ಸಾಂದರ್ಭಿಕ ಚಿತ್ರ
ಮಡಿಕೇರಿ : ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಐದು ವರ್ಷಗಳ ನಂತರ ಕಾಲ ಕೂಡಿ ಬಂದಿದ್ದು,ಇದೀಗ ಸರಕಾರ ವರ್ಗವಾರು ಮೀಸಲು ಪಟ್ಟಿಯನ್ನು ಪ್ರಕಟಿಸಿದೆ.ಎರಡ್ಮೂರು ದಿನಗಳಲ್ಲಿ ಕ್ಷೇತ್ರವಾರು ಮೀಸಲು ಪಟ್ಟಿ ಪ್ರಕಟಗೊಳ್ಳಲಿದೆ.
ಇದೀಗ ಕ್ಷೇತ್ರವಾರು ಮೀಸಲು ಪಟ್ಟಿಯ ಮೇಲೆ ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಮೀಸಲು ನಿಗದಿಪಡಿಸುವ ಅಧಿಕಾರ ಸರಕಾರದ ಕೈಯಲ್ಲಿರುವುದರಿಂದ ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲಾತಿ ತಯಾರಿಸುವ ಸಾಧ್ಯತೆ ಇದೆ. ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯನ್ನು ಜನಸಂಖ್ಯೆ ಆಧಾರದಲ್ಲಿ ಕಡ್ಡಾಯವಾಗಿ ಮೀಸಲಿಡಬೇಕು. ಉಳಿದ ಕ್ಷೇತ್ರಗಳನ್ನು ಸರಕಾರ ತಮ್ಮ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ಮೀಸಲು ನಿಗದಿಪಡಿಸುವುದು ಮಾಮೂಲಿಯಾಗಿದೆ.
ಕಾಂಗ್ರೆಸ್‌ನಲ್ಲಿ ಲೆಕ್ಕಾಚಾರ ಶುರು :
ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳೊಂದಿಗೆ ಶಾಸಕದ್ವಯರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅದಲ್ಲದೇ ಯಾವ ಕ್ಷೇತ್ರದಲ್ಲಿ ಯಾವ ಮೀಸಲು ನಿಗದಿಪಡಿಸಿದರೆ ಸುಲಭದಲ್ಲಿ ಗೆಲುವು ಸಾಧಿಸ ಬಹುದೆಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಈಗಾಗಲೇ ಮಾಡಿದೆ. ಕಾಂಗ್ರೆಸ್ ನಾಯಕರು ಈಗಾಗಲೇ ಕೆಲವು ಕ್ಷೇತ್ರಗಳ ಮೇಲೆ ಕಣ್ಟಿಟ್ಟಿದ್ದಾರೆ.
ಜನವರಿ ಎರಡನೇ ವಾರದೊಳಗೆ ಜಿಪಂ, ತಾಪಂ ಚುನಾವಣೆ :
ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು 2027ರ ಜನವರಿ ಎರಡನೇ ವಾರದ ಒಳಗೆ ಪೂರ್ಣಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಖಚಿತಪಡಿಸಿದ್ದಾರೆ.
ಪ್ರಸಕ್ತ ಇರುವ ವೇಳಾಪಟ್ಟಿಯ ಪ್ರಕಾರ ಡಿ.15ರೊಳಗೆ ಕೇಂದ್ರ ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಿದೆ. ಈ ಪಟ್ಟಿ ಪ್ರಕಟವಾದ ತಕ್ಷಣ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಮತ್ತು ತಾಪಂ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ವೇಳಾಪಟ್ಟಿ ಪ್ರಕಟವಾದ 45 ದಿನಗಳೊಳಗೆ ಮತದಾನ ಮತ್ತು ಫಲಿತಾಂಶ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಅವರು ವಿವರಿಸಿದರು.
