ಸಮಸ್ಯೆಗಳ ಆಗರವಾದ ಅಬ್ಬಯ್ಯ ನಗರ: ಕತ್ತಲಲ್ಲಿ ಬದುಕುತ್ತಿರುವ ಕುಟುಂಬಗಳು
ಎಂಟು ತಿಂಗಳಾದರೂ ಮನೆಗಳಿಗಿಲ್ಲ ವಿದ್ಯುತ್, ನೀರಿನ ಸಂಪರ್ಕ
ಹುಬ್ಬಳ್ಳಿ : ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ವಸತಿ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿ ಹಸ್ತಾಂತರಿಸಿರುವ 1,008 ಮನೆಗಳು ಇದೀಗ ಮೂಲಸೌಲಭ್ಯಗಳ ಕೊರತೆಯಿಂದ ಸಮಸ್ಯೆಗಳ ಆಗರವಾಗಿವೆ. ಮನೆಗಳ ಹಸ್ತಾಂತರವಾಗಿ ಸುಮಾರು ಎಂಟು ತಿಂಗಳು ಕಳೆದರೂ ವಿದ್ಯುತ್ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದರಿಂದ ನಿವಾಸಿಗಳು ಪರದಾಡುವಂತಾಗಿದೆ.
ಅಬ್ಬಯ್ಯ ನಗರದಲ್ಲಿ ನಿರ್ಮಿಸಿರುವ ಮನೆಗಳು ಹೊರನೋಟಕ್ಕೆ ಆಕರ್ಷಕವಾಗಿವೆ. ಸುಸಜ್ಜಿತ ಮನೆಗಳ ಜತೆಗೆ ರಸ್ತೆ, ಪಾರ್ಕಿಂಗ್, ಉದ್ಯಾನವನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದೆ. ಪರಿಣಾಮವಾಗಿ ಮನೆ ಹಂಚಿಕೆಯಾಗಿದ್ದರೂ ಇಲ್ಲಿ ವಾಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದೇವೆ ಎಂದು ಫಲಾನುಭವಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯುತ್ ಇಲ್ಲದ ಕಾರಣ ಸಂಜೆ ಆಗುತ್ತಿದ್ದಂತೆ ಇಡೀ ಬಡಾವಣೆ ಕತ್ತಲಲ್ಲಿ ಮುಳುಗುತ್ತದೆ. ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಿಡಿಗೇಡಿಗಳು ಖಾಲಿ ಮನೆಗಳ ಸುತ್ತಮುತ್ತ ಮದ್ಯ ಸೇವನೆ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಕೆಲವರು ಹಗಲು ಹೊತ್ತಿನಲ್ಲೇ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಸೇವಿಸುತ್ತಾರೆ. ಖಾಲಿ ಮನೆಗಳ ಎದುರು ಮದ್ಯದ ಬಾಟಲಿಗಳನ್ನು ಒಡೆದು ಚೆಲ್ಲಾಪಿಲ್ಲಿಯಾಗಿ ಬಿಸಾಡಿರುವುದು ಕಂಡು ಬರುತ್ತಿದೆ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರಲ್ಲಿ ಆತಂಕ ಹೆಚ್ಚಾಗಿದೆ.
