ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ 243 ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಕೊಪ್ಪ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಸೇರಿದಂತೆ ಐವರು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಿರುವ ವಿಚಾರ ಸದ್ಯ ಜಿಲ್ಲಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಕಾರಣಕ್ಕೆ ಒಂದು ಪಕ್ಷದ ಮುಖಂಡರು ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೊಪ್ಪ ತಾಲೂಕಿನ ವಿವಿಧ ಬೂತ್‌ಗಳ 243 ಮತದಾರರು ಅರ್ಹ ಮತದಾರರಾಗಿದ್ದರೂ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಈ ಆಕ್ಷೇಪಣೆಗಳನ್ನು ಸಲ್ಲಿಸಿರುವುದು ಬಿಜೆಪಿ ಮುಖಂಡರೊಬ್ಬರು ತಾವು ಸಲ್ಲಿಸಿದ್ದ ಫಾರಂ-7 ಅರ್ಜಿ ಹಿಂಪಡೆದಿರುವ ಘಟನೆಯಿಂದ ಸ್ಪಷ್ಟವಾಗುತ್ತಿದೆ.

ಕೊಪ್ಪ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂರು 63 ಮಂದಿ ಮತದಾರರ ಹೆಸರು ಡಿಲೀಟ್‌ಗೆ ಅರ್ಜಿ ಸಲ್ಲಿಸಿದ್ದರೆ, ಶಾತನಿಕ 104, ಹಾಲಪ್ಪ 60, ಕಾರ್ತಿಕ್ 8, ಬಿಶೇಜ 5 ಹಾಗೂ ಅರ್ಜುನ್ ಎಂಬವರು 3 ಮಂದಿ ಮತದಾರರ ಹೆಸರು ಡಿಲೀಟ್‌ಗೆ ಅರ್ಜಿ ಸಲ್ಲಿಸಿದ್ದು, ‘ಈ ಮತದಾರರು ಬೇರೆಡೆ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ, ವಾಸ ಸ್ಥಳದಲ್ಲಿ ಇರುವುದಿಲ್ಲ’ ಎಂದು ಫಾರಂ-7 ಅರ್ಜಿಯಲ್ಲಿ ಹೆಸರು ಡಿಲೀಟ್‌ಗೆ ಕಾರಣ ನೀಡಿದ್ದಾರೆ. ಫಾರಂ-7 ಆಕ್ಷೇಪಣಾ ಅರ್ಜಿ ಸಲ್ಲಿಸಿರುವ ಈ ಎಲ್ಲ ಮುಖಂಡರು ಕೊಪ್ಪ ತಾಲೂಕು ಬಿಜೆಪಿ ಮುಖಂಡರಾಗಿದ್ದಾರೆ.

ಆಕ್ಷೇಪಣೆ ಅರ್ಜಿ ಹಿಂಪಡೆಯುವ ವೇಳೆ ಯಡವಟ್ಟು :

ಕೊಪ್ಪ ತಾಲೂಕಿನ ವಿವಿಧ ಬೂತ್‌ಗಳ ಮತದಾರರಾಗಿರುವ 243 ಮಂದಿ ಅರ್ಹ ಮತದಾರರು ಎಂಬುದು ದೃಢವಾಗುತ್ತಿದ್ದಂತೆ ಎಚ್.ಕೆ.ದಿನೇಶ್ ಸೆ.29ರಂದು ಕೊಪ್ಪ ತಾಲೂಕು ಚುನಾವಣಾಧಿಕಾರಿಗೆ ಆಕ್ಷೇಪಣೆ ಅರ್ಜಿ ಹಿಂಪಡೆಯುತ್ತಿರುವುದಾಗಿ ಪತ್ರ ಸಲ್ಲಿಸಿದ್ದರು. ಈ ವೇಳೆ ದಿನೇಶ್ ಸಲ್ಲಿಸಿದ್ದ 63 ಆಕ್ಷೇಪ ಅರ್ಜಿಗೆ ಬದಲಾಗಿ ಶಾತನಿಕ, ಹಾಲಪ್ಪ, ಕಾರ್ತಿಕ್, ಅರ್ಜುನ್, ಬಿಶೇಜ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಗಳನ್ನೂ ಹಿಂಪಡೆಯುತ್ತಿರುವುದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