ಡಿಸೆಂಬರ್‌ನಲ್ಲೇ ಚುನಾವಣೆಗೆ ಸಿದ್ಧ :
ಒಂದು ವೇಳೆ ಅಂತಿಮ ಮತದಾರರ ಪಟ್ಟಿ ಬೇಗ ಪ್ರಕಟವಾದರೆ ಡಿಸೆಂಬರ್ ತಿಂಗಳಿನಲ್ಲಿಯೇ ಚುನಾವಣೆ ನಡೆಸಲು ರಾಜ್ಯ ಸರಕಾರ ಸಿದ್ಧವಿದೆ. ಜಿಲ್ಲಾ ಮತ್ತು ತಾಪಂ ಚುನಾವಣೆಗಳ ನಂತರ ಗ್ರಾಪಂ ಚುನಾವಣೆಗಳು ನಡೆಯಲಿವೆ. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಚುನಾವಣೆ ವಿಳಂಬವಾದರೆ ಅದಕ್ಕೆ ಚುನಾವಣಾ ಆಯೋಗವೇ ನೇರ ಹೊಣೆ ಹೊರಬೇಕಾಗುತ್ತದೆ ಹೊರತು ರಾಜ್ಯ ಸರಕಾರವಲ್ಲ ಎಂದು ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
2021ರ ಕೊಡಗಿನ ಜಿಪಂ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿ :
ಕಡಗದಾಳು(ಮಕ್ಕಂದೂರು): ಸಾಮಾನ್ಯ (ಮಹಿಳೆ), ಎಂ.ಚೆಂಬು(ಸಂಪಾಜೆ): ಸಾಮಾನ್ಯ (ಮಹಿಳೆ), ಕರಿಕೆ(ಭಾಗಮಂಡಲ): ಸಾಮಾನ್ಯ, ಕುಂಜಿಲ(ಕಕ್ಕಬ್ಬೆ) ಹಿಂದುಳಿದ ವರ್ಗ ‘ಅ’ ಮಹಿಳೆ, ಮೇಕೇರಿ(ಹಾಕತ್ತೂರು):ಹಿಂದುಳಿದ ವರ್ಗ ‘ಅ’, ಕಾಂತೂರು ಮೂರ್ನಾಡು: ಸಾಮಾನ್ಯ, ಎಮ್ಮೆಮಾಡು(ನಾಪೊಕ್ಲು): ಸಾಮಾನ್ಯ (ಮಹಿಳೆ), ದೊಡ್ಡಕೊಡ್ಲಿ(ಕೊಡ್ಲಿಪೇಟೆ): ಸಾಮಾನ್ಯ (ಮಹಿಳೆ), ಶನಿವಾರಸಂತೆ:ಹಿಂದುಳಿದ ವರ್ಗ ‘ಅ’, ಗೋಣಿಮರೂರು: ಅನುಸೂಚಿತ ಪಂಗಡ, ಬಳಗುಂದ(ಬೇಳೂರು ಬಸವನಹಳ್ಳಿ): ಸಾಮಾನ್ಯ, ಗರಗಂದೂರು(ಮಾದಪುರ):ಅನು ಸೂಚಿತ ಜಾತಿ (ಮಹಿಳೆ), ಚೌಡ್ಲು:ಸಾಮಾನ್ಯ (ಮಹಿಳೆ), ನೆಲ್ಲಿಹುದಿಕೇರಿ:ಸಾಮಾನ್ಯ, ಅಂದಗೋವೆ(ಗುಡ್ಡೆಹೊಸೂರು) ಸಾಮಾನ್ಯ (ಮಹಿಳೆ), ಕೂಡಮಂಗಳೂರು: ಹಿಂದುಳಿದ ವರ್ಗ ‘ಬ’(ಮಹಿಳೆ), ಕೂಡಿಗೆ: ಹಿಂದುಳಿದ ವರ್ಗ ‘ಅ’ ಮಹಿಳೆ, ಉಲುಗುಲಿ(ಸುಂಟ್ಟಿಕೊಪ್ಪ): ಅನುಸೂಚಿತ ಜಾತಿ, ಆರ್ಜಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಕೆದಮುಳ್ಳೂರು(ಸಾಮಾನ್ಯ ಮಹಿಳೆ), ಕಾರ್ಮಾಡು:(ಅನುಸೂಚಿತ ಪಂಗಡ)(ಮಹಿಳೆ), ಕರಡಿಗೋಡು(ಸಿದ್ದಾಪುರ): ಸಾಮಾನ್ಯ, ಚೆನ್ನಯ್ಯನಕೋಟೆ: ಹಿಂದುಳಿದ ವರ್ಗ ‘ಅ’, ಹೆಬ್ಬಾಲೆ: ಸಾಮಾನ್ಯ, ಬಾಳೆಲೆ: ಸಾಮಾನ್ಯ, ಗೋಣಿಕೊಪ್ಪಲು: ಸಾಮಾನ್ಯ (ಮಹಿಳೆ), ಹಳ್ಳಿಗಟ್ಟು(ಪೊನ್ನಂಪೇಟೆ): ಸಾಮಾನ್ಯ, ಕುಟ್ಟ: ಅನುಸೂಚಿತ ಜಾತಿ(ಮಹಿಳೆ), ಟಿ.ಶೆಟ್ಟಿಗೇರಿ:ಅನುಸೂಚಿತ ಪಂಗಡ(ಮಹಿಳೆ).