ಸಂಜೆಯಾಗುತ್ತಿದ್ದಂತೆ ಕುಟುಂಬದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ದುಡಿಯಲು ಹೊರಗೆ ತೆರಳಿರುವ ಪುರುಷರು ಬೇಗ ಮನೆಗೆ ಮರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ‘ಮನೆ ಹಂಚಿಕೆಯಾಗಿ ಹೊಸ ಜೀವನ ಆರಂಭಿಸುವ ಕನಸು ಕಂಡಿದ್ದೆವು. ಆದರೆ, ರಾತ್ರಿ ವೇಳೆ ಮನೆಯಿಂದ ಹೊರಬರಲೂ ಭಯವಾಗುತ್ತಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಕುಡಿಯುವ ನೀರಿಗೂ ಪರದಾಟ :
ವಿದ್ಯುತ್ ಸಮಸ್ಯೆಯ ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ನಿವಾಸಿಗಳನ್ನು ಕಾಡುತ್ತಿದೆ. ಹಲವು ಬಾರಿ ಮನವಿ ಮಾಡಿದ ಬಳಿಕ ಪಾಲಿಕೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಈ ನೀರು ಎಲ್ಲ ಕುಟುಂಬಗಳಿಗೂ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬಸ್ ಸಂಪರ್ಕವೂ ಇಲ್ಲ :
ಬಡಾವಣೆಯ ಆರಂಭದಲ್ಲೇ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, ಮನೆಗಳ ಹಸ್ತಾಂತರವಾಗಿ ಎಂಟು ತಿಂಗಳು ಕಳೆದರೂ ಇಲ್ಲಿಗೆ ಸಮರ್ಪಕ ಬಸ್ ಸಂಪರ್ಕ ಕಲ್ಪಿಸಲಾಗಿಲ್ಲ. ಹೀಗಾಗಿ ನಿವಾಸಿಗಳು ಸುಮಾರು ಎರಡು ಕಿ.ಮೀ. ನಡೆದುಕೊಂಡು ಮುಖ್ಯ ರಸ್ತೆಗೆ ತೆರಳಬೇಕು. ವಯೋವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಆಟೊಗಳನ್ನೇ ಅವಲಂಬಿಸಬೇಕಾಗಿದ್ದು, ಚಾಲಕರು ಕೇಳಿದಷ್ಟು ಹಣ ನೀಡಬೇಕಾದ ಪರಿಸ್ಥಿತಿ ಇದೆ.
ಕಸ ಸಂಗ್ರಹಣೆಯೂ ಮರೀಚಿಕೆ :
ಪಾಲಿಕೆಯ ಕಸ ಸಂಗ್ರಹಣೆ ವಾಹನಗಳು ಬಾರದಿರುವುದರಿಂದ ಬಡಾವಣೆಯ ವಿವಿಧೆಡೆ ಕಸ ಬಿದ್ದಿರುವುದು ಕಂಡುಬರುತ್ತಿದೆ. ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನಿವಾಸಿಗಳು ಅನಿವಾರ್ಯವಾಗಿ ಅಲ್ಲಲ್ಲಿ ಕಸ ಹಾಕುವಂತಾಗಿದೆ.
‘ಕನಸಿನ ಮನೆಗೆ ಬಂದರೂ ನೆಮ್ಮದಿಯಿಲ್ಲ’ :
‘ಕೊಳಗೇರಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದ ನಮಗೆ ಸರಕಾರ ಮನೆ ನಿರ್ಮಿಸಿಕೊಟ್ಟಿರುವುದು ಸಂತಸದ ವಿಚಾರ. ಉತ್ತಮ ಮನೆಗಳನ್ನು ನಿರ್ಮಿಸಿದ್ದಾರೆ. ಆದರೆ, ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ಇಲ್ಲಿ ಕಾಲ ಕಳೆಯುವುದೇ ಕಷ್ಟವಾಗಿದೆ. ತಕ್ಷಣ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ನಿವಾಸಿ ಸಲ್ಮಾ ಒತ್ತಾಯಿಸಿದ್ದಾರೆ.
ಸೌಲಭ್ಯ ಕಲ್ಪಿಸಲು ಆಗ್ರಹ :
ಬಡವರಿಗಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದ ಬಳಿಕವೂ ಮೂಲಭೂತ ಸೌಲಭ್ಯಗಳನ್ನು ಒದಗಿಸದಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆ ಕೊಟ್ಟಿದ್ದೇವೆ ಎಂಬುದಷ್ಟೇ ಸಾಕಾಗುವುದಿಲ್ಲ, ಆ ಮನೆಯಲ್ಲಿ ನೆಮ್ಮದಿಯಿಂದ ಬದುಕಲು ಅಗತ್ಯವಾದ ಮೂಲಸೌಲಭ್ಯಗಳನ್ನೂ ಕಲ್ಪಿಸಬೇಕು ಎಂಬುವುದು ಅಬ್ಬಯ್ಯ ನಗರದ ನಿವಾಸಿಗಳ ಒಕ್ಕೊರಲಿನ ಆಗ್ರಹವಾಗಿದೆ.
