬುದು ದೊಡ್ಡ ವ್ಯಂಗ್ಯವಾಗಿದೆ.

ವಿರೋಧ ಪಕ್ಷ ಕೇವಲ ರಾಜಕೀಯ ಹೋರಾಟವನ್ನು ಎದುರಿಸುತ್ತಿಲ್ಲ. ಅದು ಈ ಅಸಾಧಾರಣ ಆರ್ಥಿಕ ಅಸಮಾನತೆಯನ್ನು ಎದುರಿಸಿಯೂ ಗೆಲ್ಲಬೇಕಾಗಿದೆ.

ಈ ಎರಡನೆಯದರ ವಿರುದ್ಧದ ಹೋರಾಟದಲ್ಲೇ ಅದರ ಬಹುಪಾಲು ಶಕ್ತಿ ಕುಂದಿಹೋಗುತ್ತದೆ.

ಆಡಳಿತಾರೂಢ ಪಕ್ಷದ ಈ ಆರ್ಥಿಕ ಪ್ರಾಬಲ್ಯ ನಾಯಕ ಮತ್ತು ಕಾರ್ಯಕರ್ತರ ನಡುವಿನ ಸಂಬಂಧವನ್ನು ಮೂಲಭೂತವಾಗಿ ಬದಲಾಯಿಸಿದೆ.

ಬಿಜೆಪಿ ಒಂದು ಕಾಲದಲ್ಲಿ ಸೈಕಲ್ ಸವಾರಿ ಮಾಡಿ ವೈಯಕ್ತಿಕ ಸಂಪರ್ಕದ ಮೂಲಕ ಸಿದ್ಧಾಂತ ಹರಡುವ ಕಾರ್ಯಕರ್ತರ ಪಕ್ಷವಾಗಿತ್ತು. ಇಂದು, ಅದು ಕಚೇರಿಗಳು ಮತ್ತು ಖಜಾನೆಯ ಪಕ್ಷವಾಗಿದೆ.

ಭಾವನಾತ್ಮಕ ಸಂಪರ್ಕದ ಜಾಗದಲ್ಲಿ ವಹಿವಾಟು ಬಂದುಬಿಟ್ಟಿದೆ. ಸಿದ್ಧಾಂತವನ್ನು ಸರಕಾಗಿ ಮಾಡಲಾಗಿದೆ, ಅದು ಬರೀ ಆಕರ್ಷಕ ಘೋಷಣೆಗಳಲ್ಲಿ ಉಳಿದುಹೋಗಿದೆ.

ಕಲ್ಯಾಣ ರಾಜ್ಯದ ಕಾಲ ಮುಗಿದಿದೆ. ಸರಕಾರ ಈಗ ಬಡವರ ಕಡೆಗೆ ನೋಡುವುದಿಲ್ಲ. ಬದಲಾಗಿ, ಅದು ಶ್ರೀಮಂತರಿಗೆ ರೆಡ್ ಕಾರ್ಪೆಟ್ ಹಾಸುತ್ತದೆ. ಆಯ್ದ ಶೇ. 10 ಜನಸಂಖ್ಯೆಯ ಬೆಳೆಯುತ್ತಿರುವ ನಿವ್ವಳ ಆದಾಯ ಉಳಿದ ಶೇ. 90 ಜನರ ಬದುಕಿನ ಘೋರ ಸತ್ಯಗಳನ್ನು ಮರೆಮಾಚುತ್ತದೆ.

ವಿಕಸಿತ ಭಾರತ ಭ್ರಮೆ ಬಿತ್ತುತ್ತ, ಆ ಉನ್ಮಾದದಿಂದ ಜನಸಾಮಾನ್ಯರು ಎಚ್ಚರಗೊಳ್ಳದ ಹಾಗೆ ಮಾಡಲಾಗಿದೆ.

ಹೀಗಿರುವಾಗ, ಬಿಜೆಪಿಗೆ ಗಟ್ಟಿಯಾದ, ಸ್ವತಂತ್ರ ಮನಸ್ಸಿನ ಅಧ್ಯಕ್ಷರು ಬೇಕಿಲ್ಲ. ತನ್ನ ಅಭದ್ರತೆ ನಿವಾರಿಸಿಕೊಳ್ಳುವುದು ಸೂಪರ್ ಬಾಸ್‌ಗೆ ಅಗತ್ಯವಾಗಿದೆ.