ಶಾತನಿಕ, ಹಾಲಪ್ಪ, ಕಾರ್ತಿಕ್, ಅರ್ಜುನ್, ಬಿಶೇಜ ಅವರ ಆಕ್ಷೇಪ ಅರ್ಜಿಗಳಿಗೆ ಖುದ್ದು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದವರೇ ಅರ್ಜಿ ಸಲ್ಲಿಸಬೇಕೆಂಬ ನಿಯಮವಿದ್ದರೂ 243 ಆಕ್ಷೇಪಣಾ ಅರ್ಜಿಗಳಿಗೂ ದಿನೇಶ್ ಒಬ್ಬರೇ ಅರ್ಜಿ ಹಿಂಪಡೆಯುತ್ತಿರುವುದಾಗಿ ಪತ್ರ ನೀಡಿ ಯಡವಟ್ಟು ಮಾಡಿಕೊಂಡಿರುವುದರಿಂದ ಈ ಪತ್ರವನ್ನು ಚುನಾವಣಾಧಿಕಾರಿಗಳು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ.

ಎಸ್‌ಐಆರ್ ಸಂದರ್ಭ ಈ 243 ಮತದಾರರ ಮನೆಗಳಿಗೂ ಬಿಎಲ್‌ಒ, ಬಿಎಲ್‌ಎಗಳು ಭೇಟಿ ನೀಡಿದ್ದು, ಎಲ್ಲ ಮತದಾರರ ವಿವರಗಳನ್ನು ಅಧಿಕಾರಿಗಳು ಈ ಮತದಾರರಿಂದ ಪಡೆದಿದ್ದಾರೆ. ಈ ವೇಳೆ ಎಲ್ಲೂ ಈ ಮತದಾರರು ಬೇರೆಡೆ ಹೆಸರು ನೋಂದಾಯಿಸಿಕೊಂಡಿರುವುದು, ವಾಸ ಸ್ಥಳದಲ್ಲಿ ಇಲ್ಲದಿರುವ ವಿಚಾರ ಕಂಡು ಬಂದಿಲ್ಲ ಎಂಬುದನ್ನು ಬಿಎಲ್‌ಒ ಲಿಲ್ಲಿ ಜೋಯ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಅವರು, ತಪ್ಪು ಮಾಹಿತಿಯೊಂದಿಗೆ ಫಾರಂ-7 ಅರ್ಜಿ ಸಲ್ಲಿಸಿರುವ ದಿನೇಶ್ ಸೇರಿದಂತೆ 6 ಮಂದಿ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ದೇಶಾದ್ಯಂತ ಮತಗಳ್ಳತನ ಆರೋಪ ಕೇಳಿ ಬರುತ್ತಿದೆ. ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷವೊಂದು ಮತಗಳ್ಳತನ ಮಾಡುತ್ತಿದೆ. ಇದಕ್ಕೆ ಕೊಪ್ಪ ತಾಲೂಕಿನಲ್ಲಿ 243 ಅರ್ಹ ಮತದಾರರ ಹೆಸರು ಡಿಲೀಟ್‌ಗೆ ಫಾರಂ-7 ಅರ್ಜಿ ಸಲ್ಲಿಸಿರುವ ಘಟನೆ ಸಾಕ್ಷಿಯಾಗಿದೆ. 243 ಮತದಾರರು ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯದವರಾಗಿದ್ದಾರೆ. ಈ ಎಲ್ಲ ಮತದಾರರು ಹಾಲಿ ವಾಸ ಸ್ಥಳದ ನಿವಾಸಿಗಳಾಗಿದ್ದು, ಬೇರೆ ಎಲ್ಲೂ ಮತದಾನದ ಚೀಟಿ ಹೊಂದಿಲ್ಲ. ಇದನ್ನು ಖುದ್ದು ಪರಿಶೀಲಿಸಿ ಖಾತ್ರಿಪಡಿಸಿಕೊಂಡಿದ್ದೇವೆ.

-ಇಸ್ಮಾಯೀಲ್ ಸುಲ್ತಾನ್, ಪ್ರಧಾನ ಕಾರ್ಯದರ್ಶಿ ಸಂಯುಕ್ತ ಮುಸ್ಲಿಮ್ ಜಮಾಅತ್ ಕೊಪ್ಪ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್.ಶಿವು

contributor