ಮನೆ ಸಿಕ್ಕರೂ ವಾಸಕ್ಕೆ ಬರದ ವೃದ್ಧ ದಂಪತಿ :
‘ನಾವು ಇಬ್ಬರೂ ವಯೋವೃದ್ಧರು. ಮನೆ ಹಂಚಿಕೆಯಾದಾಗ ಬಹಳ ಸಂತೋಷವಾಗಿತ್ತು. ಆದರೆ, ಮನೆಗೆ ಇನ್ನೂ ವಿದ್ಯುತ್, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಬಂದು ಹೇಗೆ ಬದುಕುವುದು? ಹೀಗಾಗಿ ಈಗಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ವಾರಕ್ಕೊಮ್ಮೆ ಇಲ್ಲಿಗೆ ಬಂದು ವಿದ್ಯುತ್ ಸಂಪರ್ಕ ಆಗಿದೆಯೇ ಎಂದು ನೋಡಿಕೊಂಡು ಹೋಗುತ್ತೇನೆ. ಯಾವಾಗ ಸೌಲಭ್ಯ ಸಿಗುತ್ತದೆಯೋ ಗೊತ್ತಿಲ್ಲ’ ಎಂದು ನಿವಾಸಿ ಮಧುಮತಿ ಅಳಲು ತೋಡಿಕೊಂಡಿದ್ದಾರೆ.
ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ :
ವಿದ್ಯುತ್ ಸಂಪರ್ಕದ ಕೊರತೆ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರಿದೆ. ರಾತ್ರಿ ವೇಳೆಯಲ್ಲಿ ಓದಲು ಸಾಧ್ಯವಾಗದೆ ಮಕ್ಕಳು ಪರದಾಡುತ್ತಿದ್ದಾರೆ. ಮೊಬೈಲ್, ಬ್ಯಾಟರಿ ಹಾಗೂ ಇತರ ವಿದ್ಯುತ್ ಉಪಕರಣಗಳನ್ನು ಚಾರ್ಜ್ ಮಾಡಿಕೊಳ್ಳಲು ಸಂಬಂಧಿಕರು ಅಥವಾ ಸ್ನೇಹಿತರ ಮನೆಗಳಿಗೆ ತೆರಳಬೇಕಾಗಿದೆ. ಅಂತಹ ವ್ಯವಸ್ಥೆ ಇಲ್ಲದವರು ಹತ್ತಿರದ ಅಂಗಡಿಗಳಲ್ಲಿ ಹಣ ನೀಡಿ ಮೊಬೈಲ್ ಚಾರ್ಜ್ ಮಾಡಿಸಿಕೊಳ್ಳುವಂತಾಗಿದೆ.
ಈ ಹಿಂದೆ ವಿದ್ಯುತ್ ಸಂಪರ್ಕ ಕಲ್ಪಿಸಿದಾಗ ತಾಂತ್ರಿಕ ತೊಂದರೆಯಿಂದ ಸೆಕೆಂಡರಿ ಪವರ್ ಸೋರ್ಸ್ ಸ್ಫೋಟಗೊಂಡಿತ್ತು. ಹೀಗಾಗಿ ಡಿಪಿ ಸೆಟ್ ಬದಲಾಯಿಸಲಾಗುತ್ತಿದೆ. ಇನ್ನು 3-4 ದಿನಗಳಲ್ಲಿ ಎಲ್ಲ ಕಾಮಗಾರಿ ಮುಗಿದು ವಿದ್ಯುತ್ ಸರಬರಾಜು ಆಗಲಿದೆ. ಕುಡಿಯುವ ನೀರಿಗೆ ಬೋರ್‌ವೆಲ್‌ಗಳಿದ್ದು ವಿದ್ಯುತ್ ಸಮಸ್ಯೆಯಿಂದ ತೊಂದರೆಯುಂಟಾಗಿತ್ತು. ವಿದ್ಯುತ್ ಸರಬರಾಜು ಆರಂಭವಾದ ಮೇಲೆ ನೀರಿನ ಸಮಸ್ಯೆಯೂ ಬಗೆಹರಿಯಲಿದೆ.
-ಪ್ರವೀಣ್ ಹಾನಗಲ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ, ಧಾರವಾಡ