ಈ ಹಿಂದೆಯೂ ನಿತಿನ್ ಗಡ್ಕರಿಯಂಥ ಗಟ್ಟಿ ನಾಯಕನನ್ನು ತಮ್ಮ ಮಾತು ಕೇಳದವರೆಂಬ ಕಾರಣಕ್ಕೆ ಕಿತ್ತುಹಾಕಲಾಯಿತು. ಆ ಜಾಗಕ್ಕೆ ರಾಜನಾಥ್ ಸಿಂಗ್ ಮತ್ತು ಜೆ.ಪಿ. ನಡ್ಡಾ ಥರದ, ಇವರು ಹೇಳಿದಕ್ಕೆ ತಲೆಯಾಡಿಸುವ ಜನರು ಬಂದರು. ಈಗ ಬಿಜೆಪಿ ಅಧ್ಯಕ್ಷರ ಕೆಲಸ ರ್ಯಾಲಿಗಳಲ್ಲಿ ಮೋದಿಯವರಿಗೆ ಹಾರ ಹಾಕುವ ಮಟ್ಟಕ್ಕೆ ಸೀಮಿತವಾಗಿದೆ. ನಿತಿನ್ ನಬಿನ್ ಈ ಮಾದರಿಗೆ ಹೇಳಿಮಾಡಿಸಿದಂತಿದ್ದಾರೆ. ಅವರು ವಯಸ್ಸಿನಲ್ಲಿ ಸಣ್ಣವರು, ಅನುಭವದಲ್ಲೂ ಸಣ್ಣವರು, ವರ್ಚಸ್ಸಿನಲ್ಲಿ ಇನ್ನೂ ಸಣ್ಣವರು ಮತ್ತು ಪಕ್ಕಾ ನಿಷ್ಠಾವಂತ. ಅವರೆಂದಿಗೂ ಸೂಪರ್ ಬಾಸ್ ಪಾಲಿಗೆ ಬೆದರಿಕೆಯಾಗುವುದಿಲ್ಲ.

2029ರ ಹೊತ್ತಿಗೆ, ಸೂಪರ್ ಬಾಸ್ 80 ವರ್ಷಗಳನ್ನು ಸಮೀಪಿಸಲಿದ್ದಾರೆ.

ಅಮಿತ್ ಶಾ, ಆದಿತ್ಯನಾಥ್ ಮತ್ತು ದೇವೇಂದ್ರ ಫಡ್ನವಿಸ್‌ರಂಥವರ ಉತ್ತರಾಧಿಕಾರದ ಹೋರಾಟ ನಡೆಯುವುದಿದೆ.ಹಾಗಿರುವಾಗಲೇ ಈಗ ನಿಷ್ಠಾವಂತನನ್ನು ತಂದು ಕೂರಿಸಿಕೊಳ್ಳುವ ಮೂಲಕ ಸೂಪರ್ ಬಾಸ್ ಎಲ್ಲವೂ ತನ್ನ ನಿಯಂತ್ರಣದಲ್ಲಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಈಗ ಪಕ್ಷದ ಸಂಘಟನೆ ತಾನು ಬಯಸಿದಂತೆ ಆಗುತ್ತದೆ ಎಂಬುದು ಅವರಿಗೆ ಖಚಿತವಾಗಿದೆ. ಅವರ ಸ್ವಂತ ಪ್ರಾಬಲ್ಯವನ್ನು ಸವಾಲು ಮಾಡುವ ಯಾವುದೇ ಪರ್ಯಾಯ ಶಕ್ತಿ ಕೇಂದ್ರ ಹುಟ್ಟಿಕೊಳ್ಳಲು ಅವಕಾಶವೇ ಇರುವುದಿಲ್ಲ.

ಜಾಗತಿಕ ಅಸ್ಥಿರತೆಯ ಹಿನ್ನೆಲೆಯಲ್ಲಿ ನೋಡಿದಾಗ ಅಧಿಕಾರದ ಈ ಕೇಂದ್ರೀಕರಣ ಇನ್ನಷ್ಟು ಕಳವಳಕಾರಿಯಾಗಿದೆ. ಜಗತ್ತು ಅಸ್ಥಿರವಾಗಿರುವ ಹೊತ್ತಲ್ಲಿ ಭಾರತವನ್ನು ಒಬ್ಬ ವ್ಯಕ್ತಿ, ಒಬ್ಬ ಧ್ವನಿ ಮತ್ತು ಒಂದು ಬಲಿಷ್ಠ ಬ್ಯಾಂಕ್ ಖಾತೆಯ ಪಕ್ಷ ಮುನ್ನಡೆಸುತ್ತಿದೆ.

ಸೂಪರ್ ಬಾಸ್ ಒಬ್ಬರೇ ದೇಶದ ವಿದೇಶಾಂಗ ನೀತಿ, ಆರ್ಥಿಕ ನೀತಿ ಮತ್ತು ಪಕ್ಷದ ಕಾರ್ಯತಂತ್ರದ ಬಗ್ಗೆ ನಿರ್ಧರಿಸುವವರಾಗಿದ್ದರೆ, ದುರಂತದ ಅಪಾಯ ಇನ್ನೂ ಹೆಚ್ಚಾಗುತ್ತದೆ.

ಆ ಸೂಪರ್ ಬಾಸ್‌ಗೆ ಎಚ್ಚರಿಕೆ ನೀಡಲು ಯಾರೂ ಉಳಿದಿಲ್ಲ, ದೋಷ ಸರಿಪಡಿಸಲು ಯಾರೂ ಉಳಿದಿಲ್ಲ.

ಮುಂದೇನು ಎಂಬುದನ್ನು ಖಂಡಿತ ಹೇಳಲು ಸಾಧ್ಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪಿ.ಎಚ್. ಅರುಣ್

contributor

Similar News